ಕನ್ನಡ ಭಾಷೆಗಾಗಿ ರಸ್ತೆಗಿಳಿದ ಕರವೇ: ಬೆಂಗಳೂರಿನಲ್ಲಿ ಹೋಟೆಲ್ ಬೋರ್ಡ್ ಧ್ವಂಸ
ಬೆಂಗಳೂರು, ಡಿಸೆಂಬರ್ 27: ಎಲ್ಲ ಅಂಗಡಿ ಮುಗ್ಗಟ್ಟು, ಮಾಲ್‌ಗಳಲ್ಲಿ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಕನ್ನಡ ನಾಮಫಲಕ ಇಲ್ಲದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಬೋರ್ಡ್‌ನ್ನು ಧ್ವಂಸಗೊಳಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಪೊಲೀಸರು ಹಲವಾರು ಕಾರ್ಯಕರ್ತರನ್ನು ಬಸ್‌ನಲ್ಲಿ ತುಂಬಿಸಿಕೊಂಡು ಹೋದರು.

ಕನ್ನಡ ಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆಯು ಬುಧವಾರ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಕನ್ನಡದಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸುವಂತೆ ಒತ್ತಾಯಿಸಿ ಬೆಂಗಳೂರಿನ ರಸ್ತೆಗಳಲ್ಲಿ ಇಂಗ್ಲಿಷ್ ಪೋಸ್ಟರ್‌ಗಳನ್ನು ಈ ಗುಂಪು ಹರಿದು ಹಾಕಿತು.
ಬೆಂಗಳೂರಿನ ವಾಣಿಜ್ಯ ಸಂಸ್ಥೆಗಳು ಫೆಬ್ರವರಿ 28, 2024 ರೊಳಗೆ ತಮ್ಮ ನಾಮಫಲಕದಲ್ಲಿ ಶೇಕಡಾ 60 ರಷ್ಟು ಕನ್ನಡವನ್ನು ಬಳಸಬೇಕೆಂದು ಬಿಬಿಎಂಪಿಯ ಆದೇಶದ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಕನ್ನಡ ಬಳಸದ ಸಂಸ್ಥೆಗಳ ವಿರುದ್ಧ ಟ್ರೇಡ್ ಲೈಸೆನ್ಸ್ ಕಳೆದುಕೊಂಡು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಚ್ಚರಿಸಿದೆ.
ಆದರೆ, ಅನೇಕ ವ್ಯಾಪಾರಿಗಳು ಈ ನಿಯಮದ ಬಗ್ಗೆ ತಿಳಿದಿಲ್ಲ, ಆದ್ದರಿಂದ ಅದನ್ನು ಪಾಲಿಸುತ್ತಿಲ್ಲ ಎಂದು ಹೇಳಿದರು. ಎಲ್ಲ ವ್ಯಾಪಾರಸ್ಥರು ನಾಮಫಲಕಗಳನ್ನು ಶೇಕಡ 60ರಷ್ಟು ಕನ್ನಡದಲ್ಲಿ ಹಾಕುವಂತೆ ಸೂಚಿಸಿರುವ ಬಿಬಿಎಂಪಿ ಆದೇಶವನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬಿಬಿಎಂಪಿ ಮುಖ್ಯಸ್ಥ ತುಷಾರ್ ಗಿರಿ ನಾಥ್, ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳು ಕನ್ನಡ ನಾಮಫಲಕವನ್ನು ಅಳವಡಿಸಲು ಫೆಬ್ರವರಿ 28 ರವರೆಗೆ ಕಾಲಾವಕಾಶ ನೀಡಿದ್ದು, ಇಲ್ಲದಿದ್ದರೆ ಅವರು ವ್ಯಾಪಾರ ಪರವಾನಗಿಗಳನ್ನು ಅಮಾನತುಗೊಳಿಸುವುದು ಸೇರಿದಂತೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕರವೆ ಕಾರ್ಯಕರ್ತರು ದೇವನಹಳ್ಳಿ ಬಳಿ, ಲ್ಯಾವೆಲ್ಲಿ ರಸ್ತೆಯಲ್ಲಿ, ಯುಬಿ ಸಿಟಿ ಬಳಿ ಹಲವು ಇಂಗ್ಲಿಷ್ ನಾಮಫಲಕಗಳಿಗೆ ಕಪ್ಪು ಮಸಿ ಬಳಿದರು. ಅಲ್ಲದೆ ಹಲವು ನಾಮಫಲಕಗಳನ್ನು ಪುಡಿಪುಡಿ ಮಾಡಿದರು. ಈ ವೇಳೆ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
ಈ ವೇಳೆ ಮಾತನಾಡಿದ ನಾರಾಯಣಗೌಡ, ಸರ್ಕಾರದ ಬಳಿ ನಾವು ಅಂಗಲಾಚುವ ಪ್ರಶ್ನೆಯೇ ಇಲ್ಲ. ಪ್ರತಿಭಟನೆ ಹತ್ತಿಕ್ಕಲು ಮುಂದಾದರೆ ಪರಿಣಾಮ ಎದುರಿಸಬೇಕಾಗುತ್ತದೆ. ನಮ್ಮ ಶಕ್ತಿಯನ್ನು ಲೋಕಸಭಾ ಚುನಾವಣೆಯಲ್ಲಿ ತೋರಿಸುತ್ತೇವೆ, ಕನ್ನಡ ಬಳಕೆಯನ್ನು ಎಲ್ಲರೂ ಮಾಡಲೇಬೇಕು ಎಂದು ಒತ್ತಾಯಿಸಿದರು.












Click it and Unblock the Notifications