ಬೆಂಗಳೂರು ಮ್ಯಾನ್ ಹೋಲ್ ದುರಂತ: ಯಾರ್ಯಾರು ಏನೇನಂದ್ರು?
ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಮನುಷ್ಯರನ್ನು ಮ್ಯಾನ್ ಹೋಲ್ ಗೆ ಇಳಿಸುವುದು ತಪ್ಪು ಎಂದು ಹಲವಾರು ರಾಜಕೀಯ ಗಣ್ಯರು ಹೇಳುತ್ತಿದ್ದಾರೆ. ಇನ್ನಾದರೂ ಆ ಬಗ್ಗೆ ಕ್ರಮ ಕೈಗೊಂಡಿಯಾರೇ ಎಂಬುದನ್ನು ಕಾದು ನೋಡಬೇಕಿದೆ.
ಬೆಂಗಳೂರು, ಮಾರ್ಚ್ 7: ಸೋಮವಾರ ರಾತ್ರಿ, ಸಿ.ವಿ. ರಾಮನ್ ನಗರದಲ್ಲಿ ಮ್ಯಾನ್ ಹೋಲ್ ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ಅಸುನೀಗಿದ್ದ ಮೂವರು ಕಾರ್ಮಿಕರ ಸಾವಿನ ಪ್ರಕರಣ ಈಗ ದೇಶಾದ್ಯಂತ ಸುದ್ದಿ ಮಾಡಿದೆ.
ಮ್ಯಾನ್ ಹೋಲ್ ಗಳಲ್ಲಿ ಕಾರ್ಮಿಕರನ್ನು ಇಳಿಸಕೂಡದೆಂದು ಸುಪ್ರೀಂ ಕೋರ್ಟ್ ಈಗಾಗಲೇ ಆದೇಶವಿತ್ತಿದ್ದರೂ, ಅದನ್ನು ಲೆಕ್ಕಿಸದೇ ಮಧ್ಯರಾತ್ರಿಯಲ್ಲಿ ಬಡ ಕೂಲಿ ಕಾರ್ಮಿಕರನ್ನು ಮ್ಯಾನ್ ಹೋಲ್ ಗೆ ಇಳಿಸಿ ಅವರ ಜೀವನದೊಂದಿಗೆ ಸರಸವಾಡಿದ ಗುತ್ತಿಗೆದಾರರಿಗೆ ಕಡಿವಾಣ ಹಾಕುವುದೆಂದು ಎಂಬ ಪ್ರಶ್ನೆ ಮೂಡಿದೆ.[ಬ್ರೇಕಿಂಗ್ ನ್ಯೂಸ್: ಮ್ಯಾನ್ ಹೋಲ್ ದುರಂತಕ್ಕೆ 3 ಬಲಿ]

ಸದ್ಯಕ್ಕಷ್ಟೇ ಆಕ್ರೋಶವೇ?
ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಮನುಷ್ಯರನ್ನು ಮ್ಯಾನ್ ಹೋಲ್ ಗೆ ಇಳಿಸುವುದು ಮುಂದುವರಿದಿರುವುದೂ ಇದರಿಂದ ತಿಳಿಯುತ್ತದೆ. ಯಾರಾದರೂ ಸತ್ತಾಗ ಮಾತ್ರ, ಜನಪ್ರತಿನಿಧಿಗಳು, ಸರ್ಕಾರ ಬೊಬ್ಬೊ ಹೊಡೆಯುತ್ತವೆ. ಕೆಲ ದಿನಗಳ ನಂತರ ಇದು ಮತ್ತೆ ಪುನರಾರಂಭವಾಗುತ್ತವೆ. ಮತ್ತೆ ಎಲ್ಲರೂ ಮೌನಕ್ಕೆ ಶರಣಾಗುತ್ತಾರೆ... ಮತ್ತೊಂದಿಷ್ಟು ಜನ ಸಾಯುವ ತನಕ.

ತಪ್ಪಿತಸ್ಥರಿಗೆ ಶಿಕ್ಷೆ ಗ್ಯಾರಂಟಿ
ಪ್ರಸ್ತುತ, ಸಿ.ವಿ. ರಾಮನ್ ನಗರದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕರು ಹಲವಾರು ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ. ಅದರಲ್ಲಿ, ಪ್ರಮುಖವಾದದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರದ್ದು. ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಅವರು, ಯಾರೇ ತಪ್ಪಿತಸ್ಥರಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.

ತಪ್ಪಿತಸ್ಥರ ವಿರುದ್ಧ ಗುಡುಗು
ಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಮ್ಯಾನ್ ಹೋಲ್ ನಲ್ಲಿ ಕಾರ್ಮಿಕರನ್ನು ಇಳಿಸಕೂಡದೆಂದು ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟವಾದ ಸೂಚನೆ ನೀಡಿದೆ. ಆದಾಗ್ಯೂ ಮ್ಯಾನ್ ಹೋಲ್ ಸ್ವಚ್ಛತೆಗೆ ಕಾರ್ಮಿಕರನ್ನು ಇಳಿಸಿದ್ದು ದೊಡ್ಡ ಅಪರಾಧ. ಅಧಿಕಾರಿಗಳು ಯಂತ್ರೋಪಕರಣಗಳನ್ನು ಉಪಯೋಗಿಸಿ ಮ್ಯಾನ್ ಹೋಲ್ ಸ್ವಚ್ಛಗೊಳಿಸಬಹುದಿತ್ತು ಎಂದು ಗುಡುಗಿದ್ದಾರೆ.

ಅಧಿಕಾರಿಗಳೊಂದಿಗೆ ಚರ್ಚಿಸುವ ಭರವಸೆ
ಘಟನೆ ಬಗ್ಗೆ, ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯ ವಿಚಾರ ತಿಳಿದು ಬೇಸರವಾಯಿತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.

ಭದ್ರತಾ ನಿಯಮಗಳ ಪಾಲಿಸಿಲ್ಲ: ಮಹಾಪೌರರು
ಘಟನೆ ಬಗ್ಗೆ ಮೇಯರ್ ಪದ್ಮಾವತಿ ಸಹ ಬೇಸರ ವ್ಯಕ್ತಪಡಿಸಿದ್ದು, ಮ್ಯಾನ್ ಹೋಲ್ ಸ್ವಚ್ಛತೆಯ ಕಾಮಗಾರಿ ಪಡೆದಿದ್ದ ಗುತ್ತಿಗೆದಾರನ ವಿರುದ್ಧ ಹರಿಹಾಯ್ದರು. ಕಳೆದ ಎರಡು ವರ್ಷಗಳಿಂದ ಸಿ.ವಿ. ರಾಮನ್ ನಗರದಲ್ಲಿ ರಾಮುಕಿ ಎಂಬಾತ ಮ್ಯಾನ್ ಹೋಲ್ ಸ್ವಚ್ಛತೆಯ ಗುತ್ತಿಗೆ ಪಡೆದಿದ್ದಾನೆ. ಆತ, ಈ ಕಾರ್ಯಕ್ಕೆ ಕಾರ್ಮಿಕರನ್ನು ಬಳಸಿದ್ದು ತಪ್ಪು. ಅಲ್ಲದೆ, ಮಧ್ಯರಾತ್ರಿ ಸ್ವಚ್ಛತೆ ಕಾರ್ಯ ನಡೆಯಬೇಕಿದ್ದರಿಂದ ಆತ ಸ್ಥಳದಲ್ಲಿದ್ದು ಭದ್ರತಾ ನಿಯಮಗಳ ಉಸ್ತುವಾರಿ ವಹಿಸಿಕೊಳ್ಳಬೇಕಿತ್ತು. ಆತನ ಬೇಜವಾಬ್ದಾರಿತನದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಕಿಡಿ ಕಾರಿದರು.












Click it and Unblock the Notifications