Bengaluru Rain: ಬೆಂಗಳೂರಿಗೆ ಮತ್ತೆ ಮಳೆ ಎಚ್ಚರಿಕೆ! ಯಾವಾಗ?
ಬೆಂಗಳೂರು ಜನತೆಗೆ ಈಗಾಗಲೇ ಡಿಸೆಂಬರ್ ಚಳಿ ಅನುಭವಕ್ಕೆ ಬರುತ್ತಿದೆ. ಮಧ್ಯಾಹ್ನವಾದರೂ ಇನ್ನೂ ಚಳಿಯ ಅನುಭವವಾಗುತ್ತಲೇ ಇದೆ. ಚಳಿಯಲ್ಲಿ ನಡುಗಿತ್ತಿರುವ ಬೆಂಗಳೂರಿಗರಿಗೆ ಮತ್ತೆ ಮಳೆಯ ದರ್ಶನ ಸಿಗಲಿದೆ. ಹೌದು, ಬೆಂಗಳೂರಿನಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ. ಡಿಸೆಂಬರ್ 19ರ ನಂತರ ಬೆಂಗಳೂರಿನ ಹಲವು ಕಡೆಗಳಲ್ಲಿ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಳೆ ಸುರಿದರೆ ಚಳಿ ಪ್ರಮಾಣ ಕಡಿಮೆಯಾಗಬಹುದಾದರೂ ಅಕಾಲಿಕ ಮಳೆಯಿಂದ ಆಗುವ ಹಾನಿಯ ಬಗ್ಗೆ ಆತಂಕ ಎದುರಾಗಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ರೈತರ ಬೆಳೆಗಳಿಗೆ ಹಾನಿಯಾಗುವ ಆತಂಕ ಕೂಡ ಎದುರಾಗಿದೆ. ರಾಜ್ಯದಲ್ಲಿ ಚಳಿ ಹೆಚ್ಚಿದ್ದರೂ ಒಣಹವೆ ಇದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸೋಮವಾರ (ಡಿಸೆಂಬರ್ 16) ರಾಜ್ಯಕ್ಕೆ ಯಾವುದೇ ಮಳೆ ಮುನ್ಸೂಚನೆ ನೀಡಿಲ್ಲ. ರಾಜ್ಯಾದ್ಯಂತ ಒಣಹವೆ ಇರಲಿದ್ದು, ಮಂಜು ಮುಸುಕಿದ ವಾತಾವರಣ ಕಂಡುಬರಲಿದೆ ಎಂದು ಹೇಳಿದೆ.
ಚಳಿಗೆ ನಡುಗುತ್ತಿರುವ ಕರ್ನಾಟಕ
ರಾಜ್ಯದಲ್ಲಿ ಚಳಿ ತೀವ್ರವಾಗುತ್ತಿದ್ದು ಜನ ಹೈರಾಣಾಗಿದ್ದಾರೆ. ಬಿಜಾಪುರದಲ್ಲಿ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಬೆಂಗಳೂರಿನ ಎಚ್‌ಎಎಲ್‌ನಲ್ಲಿ 17.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಳಗ್ಗೆ ಬಿಸಿಲಿನ ತೀವ್ರತೆ ಹೆಚ್ಚಿದ್ದರೂ ರಾತ್ರಿಯಾಗುತ್ತಿದ್ದಂತೆ ಚಳಿ ಜನರನ್ನು ನಡುಗಿಸುತ್ತಿದೆ.
ಈ ಬಾರಿ ಚಳಿ ಪ್ರಮಾಣ ತೀವ್ರವಾಗಿರಲಿದೆ ಎಂದು ಹವಾಮಾನ ತಜ್ಞರು ಸೂಚನೆ ಕೊಟ್ಟಿದ್ದಾರೆ. ದೇಶದಲ್ಲಿ ಈ ಬಾರಿ ಮುಂಗಾರು ಮತ್ತು ಹಿಂಗಾರು ಉತ್ತಮವಾಗಿತ್ತು. ಭಾರಿ ಮಳೆಯನ್ನು ಕಂಡಿರುವ ದೇಶದ ವಿವಿಧ ಭಾಗಗಳು ಈಗ ಹೆಚ್ಚಿನ ಚಳಿಯನ್ನು ಅನುಭವಿಸಲಿವೆ ಎಂದು ಹೇಳಲಾಗಿದೆ.
ಭರ್ತಿಯಾಗಿರುವ ಜಲಾಶಯಗಳು
ರಾಜ್ಯದಲ್ಲಿ ಈ ಬಾರಿ ಮುಂಗಾರು ಆರ್ಭಟ ಜೋರಾಗಿದ್ದ ಕಾರಣ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದವು. ಬಳಿಕ ಹಿಂಗಾರು ಕೂಡ ಉತ್ತಮವಾಗಿದ್ದು ಡಿಸೆಂಬರ್ ತಿಂಗಳಾದರೂ ಇನ್ನೂ ಜಲಾಶಯಗಳಿಗೆ ಒಳಹರಿವು ಉತ್ತಮವಾಗಿದೆ. ಕೆಆರ್ ಎಸ್ ಜಲಾಶಯ ಈಗಲೂ ಗರುಷ್ಠ ಪ್ರಮಾಣದಲ್ಲಿ ಭರ್ತಿಯಾಗಿರುವುದು ಈ ಭಾಗದ ರೈತರ ಸಂತಸಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕದ ಆಲಮಟ್ಟಿ, ತುಂಗಭಧ್ರಾ ಜಲಾಶಯಗಳಲ್ಲಿ ಕೂಡ ನೀರು ಹೆಚ್ಚಿದ್ದು, ರೈತರು ಬೆಳೆಗೆ ನೀರು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications