KSRTC: ಮತ್ತೊಂದು ವಿಶ್ವ ದಾಖಲೆ ಬರೆದ ಕರ್ನಾಟಕದ "ಶಕ್ತಿ ಯೋಜನೆ': ರಾಮಲಿಂಗಾ ರೆಡ್ಡಿ
ಬೆಂಗಳೂರು, ಅಕ್ಟೋಬರ್ 01: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಮೊದಲ ಭರವಸೆಯ ಯೋಜನೆ ಅದು ಶಕ್ತಿ ಯೋಜನೆ. ಮಹಿಳಾ ಸಬಲೀಕರಣದೆಡೆಗಿನ ಮಹತ್ವಾಕಾಂಕ್ಷೆಯ ಈ ಯೋಜನೆಯಡಿ 500 ಕೋಟಿ ಮಹಿಳಾ ಟಿಕೇಟ್ ಉಚಿತ ಪ್ರಯಾಣ ನೀಡಿ ದಾಖಲೆ ಬರೆದಿತ್ತು. ಇದೀಗ ಶಕ್ತಿ ಯೋಜನೆ ವಿಶ್ವ ದಾಖಲೆ ಗೆ ಸೇರ್ಪಡೆಯಾಗಿದೆ. ಇದಕ್ಕೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಧನ್ಯವಾದ ತಿಳಿಸಿದ್ದಾರೆ.
ಈಗಾಗಲೇ Golden Book of World Records ನಲ್ಲಿ ಸೇರ್ಪಡೆಯಾಗಿತ್ತು. ಇದೀಗ International Book of Records - World Record of Excellence ಗೆ ಶಕ್ತಿ ಯೋಜನೆಯು ಸೇರ್ಪಡೆ ಆಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಯೋಜನೆ ಯಶಸ್ವಿ ಅನುಷ್ಠಾನಕ್ಕೆ, ಹೊಸ ದಾಖಲೆ ಬರೆಯಲು ಕಾರಣರಾದ 04 ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಮಸ್ತ ಅಧಿಕಾರಿ/ ಸಿಬ್ಬಂದಿಗಳಿಗೆ ಹಾಗೂ ಕಾರ್ಮಿಕ ಮುಖಂಡರುಗಳ ಕಾರ್ಯವನ್ನು ರಾಮಲಿಂಗಾ ರೆಡ್ಡಿ ಶ್ಲಾಘಿಸಿದ್ದಾರೆ.

ಶಕ್ತಿ ಯೋಜನೆಯು ರಾಜ್ಯದ ಮಹಿಳೆಯರನ್ನು ಆರ್ಥಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಸಬಲರನ್ನಾಗಿಸಿದೆ. ಶಕ್ತಿ ಯೋಜನೆಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿರುವುದು ಶಕ್ತಿ ಯೋಜನೆಯ ಯಶಸ್ಸನ್ನು ಬಿಂಬಿಸಿದೆ. ಇದರೊಂದಿಗೆ ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಮಾನ್ಯ ಸಾರಿಗೆ ಸಚಿವರು ತಿಳಿಸಿದ್ದಾರೆ. ಮಹಿಳಾ ಪ್ರಯಾಣಿಕರಿಗೂ ಸಚಿವರು ಅಭಿನಂದನೆ ತಿಳಿಸಿದ್ದಾರೆ.
ಪ್ರಹ್ಲಾದ್ ಜೋಶಿಗೆ ರಾಮಲಿಂಗಾ ರೆಡ್ಡಿ ತಿರುಗೇಟು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರತಿವರ್ಷ ದಸರಾ ಹಾಗೂ ಇತರೆ ವಿಶೇಷ ಸಂದರ್ಭಗಳಲ್ಲಿ ಕಳೆದ 20 ವರ್ಷಗಳಿಂದ ದರ ಏರಿಕೆಯನ್ನು ಅನುಷ್ಠಾನಗೊಳಿಸುತ್ತಾ ಬಂದಿದೆ. ಆಂದರೆ ನೀವು ಹೇಳುತ್ತಿರುವ ಮಹಿಷಾಸುರ ಟ್ಯಾಕ್ಸ್ ಅನ್ನು ತಮ್ಮ ಪಕ್ಷ ಸಹ ಬಿಜೆಪಿ ಅಧಿಕಾರದಲ್ಲಿದ್ದಾಗ ಜಾರಿ ಮಾಡಿದ್ದೀರಲ್ಲ ಅದಕ್ಕೆ ತಮ್ಮ ಉತ್ತರವೇನು? ಮಾಹಿತಿ ಕೊರತೆ ಇದ್ದರೆ ಸಮರ್ಪಕವಾದ ಮಾಹಿತಿ ಪಡೆದು ಮಾತನಾಡಿ, ತಾವು ತಮ್ಮ ಸ್ಥಾನದ ಗೌರವವನ್ನಾದರೂ ಕಾಪಾಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದರು.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ತಾವು ಜನಗಳ ಮೇಲೆ 2017-2025 ರವರೆಗೆ ಸತತ 8 ವರ್ಷಗಳ ಕಾಲ GST ಹೆಸರಿನಲ್ಲಿ ಟ್ಯಾಕ್ಸ್ ಹಾಕಿ ಜನರ ರಕ್ತ ಹೀರಿದಿರಿ . ಅದನ್ನು ಬ್ರಹ್ಮರಾಕ್ಷಸ ಟ್ಯಾಕ್ಸ್ ಅಂತ ಕರೆಯಬಹುದೇ? GST ಟ್ಯಾಕ್ಸ್ ಮೂಲಕ ಅಮಾಯಕ ಜನರಿಂದ ವರ್ಷಗಳ ಕಾಲ ಸುಲಿಗೆ ಮಾಡಿದ್ದು ಮರೆತು ಬಿಟ್ಟಿರಾ? ಇದಕ್ಕಾಗಿ ಕೇಂದ್ರ ಸರ್ಕಾರ, ಬಿಜೆಪಿ ಪಕ್ಷ ಮತ್ತು ಅದರ ನಾಯಕರು ದೇಶದ ಜನರ ಕ್ಷಮೆ ಕೋರಬಾರದೇ? ಎಂದು ಪ್ರಶ್ನಿಸಿದ್ದಾರೆ.
ಈಗ GST ಟ್ಯಾಕ್ಸ್ ಕಡಿಮೆ ಮಾಡಿ, ಸಂಭ್ರಮ ಆಚರಣೆ ಮಾಡುವ ಮೂಲಕ ಪ್ರಚಾರ ಪಡೆಯುವ ತಮ್ಮ ನೈತಿಕತೆಯ ಬಗ್ಗೆ ಹೇಳಲಿಕ್ಕೆ ಪದಗಳು ಸಾಲದಾಗಿದೆ. ತಾವು ಇಲ್ಲಸಲ್ಲದ ಮಾಹಿತಿಯನ್ನು ಅಪಪ್ರಚಾರ ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯುವ ದುಸ್ಸಾಹಸಕ್ಕೆ ಇನ್ನಾದರೂ ಪೂರ್ಣವಿರಾಮ ಹಾಕುವಿರಾ? ಎಂದು ಗುಡುಗಿದ್ದಾರೆ.












Click it and Unblock the Notifications