Umapathy Srinivas Gowda: ಬೊಮ್ಮನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಗೌಡ ಪ್ರೊಫೈಲ್
ಬೆಂಗಳೂರು ನಗರ ವ್ಯಾಪ್ತಿಯ 28ಕ್ಷೇತ್ರಗಳ ಪೈಕಿ ಜಿದ್ದಾಜಿದ್ದಿನ ಪೈಪೋಟಿ ಇರಬಹುದು ಎಂದು ನಿರೀಕ್ಷಿಸಲಾಗಿರುವ ಕ್ಷೇತ್ರಗಳಲ್ಲಿ ಬೊಮ್ಮನಹಳ್ಳಿ ಕೂಡಾ ಒಂದು. ಕಾರಣ, ಈ ಬಾರಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿಗೆ ಬಲವಾದ ಪ್ರತಿಸ್ಪರ್ಧಿಯನ್ನು ಕಾಂಗ್ರೆಸ್ ನಿಲ್ಲಿಸಬಹುದು ಎನ್ನುವ ಕುತೂಹಲ ಎಲ್ಲರದಾಗಿತ್ತು. ಅದರಂತೆ, Sandalwood ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಕನ್ನಡ ಸಿನಿಮಾ ಸಂಬಂಧಿತ ವಿಚಾರಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದ ಉಮಾಪತಿ ಶ್ರೀನಿವಾಸ್ ಹೆಸರು, ರಾಜಕೀಯದಲ್ಲಾಗಲಿ ಅಥವಾ ಸಾರ್ವಜನಿಕ ಜೀವನದಲ್ಲಿ ಅಷ್ಟಾಗಿ ಮುನ್ನಲೆಗೆ ಬಂದಿರಲಿಲ್ಲ. ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ ರಾಬರ್ಟ್ ಚಿತ್ರದ ನಂತರ ಉಮಾಪತಿ ಸುದ್ದಿಯಲ್ಲಿದ್ದವರು. ಇದಾದ ನಂತರ ಪ್ರತಿಷ್ಠೆಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ (Executive Council Member) ಜಯಶೀಲರಾಗಿದ್ದವರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಉಮಾಪತಿ ಶ್ರೀನಿವಾಸ್ ಗೌಡ (ಎಂ.ಎಸ್.ಉಮಾಪತಿ) ಶ್ರೀಮಂತ ಹಿನ್ನೆಲೆಯಿಂದ ಬಂದವರು. 27 ಜುಲೈ 1986ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯಲ್ಲಿ ಜನಿಸಿದ ಉಮಾಪತಿಯವರ ತಂದೆ ಎಂ.ಶ್ರೀನಿವಾಸ್. ಬಿಕಾಂ ಪದವೀಧರರಾಗಿರುವ ಇವರ ಶಿಕ್ಷಣ ಆದಿಚುಂಚನಗಿರಿ ಶಾಲೆ, ಗೇರ್ ಇನ್ನೋವೇಟಿವ್ ಬೆಂಗಳೂರಿನಲ್ಲಿ ಬಿಕಾಂ ಪದವಿಯನ್ನು ಮುಗಿಸಿದ್ದರು.
ಉಮಾಪತಿ ಶ್ರೀನಿವಾಸ ಗೌಡ ಈಗ ರಾಜಕಾರಣಿ, ಇದರ ಜೊತೆಗೆ, ಉದ್ಯಮಿ ಮತ್ತು ಚಲನಚಿತ್ರ ನಿರ್ಮಾಪಕರು. SGB ಕ್ರಷರ್ಸ್ ಸಂಸ್ಥೆಯನ್ನು ಹೊಂದಿದ್ದಾರೆ. ಮದಗಜ, ರಾಬರ್ಟ್ ಮುಂತಾದ ಯಶಸ್ವೀ ಚಿತ್ರಗಳನ್ನು ನೀಡಿರುವ ಇವರು, 'ಸಿನಿಮಾ ಮಾಡಿ ನಾನು ಬೆಳೆದಿಲ್ಲ, ತನ್ನ ಉದ್ಯಮದಿಂದಲೇ ಬೆಳೆದವನು' ಎನ್ನುವ ಹೇಳಿಕೆಯನ್ನು ಆವಾಗಾವಾಗ ನೀಡುವುದುಂಟು.

ಸತೀಶ್ ರೆಡ್ಡಿಗೆ ಈ ಬಾರಿ ಉಮಾಪತಿ ಪ್ರತಿಸ್ಪರ್ಧಿ
ಐದಾರು ತಿಂಗಳ ಹಿಂದೆಯೇ ಸತೀಶ್ ರೆಡ್ಡಿಗೆ ಈ ಬಾರಿ ಉಮಾಪತಿ ಪ್ರತಿಸ್ಪರ್ಧಿ ಎನ್ನುವ ಮಾತು ಬೆಂಗಳೂರು ರಾಜಕೀಯದಲ್ಲಿ ಕೇಳಿ ಬರುತ್ತಿತ್ತು. ಅದಕ್ಕೆ ಪೂರಕ ಎನ್ನುವಂತೆ, ಕ್ಷೇತ್ರದ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಇವರು ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು. ಕೆಲವು ದಿನಗಳಿಂದ ಟಿಕೆಟ್ ಘೋಷಣೆಯಾಗದಿದ್ದರೂ ಪ್ರಚಾರ ಆರಂಭಿಸಿದ್ದರು.
ಅಧಿಕೃತವಾಗಿ ಕಾಂಗ್ರೆಸ್ ಉಮಾಪತಿ ಹೆಸರನ್ನು ಪ್ರಕಟಿಸಿದೆ
ಈಗ ಅಧಿಕೃತವಾಗಿ ಕಾಂಗ್ರೆಸ್ ಉಮಾಪತಿ ಹೆಸರನ್ನು ಪ್ರಕಟಿಸಿದೆ. ಇದರಿಂದ, ಮುಂದಿನ 20-25ದಿನ ರಾಜಕೀಯ ಮೇಲಾಟಕ್ಕೆ ಮತ್ತು ಅದನ್ನು ಸಹಿಸಿಕೊಳ್ಳಲು ಬೊಮ್ಮನಹಳ್ಳಿಯ ಜನತೆ ತಯಾರಾಗಬೇಕಾಗಿದೆ. ಸ್ಥಳೀಯರ ಪ್ರಕಾರ ಸತೀಶ್ ರೆಡ್ಡಿಯವರನ್ನು ಮೀರಿಸುವಷ್ಟು ಆಸ್ತಿಪಾಸ್ತಿಯನ್ನು ಹೊಂದಿರುವ ಉಮಾಪತಿ ಶ್ರೀನಿವಾಸ್ ಗೌಡ (Umapathi Srinivas Gowda) ಭಾರೀ ಪ್ರತಿಸ್ಪರ್ಧೆಯನ್ನು ಒಡ್ಡುವುದಂತೂ ಪಕ್ಕಾ..
ಸತೀಶ್ ರೆಡ್ಡಿಯವರ ಹುಟ್ಟಿದ ಹಬ್ಬಕ್ಕೆ ದರ್ಶನ್
ಸತೀಶ್ ರೆಡ್ಡಿಯವರ ಹುಟ್ಟಿದ ಹಬ್ಬಕ್ಕೆ ದರ್ಶನ್, ಸುಮಲತಾ ಮುಂತಾದವರು ಬೊಮ್ಮನಹಳ್ಳಿಗೆ ಬಂದು ಭರ್ಜರಿ ರೋಡ್ ಶೋ ಮಾಡಿ ಹೋಗಿದ್ದರು. ಎಲ್ಲಿ ಪ್ರೀತಿ ಇರುತ್ತೋ ಅಲ್ಲಿ ದರ್ಶನ್ ಇರುತ್ತಾನೆ ಎನ್ನುವುದು ಚಾಲೆಂಜಿಂಗ್ ಸ್ಟಾರ್ ಮಾತು. ತಮ್ಮ ಸಿನಿಮಾದ ನಿರ್ಮಾಪಕ ಉಮಾಪತಿ ಗೌಡ್ರಿಗೂ ದರ್ಶನ್ ಪ್ರಚಾರ ನಡೆಸುತ್ತಾರಾ? ಉಮಾಪತಿ ಪರ ಸ್ಯಾಂಡಲ್ ವುಡ್ ನವರು ಯಾರು ಪ್ರಚಾರಕ್ಕೆ ಬರಬಹುದು ಎನ್ನುವ ಕುತೂಹಲವೂ ಇದೆ.
ಬೆಂಗಳೂರೇತರರು ಹೆಚ್ಚಾಗಿ ಇರುವ ಬೊಮ್ಮನಹಳ್ಳಿ
ಕಾರ್ಮಿಕರು, ಬೆಂಗಳೂರೇತರರು ಹೆಚ್ಚಾಗಿ ಇರುವ ಬೊಮ್ಮನಹಳ್ಳಿಯ ಅಂದಾಜು ಮತದಾರರು 4.3ಲಕ್ಷ. ಸತತವಾಗಿ ಕ್ಷೇತ್ರದಿಂದ ಚುನಾಯಿತರಾಗಿರುವ ಸತೀಶ್ ರೆಡ್ಡಿಗೆ ನಾಡಿಮಿಡಿತ ಗೊತ್ತು, ತಂತ್ರಗಾರಿಕೆ ಗೊತ್ತು. ಆದರೂ, ಉಮಾಪತಿ ಶ್ರೀನಿವಾಸ್ ಗೌಡ ಸ್ಪರ್ಧೆಯಿಂದ ಈ ಬಾರಿಯ ಚುನಾವಣೆ ಭಾರೀ ಜಿದ್ದಿನಿಂದ ಕೂಡಿರಲಿದೆ ಎನ್ನುವುದು ಸದ್ಯದ ಮೇಲ್ನೋಟ.












Click it and Unblock the Notifications