ಪಾಸ್‌ಪೋರ್ಟ್‌ನಲ್ಲಿ ಕನ್ನಡ ಭಾಷೆ ಬಳಕೆಗೆ ಸೂಚನೆ
ಬೆಂಗಳೂರು, ಮಾರ್ಚ್ 22: ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಎಂಬ ನಿಯಮದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಈಗಾಗಲೇ ಸೈನ್ ಬೋರ್ಡ್ ಗಳನ್ನು ಕನ್ನಡದಲ್ಲೇ ಬಳಸಲಾಗುತ್ತಿದೆ.
ಇದೀಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಭಾಷೆ ಬಳಕೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ವ್ಯಕ್ತವಾಗಿರುವ ಪ್ರತಿಕ್ರಿಯೆಯಿಂದ ಉತ್ತೇಜಿತಗೊಂಡು, ಇನ್ನುಮುಂದೆ ಪಾಸ್‌ಪೋರ್ಟ್‌ಗಳ ಮೇಲೂ ಕೂಡ ಕನ್ನಡ ಮುದ್ರಿಸಬೇಕೆಂಬ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಈ ಕುರಿತು ಪ್ರಾದೇಶಿಕ ಪಾಸ್‌ಪೋರ್ಟ್ ಕೇಂದ್ರಕ್ಕೆ ಪತ್ರ ಬರೆದಿದ್ದು, ಇನ್ನುಮುಂದೆ ಪಾಸ್‌ಪೋರ್ಟ್ ನಲ್ಲಿ ಕನ್ನಡ ಭಾಷೆಯಲ್ಲೂ ಮುದ್ರಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಪಾಸ್‌ಪೋರ್ಟ್‌ನ ಮುಖಪುಟ ಹಾಗೂ ವ್ಯಕ್ತಿಯ ವಿವರಗಳಿರುವ ಕೊನೆಯಪುಟದಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಮೂರೂ ಭಾಷೆಗಳನ್ನು ಒಳಗೊಂಡ ಮಾಹಿತಿಯನ್ನು ಮುದ್ರಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಸೂಚನೆ ನೀಡಿದೆ.
ಪಾಸ್‌ಪೋರ್ಟ್ ಒಬ್ಬ ವ್ಯಕ್ತಿ ದೇಶದಿಂದ ವಿದೇಶಕ್ಕೆ ಹೋಗಬೇಕಾದರೆ ಅಧಿಕೃತ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಪಾಸ್‌ಪೋರ್ಟ್ ನ ಭಾಷೆ ಇಂಗ್ಲಿಷ್ ಆಗಿರುವುದರಿಂದ ಭಾರತದಲ್ಲೂ ಕೂಡ ಆಡಳಿತ ಭಾಷೆ ಇಂಗ್ಲಿಷ್ ರಾಷ್ಟ್ರೀಯ ಭಾಷೆ ಹಿಂದಿಯನ್ನು ಮುದ್ರಿಸಲಾಗುತ್ತಿದೆ.
ಆದರೆ ಇದೀಗ ಕನ್ನಡದಲ್ಲೂ ಮುದ್ರಿಸಬೇಕೆಂಬ ನಿಯಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ನೀಡಿದೆ. ಪ್ರೊ. ಸಿದ್ದರಾಮಯ್ಯ ಹೇಳುವ ಪ್ರಕಾರ ಪಾಸ್‌ಪೋರ್ಟ್ ಮೇಲೆ ಹಿಂದಿ ಹಾಗೂ ಇಂಗ್ಲಿಷ್ ಇರಬಹುದಾದರೂ ವಿದೇಶಗಳ ಅನೇಕ ಪಾಸ್‌ಪೋರ್ಟ್‌ಗಳಲ್ಲಿ ಅಲ್ಲಿಯ ಸ್ಥಳೀಯ ಭಾಷೆಗಳನ್ನು ಮುದ್ರಿಸಲಾಗುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಹೀಗಾಗಿ ಕರ್ನಾಟಕ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ವಿತರಿಸಲಾಗುವ ವ್ಯಕ್ತಿಗಳಿಗೆ ನೀಡುವ ಪಾಸ್‌ಪೋರ್ಟ್ ನಲ್ಲಿ ಕನ್ನಡವನ್ನು ಕಡ್ಡಾಯವಾಗಿ ಮುದ್ರಿಸಬೇಕೆಂಬ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications