ಕೆಂಪೇಗೌಡರ ಆಡಳಿತ, ನಿಮ್ಮ 'ಜನಪರ ಸರ್ಕಾರ'ಕ್ಕೆ ಆದರ್ಶ: ಡಿ.ಕೆ ಶಿವಕುಮಾರ್ ಹೇಳಿದ್ದೇನು ?
ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು 27ನೇ ಜೂನ್ 2025ರ (ಶುಕ್ರವಾರ) ಆಚರಿಸಲಾಗುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಬಿಎಂಪಿ) ಮಟ್ಟದ ಕಾರ್ಯಕ್ರಮವನ್ನು ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿರುವ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಕೆಂಪೇಗೌಡರ ಆಡಳಿತ, ನಿಮ್ಮ 'ಜನಪರ ಸರ್ಕಾರ'ಕ್ಕೆ ಆದರ್ಶ ಎಂದು ಹೇಳಿರುವ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು, ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ನಮ್ಮ ಸರ್ಕಾರ ನಿರ್ಧರಿಸಿದ್ದು, ಜೂನ್ 27ರಂದು ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಬನ್ನಿ, ಧರ್ಮವೀರ ಕೆಂಪೇಗೌಡರಿಗೆ ನಾವೆಲ್ಲರೂ ಸೇರಿ ಗೌರವವನ್ನು ಸಲ್ಲಿಸೋಣ, ಅವರ ಕೊಡುಗೆಗಳನ್ನು ಸ್ಮರಿಸೋಣ ಎಂದಿದ್ದಾರೆ.
7 ಸ್ಥಳಗಳಿಂದ ಪುರ ಜ್ಯೋತಿಗಳು: ಕೆಂಪೇಗೌಡರ ಜಯಂತಿಯ ದಿನ ಬೆಳಗ್ಗೆ 7ಗಂಟೆಗೆ ನಗರದ ನಾಲ್ಕು ದಿಕ್ಕುಗಳಲ್ಲಿರುವ (ಲಾಲ್‌ಬಾಗ್, ಮೇಕ್ರಿ ವೃತ್ತ, ಕೆಂಪಾಂಬುದಿ ಕೆರೆ ಹಾಗೂ ಹಲಸೂರು) ಗಡಿ ಗೋಪುರಗಳಿಂದ ಹಾಗೂ 3 ಐತಿಹಾಸಿಕ ಸ್ಥಳಗಳಾದ ಮಾಗಡಿ ತಾಲ್ಲೂಕಿನ ಕೆಂಪಾಪುರ, ದೇವನಹಳ್ಳಿ ತಾಲ್ಲೂಕಿನಲ್ಲಿರುವ ಆವತಿ ಹಾಗೂ ಕುಣಿಗಲ್ ತಾಲ್ಲೂಕಿನ ಹುತ್ತರಿ ದುರ್ಗ ಸೇರಿದಂತೆ ಒಟ್ಟು 7 ಸ್ಥಳಗಳಿಂದ ಸಚಿವರುಗಳ ನೇತೃತ್ವದಲ್ಲಿ ಪುರ ಜ್ಯೋತಿಗಳು ಹೊರಟು, ಸುಮ್ಮನಹಳ್ಳಿ ವೃತ್ತದ ಬಳಿಯ ಹೊರವರ್ತುಲ ರಸ್ತೆ(ಮಾಗಡಿ ರಸ್ತೆ)ಯಲ್ಲಿ ಕೆಂಪೇಗೌಡ ಭವನದ ನಿರ್ಮಾಣ ಸ್ಥಳಕ್ಕೆ 7 ಪುರ ಜ್ಯೋತಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೆಂಪೇಗೌಡ ಭವನ ನಿರ್ಮಾಣದ ಶಂಕುಸ್ಥಾಪನೆ: ಬೆಂಗಳೂರು ನಗರ ಸುಮ್ಮನಹಳ್ಳಿ ವೃತ್ತದ ಬಳಿಯ ಹೊರವರ್ತುಲ ರಸ್ತೆ(ಮಾಗಡಿ ರಸ್ತೆ)ಯಲ್ಲಿ ಕೆಂಪೇಗೌಡ ಭವನದ ನಿರ್ಮಾಣ ಸ್ಥಳಕ್ಕೆ ಬೆಳಗ್ಗೆ 11ಗಂಟೆ ಸುಮಾರಿಗೆ 7 ಸ್ಥಳಗಳ ಪುರ ಜ್ಯೋತಿಗಳನ್ನು ಸ್ವೀಕರಿಸಲಾಗುತ್ತದೆ. ಇದಾದ ಬಳಿಕ ಮಧ್ಯಾಹ್ನ 12.15 ಕ್ಕೆ ಕೆಂಪೇಗೌಡ ಭವನ ನಿರ್ಮಾಣದ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮಠಾಧೀಶರುಗಳು, ಸಚಿವರುಗಳು, ಶಾಸಕರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ರಾಜ್ಯ ಮಟ್ಟದ ಕಾರ್ಯಕ್ರಮ: ಸುಮ್ಮನಹಳ್ಳಿ ಬಳಿಯಿರುವ ಡಾ. ಬಾಬು ಜಗಜೀವನ್ ರಾಂ ಭವನದಲ್ಲಿ ರಾಜ್ಯಮಟ್ಟದ ವೇದಿಕೆ ಕಾರ್ಯಕ್ರಮವು ಮಧ್ಯಾಹ್ನ 12.30ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಮಟ್ಟದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಬಿಬಿಎಂಪಿ ಮಟ್ಟದ ಕಾರ್ಯಕ್ರಮ: ಬಿಬಿಎಂಪಿ ಮಟ್ಟದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮವು ಸಂಜೆ 4.30 ರಿಂದ 6.00 ಗಂಟೆಯವರೆಗೆ ನಡೆಯಲಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ಸಂಜೆ 6ಗಂಟೆಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಹಾಗೂ ಉತ್ತಮ ಅಧಿಕಾರಿ ನೌಕಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಬಿಎಂಪಿ)ದ ಆಡಳಿತ ವಿಭಾಗದ ವಿಶೇಷ ಆಯುಕ್ತ ನವೀನ್ ಕುಮಾರ್ ರಾಜು ಅವರು ತಿಳಿಸಿದ್ದಾರೆ.












Click it and Unblock the Notifications