ಬಿಜೆಪಿ ಒತ್ತಡಕ್ಕೆ ಮಣಿದ ಸ್ಪೀಕರ್: ಗುರುವಾರಕ್ಕೆ ಕಲಾಪ ಮುಂದೂಡಿಕೆ
ಬೆಂಗಳೂರು, ಜುಲೈ 15: ವಿರೋಧಪಕ್ಷ ಬಿಜೆಪಿಯ ಒತ್ತಡಕ್ಕೆ ಮಣಿದ ಸ್ಪೀಕರ್ ರಮೇಶ್ ಕುಮಾರ್ ಅವರು ಗುರುವಾರದವರೆಗೂ ಅಧಿವೇಶನವನ್ನು ಮುಂದೂಡಿದ್ದಾರೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ವಿಶ್ವಾಸಮತ ಯಾಚನೆ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಬಿಜೆಪಿ ನಾಯಕರು ಅಲ್ಲಿಯವರೆಗೂ ಕಲಾಪ ನಡೆಸದಂತೆ ಆಗ್ರಹಿಸಿದ್ದರು. ಒಂದು ವೇಳೆ ಕಲಾಪ ನಡೆಸಿದರೂ ತಾವು ಅದರಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬೆದರಿಕೆ ಹಾಕಿದ್ದರು.
ಈ ಬಗ್ಗೆ ಮಧ್ಯಾಹ್ನ ಆರಂಭವಾದ ಕಲಾಪದ ವೇಳೆ ಪ್ರಸ್ತಾಪಿಸಿದ ಸ್ಪೀಕರ್ ರಮೇಶ್ ಕುಮಾರ್, ಪ್ರತಿಪಕ್ಷ ಇಲ್ಲದೆ ಕಲಾಪ ನಡೆಸುವುದು ಸರಿಯಲ್ಲ. ಹೀಗಾಗಿ ಗುರುವಾರದವರೆಗೂ ಕಲಾಪ ಮುಂದೂಡಲಾಗುತ್ತದೆ ಎಂದು ತಿಳಿಸಿದರು.

ಸಿಎಂ ಅವರಿಗೆ ಬಹುಮತ ಇದೆಯೆಂಬ ವಿಶ್ವಾಸ ಇಲ್ಲದಿರುವಾಗ ಅಧಿವೇಶನ ನಡೆಸುವುದು ಮತ್ತು ಸರ್ಕಾರಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ನೈತಿಕತೆ ಅಲ್ಲ. ವಿಶ್ವಾಸ ಮತ ಯಾಚನೆಯ ಕುರಿತು ಕಲಾಪ ಸಲಹಾ ಸಮಿತಿಯಲ್ಲಿ ತೀರ್ಮಾನ ತೆಗೆದುಕೊಂಡಿರುವುದಕ್ಕೆ ಒಪ್ಪಿಕೊಂಡಿದ್ದೇವೆ. ವಿಶ್ವಾಸಮತ ಯಾಚನೆ ಬಳಿಕ ಕಲಾಪ ನಡೆಸಲಿ ಅಲ್ಲಿವರೆಗೆ ಕಲಾಪ ನಡೆಸುವುದು ಬೇಡ. ಈ ಬಗ್ಗೆ ಸ್ಪೀಕರ್‌ಗೆ ತಿಳಿಸಿದ್ದೇವೆ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಹೇಳಿದ್ದರು.
ಸ್ಪೀಕರ್ ಅವರ ನಿರ್ಧಾರವನ್ನು ಸ್ವಾಗತಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.












Click it and Unblock the Notifications