ಕರ್ನಾಟಕದ ಮೊದಲ ಸುರಂಗ ಅಕ್ವೇರಿಯಂ ಬೆಂಗಳೂರಲ್ಲಿ ನಿರ್ಮಾಣ
ಬೆಂಗಳೂರು ಜು. 4 : ಬೆಂಗಳೂರಿನ ಉದ್ಯಾನಗಳಲ್ಲಿ ಹೆಚ್ಚು ಜನರನ್ನು ಸೆಳೆಯುವ ಕಬ್ಬನ್ ಉದ್ಯಾನದಲ್ಲಿ ಕರ್ನಾಟಕದ ಮೊದಲ ಸುರಂಗ ಅಕ್ವೇರಿಯಂ ನಿರ್ಮಾಣವಾಗಲಿದೆ.
ಈಗಾಗಲೇ ಕಬ್ಬನ್ ಉದ್ಯಾನದಲ್ಲಿರುವ ಸುಮಾರು 38 ವರ್ಷಗಳಷ್ಟು ಹಳೆಯದಾದ ಅಕ್ವೇರಿಯಂ ಸಮಗ್ರವಾಗಿ ಅಭಿವೃದ್ಧಿ ಆಗಲಿದೆ. ಇಲ್ಲಿನ ಮತ್ಯ್ಸಾಲಯಕ್ಕೆ ಹೊಸ ರೂಪ ಸಿಗಲಿದ್ದು, ಬೃಹದಾಕಾರವಾಗಿ ಅಭಿವೃದ್ಧಿ ಆಗಲಿದೆ.
1983ರಲ್ಲಿ ನಿರ್ಮಾಣವಾಗಿದ್ದ ಈ ಮತ್ಸ್ಯಾಲಯವನ್ನು ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ದಡಿ ನವೀಕರಿಸಲು ಬಂದರು ಮತ್ತು ಮೀನುಗಾರಿಕೆ ಇಲಾಖೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ವಾರ್ಷಿಕವಾಗಿ ಈ ಮತ್ಸ್ಯಾಲಯಕ್ಕೆ 1.20ಲಕ್ಷ ಮಂದಿ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಾರೆ. ಅದನ್ನು ಇನ್ನಷ್ಟು ಸುಂದರಗೊಳಿಸಲು ಆಧುನಿಕ ರೀತಿಯಲ್ಲಿ ಸುರಂಗ ಮಾದರಿಯ ಉದ್ದನೆಯ ಅಕ್ವೇರಿಯಂ ನಿರ್ಮಾಣಕ್ಕೆ ಮೀನುಗಾರಿಕೆ ಇಲಾಖೆ ಮುಂದಾಗಿದೆ.
ಇಲಾಖೆಯ ಯೋಜನೆಗೆ ಬೆಂಗಳೂರು ಮೂಲದ ಏಜೆನ್ಸಿಯೊಂದು ನವೀಕರಣಕ್ಕೆ ಕೈ ಜೋಡಿಸಿದೆ. ಈ ಕಾರ್ಯಕ್ಕೆ ಜುಲೈ 4 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೇರವೇರಿಸಲಿದ್ದಾರೆ.
ಬೆಂಗಳೂರಿನ ಆಕರ್ಷಣೆಗಳಲ್ಲಿ ಒಂದಾಗಿರುವ ಕಬ್ಬನ್ ಉದ್ಯಾನಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಮಹಿಳೆಯರು, ವಿದ್ಯಾರ್ಥಿಗಳು, ಮಕ್ಕಳು ಸೇರಿದಂತೆ ಸಾರ್ವಜನಿಕರು ಭೇಟಿ ನೀಡುತ್ತಾರೆ. ಮತ್ಸ್ಯಾಲಯಕ್ಕೆ ವಾರ್ಷಿಕ 1.20 ಲಕ್ಷ ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಉದ್ಯಾನಕ್ಕೆ ವಾರ್ಷಿಕ 12 ಲಕ್ಷ ರೂ.ಆದಾಯವು ಬರುತ್ತದೆ. ಇದೀಗ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಉದ್ಯಾನ ಸಜ್ಜಾಗಿದೆ.

15 ಕೋಟಿ ರೂ. ನಲ್ಲಿ ಮತ್ಸ್ಯಾಲಯ ಅಭಿವೃದ್ಧಿ: ಮತ್ಯ್ಸಾಲಯಕ್ಕೆ ಆಧುನಿಕ ಸ್ಪರ್ಶ ನೀಡಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಬೊಲೋ ಅಕ್ವಾ ಸ್ಟೇಡಿಯಂ ಎಂಬ ಬೆಂಗಳೂರಿನ ಖಾಸಗಿ ಸಂಸ್ಥೆ ಟೆಂಡರ್ ಪಡೆದುಕೊಂಡಿದೆ. ಒಟ್ಟು 15 ಕೋಟಿ ರೂಪಾಯಿಯಲ್ಲಿ ಮತ್ಯ್ಸಾಲಯ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಕುರಿತು ಪಿಪಿಪಿ ಪಾಲುದಾರ ಅಕ್ವಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಎಸ್. ನಂದಕುಮಾರ್ ಮಾತನಾಡಿ, "ಮತ್ಸ್ಯಾಲಯದ ವಿನ್ಯಾಸ ಬದಲಿಸದೇ ಎರಡು ಅಂತಸ್ತಿನಲ್ಲಿ ವಿವಿಧ ಟ್ಯಾಂಕ್ ಗಳನ್ನು ಇರಿಸಿ ನಿರ್ಮಸಲಾಗುತ್ತಿದೆ. ಇಲ್ಲಿ ಮರೈನ್ ಅಕ್ವೇರಿಯಂ, ಜೆಲ್ಲಿ ಅಕ್ವೇರಿಯಂತ ಹಾಗೂ ಸಿಹಿ ನಿರೀನಲ್ಲಿರುವ ಬಣ್ಣ ಬಣ್ಣದ ಅಲಂಕಾರಿಕ ಸುಮಾರು 150ಕ್ಕೂ ಅಧಿಕ ಮೀನು ತಳಿಗಳು ಪ್ರವಾಸಿಗರನ್ನು ಸೆಳೆಯಲಿದೆ" ಎಂದು ಹೇಳಿದರು.
ಬೃಹತ್ ಅಕ್ವೇರಿಯಂ: 60 ಸಾವಿರ ಲೀಟರ್ ಸಮುದ್ರ ನೀರನ್ನು ಹೊಂದಿರುವ ಅಕ್ವೇರಿಯಂ ನಲ್ಲಿ 30ಕ್ಕೂ ಹೆಚ್ಚು ಬಗೆಯ ವಿಶೇಷವಾದ ಅಕ್ವಾ ಪ್ರಾಣಿಗಳು ಇರಲಿವೆ. ಒಟ್ಟು 24 ಅಡಿ ಉದ್ದದ 10 ಅಡಿ ಅಗಲ ಮತ್ತು 15 ಅಡಿ ಎತ್ತರದ ಅಕ್ವೇರಿಯಂ ಇದಾಗಿರಲಿದೆ. ಸಿಂಗಾಪುರ, ದುಬೈ ಮತ್ತು ಚೀನಾ ಹೊರತುಪಡಿಸಿದರೆ ಇಂತಹ ಸುರಂಗ ಭಾರತದ ಗುಜರಾತಿನಲ್ಲಿದೆ. ಬಿಟ್ಟರೆ ಕರ್ನಾಟಕದಲ್ಲಿ ಮೊದಲ ಬಾರಿ ಇಂಥದ್ದೊಂದು ಅಕ್ವೇರಿಯಂ ನಿರ್ಮಾಣವಾಗುತ್ತಿದೆ.












Click it and Unblock the Notifications