ಚಾಮರಾಜಪೇಟೆ ಈದ್ಗಾ ಮೈದಾನ: ಸುಪ್ರೀಂಕೋರ್ಟಲ್ಲಿ ಆ.30ರಂದು ವಿಚಾರಣೆ
ಬೆಂಗಳೂರು/ನವದೆಹಲಿ, ಆಗಸ್ಟ್ 30: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಸಂಬಂಧ ಅರ್ಜಿಗಳನ್ನು ಪರಿಶೀಲಿಸಿ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಅನುಮತಿ ನೀಡುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಆಗಸ್ಟ್ 31ರಿಂದ ನಿರ್ದಿಷ್ಟ ಅವಧಿಗೆ ನ್ಯಾಯಾಲಯ ಅನುಮತಿ ನೀಡಿದೆ. ಆದರೆ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಕರ್ನಾಟಕ ವಕ್ಫ್ ಮಂಡಳಿ ಮೇಲ್ಮನವಿ ಸಲ್ಲಿಸಿದ್ದು, ಆಗಸ್ಟ್ 30ರಂದು ಅರ್ಜಿ ವಿಚಾರಣೆ ನಡೆಯಲಿದೆ.
ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿರ್ಧಿಷ್ಟ ಅವಧಿಗೆ ಅನುಮತಿಯನ್ನು ನೀಡಬಹುದು, ಹಿಂದು ಹಾಗೂ ಮುಸ್ಲಿಮರು ಧಾರ್ಮಿಕ ಆಚರಣೆಗೆ ನಿರ್ಧಿಷ್ಟ ಅವಧಿಗೆ ಮೈದಾನ ಬಳಸಲು ರಾಜ್ಯ ಸರ್ಕಾರ ಅನುಮತಿಸಬಹುದು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಚಾಮರಾಜಪೇಟೆ ಆಟದ ಮೈದಾನ ಕಂದಾಯ ಇಲಾಖೆಗೆ ಸೇರಿದ್ದ ಎಂದು ಬಿಬಿಎಂಪಿ ತಿಳಿಸಿದ ಮೇಲೆ ಮೈದಾನವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಸುಪರ್ಧಿಗೆ ಪಡೆದಿತ್ತು. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಕಂದಾಯ ಇಲಾಲೆಯ ಅಧಿಕಾರಿಗಳ ಭಾರಿ ಭದ್ರತೆಯಲ್ಲಿ ನಡೆಸಿತ್ತು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು ಲಲಿತ್ ಹಾಗೂ ನ್ಯಾಯಮೂರ್ತಿ ಎಸ್ ರವೀಂದ್ರ ಅವರನ್ನೊಳಗೊಂಡ ದ್ವಿಸದಸ್ಯ ಪೀಠದ ಎದುರು ಆಗಸ್ಟ್ 30ರಂದು ಅರ್ಜಿ ವಿಚಾರಣೆಗೆ ಬರಲಿದೆ. ಆಗಸ್ಟ್ 31ರಂದು ಗಣೇಶ ಹಬ್ಬ ಇರುವುದರಿಂದ ಈ ವಿಚಾರವನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸುವಂತೆ ಹಿರಿಯ ವಕೀಲ ಕಪಿಲ್ ಸಿಬಲ್ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ನ್ಯಾಯಪೀಠವು ವಿಚಾರಣೆಗೆ ಸಮ್ಮತಿಸಿದೆ.
'ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿ, ಹಬ್ಬ ಆಚರಿಸಲು ಅನುಮತಿ ಕೋರಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಪುರಸ್ಕರಿಸಿದೆ. ಆದರೆ, ಕಳೆದ ಆರು ದಶಕಗಳಿಂದ ಮುಸ್ಲಿಮರು ಈ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈ ಮೈದಾನದ ಬಳಕೆ ಬಗ್ಗೆ ಸೂಕ್ತ ಮಾರ್ಗಸೂಚಿಯನ್ನು ಸರ್ಕಾರ ಪ್ರಕಟಿಸಿಲ್ಲ, ಸರಿಯಾದ ನಿರ್ಧಾರ ಕೈಗೊಳ್ಳದಿದ್ದರೆ ಅನಗತ್ಯವಾಗಿ ಉದ್ವಿಗ್ನ ಪರಿಸ್ಥಿತಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ' ಎಂದು ವಕ್ಫ್ ಮಂಡಳಿ ಪರ ಕಪಿಲ್ ಸಿಬಲ್ ವಾದಿಸಿದರು.
ಕಂದಾಯ ಇಲಾಖೆಗೆ ಸೇರಿದ ಮೈದಾನ
ರಾಜ್ಯ ವಕ್ಫ್ ಮಂಡಳಿ ಚಾಮರಾಜಪೇಟೆಯ ಆಟದ ಮೈದಾನದ ಮಾಲೀಕತ್ವವು ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಆ.6ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜಂಟಿ ಆಯುಕ್ತರಿಗೆ ಚಾಮರಾಜಪೇಟೆಯ ಈದ್ಗಾ ಮೈದಾನದ ಮಾಲೀಕತ್ವ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲ ಎಂದು ವಕ್ಫ್ ಮಂಡಳಿ ಆಕ್ಷೇಪ ಎತ್ತಿದೆ.

ನ್ಯಾ.ಹೇಮಂತ್ ಚಂದನ್ ಗೌಡರ್ ಅವರಿದ್ದ ಹೈಕೋರ್ಟ್ ಏಕಸದಸ್ಯಪೀಠವು ಮೈದಾನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಆ.25ರ ಆದೇಶ ಮಾಡಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿತ್ತು. ರಂಜಾನ್, ಬಕ್ರೀದ್ ವೇಳೆ ಮಾತ್ರ ಪ್ರಾರ್ಥನೆಗೆ ಬಳಸಬಹುದು ಎಂದು ಆದೇಶ ನೀಡಿ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿದೆ
ಚಾಮರಾಜಪೇಟೆಯ ಆಟದ ಮೈದಾನ (2.5 ಎಕರೆ) ಆಸ್ತಿಯನ್ನು ಖಾತೆಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ವಕ್ಫ್ ಮಂಡಳಿ ಕಳೆದ ಜೂ. 21ರಂದು ಪಾಲಿಕೆಗೆ ಅರ್ಜಿ ಸಲ್ಲಿಸಲಾಗಿತ್ತು. ಆ.3 ರಂದು ಪಶ್ವಿಮ ವಲಯ ಜಂಟಿ ಆಯುಕ್ತರ ಅರೆ ನ್ಯಾಯಿಕ ಮಂಡಳಿಯಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ವಕ್ಫ್ ಮಂಡಳಿಯು ಚಾಮರಾಜಪೇಟೆ ಆಟದ ಮೈದಾನದ ಮಾಲೀಕತ್ವ ಸಾಬೀತು ಪಡಿಸುವ ದಾಖಲೆ ಸಲ್ಲಿಸುವಲ್ಲಿ ವಿಫಲವಾಗಿದೆ ಎಂದ ತಿಳಿಸಿದ್ದ ಜಂಟಿ ಆಯುಕ್ತರು ಅರ್ಜಿ ವಜಾಗೊಳಿಸಿ ಆ.6ರಂದು ಆದೇಶಿಸಿದ್ದರು.
'1965 ರಲ್ಲೂ ಸರ್ಕಾರ ಸರ್ವೆ ನಡೆಸಿತ್ತು ಯಾರೂ ಆಕ್ಷೇಪಿಸಿರಲಿಲ್ಲ, 57 ವರ್ಷಗಳಿಂದಲೂ ಆಸ್ತಿ ಸರ್ಕಾರದ ಹೆಸರಿನಲ್ಲಿದೆ' ಎಂದು ಎಜಿ ಪ್ರಭುಲಿಂಗ ನಾವದಗಿ ಸಮರ್ಥಿಸಿಕೊಂಡಿದ್ದಾರೆ.
ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡಬೇಕು ಅಂತ ಹಿಂದೂ ಸನಾತನ ಪರಿಷತ್ ಬಿಬಿಎಂಪಿಗೆ ಮನವಿ ನೀಡಿತ್ತು. ಅದೇ ರೀತಿ ಶ್ರೀರಾಮ ಸೇನೆ ಕೂಡಾ ಹಿಂದೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮ ಗಳ ಜೊತೆ ಗಣೇಶೋತ್ಸವಕ್ಕೂ ಅವಕಾಶ ನೀಡಿ ಅದರ ಜೊತೆ ಯೋಗದಿನಾಚರಣೆಗೂ ಅವಕಾಶ ನೀಡಬೇಕು ಎಂದು ಮನವಿ ಮಾಡುತ್ತಿದೆ.












Click it and Unblock the Notifications