Karnataka Rain: 'ರೆಡ್'ನಿಂದ 'ಯೆಲ್ಲೋ' ಅಲರ್ಟ್‌ಗೆ ಮರಳಿದ ಕರಾವಳಿ, 6 ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ
ಬೆಂಗಳೂರು, ಜೂನ್ 30: ಕರ್ನಾಟಕ ರಾಜ್ಯದಲ್ಲಿ ಒಂದು ವಾರದಿಂದ ಆರ್ಭಟಿಸಿದ್ದ ಮುಂಗಾರು ಮಳೆ ಇನ್ನೂ ಕೆಲವೆಡೆ ಸಕ್ರಿಯವಾಗಿದೆ. ಅರ್ಧ ರಾಜ್ಯದಲ್ಲಿ ಸಾಧಾರಣದಿಂದ ಅತ್ಯಧಿಕ ಪ್ರಮಾಣದಲ್ಲಿ ಆಗಿದ್ದ ಮಳೆ ಅಲ್ಪ ಮಟ್ಟಿಗೆ ತಣ್ಣಗಾದಂತೆ ಕಂಡು ಬರುತ್ತಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ 48 ಗಂಟೆಗಳಲ್ಲಿ ಒಟ್ಟು ಆರು ಜಿಲ್ಲೆಗಳಲ್ಲಿ ಭಾರೀ ಮಳೆ ಬರುವ ಮುನ್ಸೂಚನೆ ಇದೆ. ಈಗಾಗಲೇ ಆವರಿಸಿದ್ದ ಹವಾಮಾನ ವೈಪರಿತ್ಯದ ಪ್ರಭಾವ ಇಳಿಕೆ ಆದ ಪರಿಣಾಮ, ಮಲೆನಾಡು ಮತ್ತು ಕರಾವಳಿ ಭಾಗವು ರೆಡ್ ಅಲರ್ಟ್‌ನಿಂದ ಯೆಲ್ಲೋ ಅಲರ್ಟ್‌ಗೆ ಮರಳಿದೆ.

ಸದ್ಯ ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಆಗಲಿದೆ. ಭಾರೀ ಮಳೆ ಪ್ರಯುಕ್ತ ಈ ಆರು ಜಿಲ್ಲೆಗಳಿಗೆ ನಾಳೆ ಸೋಮವಾರ ಮತ್ತು ಮಂಗಳವಾರ (ಜುಲೈ 2ರವರೆಗೆ) 'ಹಳದಿ ಎಚ್ಚರಿಕೆ' ಕೊಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.
ಉಳಿದ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ಏನಿದೆ?
ಈ ಆರು ಜಿಲ್ಲೆಗಳನ್ನು ಹೊರತುಪಡಿಸಿದರೆ, ಉಳಿದ ಜಿಲ್ಲೆಗಳಲ್ಲಿ ಆಗಾಗ ಮೋಡ ಕವಿದ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಅದರಲ್ಲೂ ಉತ್ತರ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಚಾಮರಾಜನಗರ, ತುಮಕೂರು, ದಾವಣಗೆರೆ, ಹಾಸನ, ಚಿಕ್ಕಮಗಳೂರಲ್ಲಿ ಒಂದಷ್ಟು ಕಡೆಗಳಲ್ಲಿ ಅಲ್ಲಲ್ಲಿ ಹಗುರ ಮಳೆ ದಾಖಲಾಗುತ್ತಿದೆ. ಕೆಲವೊಂದಿಷ್ಟು ಪ್ರದೇಶಗಳಲ್ಲಿ ಉತ್ತಮ ಮಳೆಯೂ ಆಗಿದೆ.
ಆದರೆ ಸದಾ ಒಣಹವೆಯಿಂದ ಬಣಗುತ್ತಿದ್ದ ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ಬಾಗಲಕೋಟೆ, ಹಾವೇರಿ ಭಾಗದಲ್ಲಿ ಮಾತ್ರ ಸೋನೆ ಮಳೆ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಜೋರು ಮಳೆಯ ದರ್ಶನವಾಗಿಲ್ಲ. ಇಲ್ಲೆಲ್ಲ ಮೋಡ ಕವಿದ ವಾತಾವರಣ ಜೊತೆಗೆ ಸೋನೆ ಮಳೆ ಆಗುತ್ತಿದ್ದು, ವ್ಯಾಪಕ ಮಳೆ ಆಗಿಲ್ಲ.

ನಿರೀಕ್ಷಿತ ಮಳೆ ಇಲ್ಲ: ರೈತರಲ್ಲಿ ಹೆಚ್ಚಾಗುತ್ತಿದೆ ಆತಂಕ
ಉತ್ತರ ಕರ್ನಾಟಕದ ರೈತರಿಗೆ ಧಾರಾಕಾರ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಮುಂಗಾರು ಆರಂಭವಾದ ಜೂನ್ ಮೊದಲವಾರವೇ ರೈತರು ಮೆಕ್ಕೆ ಜೋಳ, ಹೆಸರು, ತೊಗರಿ, ಶೇಂಗಾ ಇನ್ನಿತರ ಖಾರೀಫ್ ಬೆಳೆ ಬಿತ್ತಿದ್ದಾರೆ. ಸದ್ಯ ಒಂದು ಅಡಿಯಷ್ಟು ಎತ್ತರ ಬೆಳೆದ ಪೈರಿಗೆ ನೀರಿನ ಅಗತ್ಯವಿದೆ. ಸಕಾಲಕ್ಕೆ ಮಳೆ ಆಗದೇ ಇದೇ ವಾತವರಣ ಮುಂದುವರಿದರೆ, ಬೆಳೆ ಒಣಗುವ ಭಯದಲ್ಲಿ ರೈತರಿದ್ದಾರೆ.
ಬೆಂಗಳೂರಲ್ಲಿ ಹವಾಮಾನ ಯಥಾಸ್ಥಿತಿ
ಇನ್ನೂ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಆಗಾಗ ತುಸು ಬಿಸಿಲು, ತುಸು ಮಳೆ ಬರುತ್ತಿದೆ. ಮತ್ಯಾವ ಬದಲಾವಣೆ ನಗರದಲ್ಲಿ ಆಗಿಲ್ಲ. ಇನ್ನೂ ಕೆಲವು ದಿನಗಳ ಕಾಲ ಇದೇ ವಾತವರಣ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಇನ್ನೇನು ಮಳೆ ಕಡಿಮೆ ಆಗಿ ರೆಡ್ ಅಲರ್ಟ್‌ನಿಂದ ಯೆಲ್ಲೋ ಅಲರ್ಟ್‌ಗೆ ಮರಳಿವೆ ಎಂಬ ಬೆನ್ನಲ್ಲೆ ಸೋಮವಾರದಿಂದ ರಾಜ್ಯದಲ್ಲಿ ಭರ್ಜರಿ ಮಳೆ ಮುಂದುವರಿಯುವ ಮುನ್ಸೂಚನೆ ಲಭಿಸಿದೆ. ಮುಂದಿನ ಕೆಲವೇ ದಿನಗಳಲ್ಲಿ ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಎಲ್ಲ ಭಾಗದಲ್ಲಿ ಅತ್ಯಧಿಕ ಮಳೆ ಮುಂದುವರಿಯಲಿದೆ ಎಂದು ಐಎಂಡಿ ವರದಿ ತಿಳಿಸಿದೆ.












Click it and Unblock the Notifications