ಸಿ ಟಿ ರವಿ ಅವರೇ ಮೋದಿಗೆ ಕುಡಿಸಿ ಬಿಟ್ರಾ?: ಹೀಗೆಂದು ಕೇಳಿದ್ದು ಯಾರು?
ಬೆಂಗಳೂರು, ಜನವರಿ 3: ಕರ್ನಾಟಕಕ್ಕೆ ನರೇಂದ್ರ ಮೋದಿ ಭೇಟಿ ವಿಚಾರ ಇಲ್ಲಿನ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಬಹುದೊಡ್ಡ ವಾಕ್ಸಮರಕ್ಕೆ ಕಾರಣವಾಗಿದೆ. ಇರ್ವರೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪರಸ್ಪರ ವೈಯಕ್ತಿಕ ತೇಜೋವದೆಗೆ ಇಳಿದಿದ್ದಾರೆ.
ಹೌದು, ಗುರುವಾರ ಕರ್ನಾಟಕ ಕಾಂಗ್ರೆಸ್, ಸಿದ್ದರಾಮಯ್ಯ ಆದಿಯಾಗಿ ಅನೇಕ ಕಾಂಗ್ರೆಸ್ ಮುಖಂಡರು ಹಾಗೂ ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಟ್ವಿಟ್ಟರ್‌ನಲ್ಲಿ ಮೋದಿ ಕರ್ನಾಟಕ ಭೇಟಿ ವಿರೋಧಿಸಿ ಮುಗಿಬಿದ್ದಿದ್ದರು. ಈಗ ಕರ್ನಾಟಕ ಯುವ ಕಾಂಗ್ರೆಸ್ ಘಟಕ ಕೂಡ ಇವತ್ತು ಪ್ರಧಾನಿ ಮೋದಿ ಕರ್ನಾಟಕ ಭೇಟಿ ವೇಳೆ ಸಿದ್ದಗಂಗಾ ಮಠದಲ್ಲಿ ರಾಜಕೀಯ ಮಾತನಾಡಿದ್ದಕ್ಕೆ ವಿರೋಧಿಸಿ, ಸಚಿವ ಸಿ ಟಿ ರವಿ ಅವರ ಕಾಲೆಳದಿದೆ. 'ರೀ ಆಕ್ಸಿಡೆಂಟ್ ಸಿ ಟಿ ರವಿ ಅವರೇ ನಿಮ್ಮ ಪ್ರಧಾನಿಗೆ ಮದ್ಯಪಾನ ಮಾಡೋದು ಕಲಿಸಿ ಬಿಟ್ರಾ? ಬಾಯಿಗೆ ಲಂಗು ಲಗಾಮು ಇಲ್ಲದಂತೆ ಮಾತನಾಡುತ್ತಿದ್ದಾರಲ್ಲ' ಎಂದು ಸಿ ಟಿ ರವಿ ಹಳೇ ಪ್ರಕರಣ ಕೆದಕಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಉತ್ತರ ಕೊಟ್ಟಿರುವ ರಾಜ್ಯ ಬಿಜೆಪಿ, 'ಕುಡಿದು ಬೀದಿಯಲ್ಲಿ ಅಮಾಯಕರನ್ನು ಹೊಡೆಯುವ ಹಾಗೂ ಗಲಭೆ ನಡೆಸುವಲ್ಲಿ ಪ್ರಮುಖ ಪಾತ್ರವಹಿಸುವ ಪಕ್ಷದವರಿಗೆ ಬೇರೆಯವರೂ ಸಹ ಕುಡುಕರಂತೆ ಕಾಣುತ್ತಾರೆ. ಸೋತು ಸುಣ್ಣವಾಗಿದ್ದೀರಿ, ಇನ್ನಾದರೂ ಪುಂಡಾಟಿಕೆ ಹಾಗೂ ಭಂಡತನ ಪ್ರದರ್ಶನ ಮಾಡುವುದನ್ನು ನಿಲ್ಲಿಸಿ, ಜನತೆಯ ಸೇವೆ ಮಾಡಿ. ಭಗವಂತ ನಿಮಗೆ 2020ರಲ್ಲಿ ಒಳ್ಳೆಯ ಬುದ್ದಿ ನೀಡಲಿ' ಎಂದು ಎದಿರೇಟು ನೀಡಿದೆ.

ಕಳೆದ ವರ್ಷ ಫೆಬ್ರುವರಿ 19 ರಂದು ಸಿ ಟಿ ರವಿ ಅವರು ಪ್ರಯಾಣಿಸುತ್ತಿದ್ದ ಕಾರ್ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಊರ್ಕೆಹಳ್ಳಿ ಬಳಿ ಹೋಗುತ್ತಿದ್ದಾಗ ಮೂತ್ರ ವಿಸರ್ಜಿಸಲು ರಸ್ತೆ ಬದಿ ನಿಂತಿದ್ದ ಇಬ್ಬರಿಗೆ ಡಿಕ್ಕಿ ಕೊಡೆದು ಆ ಇಬ್ಬರೂ ಮೃತಪಟ್ಟಿದ್ದರು. ಈ ವೇಳೆ ಸಿ ಟಿ ರವಿ ಮದ್ಯಪಾನ ಮಾಡಿದ್ದರು ಎಂದು ಆರೋಪಿಸಲಾಗಿತ್ತು.












Click it and Unblock the Notifications