'ಸಿದ್ದರಾಮಯ್ಯರ ಮಾತಿಗೆ ಕಿಮ್ಮತ್ತು ಕೊಡದ ಸಚಿವರು: ಇದೆಲ್ಲ ಸಿಎಂ ಬದಲಾವಣೆಯ ಮುನ್ಸೂಚನೆಯೇ?'
ಬೆಂಗಳೂರು, ಮೇ 31: ಬಡವನ ಕೋಪ ದವಡೆಗೆ ಮೂಲ ಎನ್ನುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮ ಕೋಪ-ತಾಪ, ರೋಷಾವೇಷ ಅಧಿಕಾರಿಗಳ ಮೇಲಲ್ಲ, ಸಚಿವ ಸಂಪುಟದ ಸದಸ್ಯರ ಮೇಲೆ ತೋರಿಸಿ. ಸರ್ಕಾರದ ಸೂಚನೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಹೇಳಿದ್ದು ನೋಡಿದರೆ ಸರ್ಕಾರ ಆಡಳಿತ ಯಂತ್ರ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಇದೊಂದು ಸಾಕಷ್ಟು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಡಿಸಿ, ಸಿಇಒ ಗಳ ಸಭೆ ನಡೆಸಲಾಗಿತ್ತು. ಈ ಕುರಿತು ಪೋಸ್ಟ್ ಮಾಡಿರುವ ಆರ್.ಅಶೋಕ್ ಅವರು, ಹೊರನಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಡಿಸಿ, ಸಿಇಒ ಗಳ ಸಭೆಯಲ್ಲಿ ಅಧಿಕಾರಿಗಳಿಗೆ ತಮ್ಮ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹಾಗಾದರೆ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತ ಯಂತ್ರ ಹೇಗೆ ಸಂಪೂರ್ಣವಾಗಿ ಹಳಿ ತಪ್ಪಿದೆ ಎನ್ನುವುದಕ್ಕೆ ಇದು ಕನ್ನಡಿ ಹಿಡಿದಂತಿದೆ ಎಂದು ಅವರು ಚಾಟಿ ಬೀಸಿದ್ದಾರೆ.

ಸಿದ್ದರಾಮಯ್ಯನವರು ತಮ್ಮ ಕೋಪ-ತಾಪ, ರೋಷಾವೇಷ ಅಧಿಕಾರಿಗಳ ಬದಲಾಗಿ ಸಚಿವ ಸಂಪುಟದ ಸದಸ್ಯರ ಮೇಲೆ ತೋರಿಸಬೇಕು ಎಂದು ಹೇಳಿದ್ದಾರೆ. ನಿಮ್ಮ ಹತಾಶೆಯನ್ನು, ಅಸಹಾಯಕತೆಯನ್ನ ಅಧಿಕಾರಿಗಳ ಮೇಲಲ್ಲಾ ತಮ್ಮ ಮಾತಿಗೆ ನಯಾ ಪೈಸೆ ಬೆಲೆ ಕೊಡದ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಕ್ಲಾಸ್ ತೆಗೆದುಕೊಂಡು ನಿಮ್ಮ ದಮ್ಮು ತಾಕತ್ತು ತೋರಿಸಿ ಎಂದು ಸವಾಲು ಹಾಕಿದ್ದಾರೆ.
ರಾಜ್ಯದ ಸಚಿವರಿಗೆ ಮುಖ್ಯಮಂತ್ರಿ ನೀಡಿರುವ ನಿರ್ದೇಶನಗಳಲ್ಲಿ ಯಾವುದಾದರೂ ಒಂದಾದರೂ ಪಾಲನೆ ಆಗುತ್ತಿದೆಯಾ? ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದೆ ಸಿಎಂ ನೀಡಿದ್ದ ಸೂಚನೆಗಳು, ಕಾರ್ಯಕ್ರಮಗಳ ಪಟ್ಟಿಯನ್ನು ಅವರು ನೀಡಿದ್ದಾರೆ.

ಮುಖ್ಯಮಂತ್ರಿ ಕೊಟ್ಟಿದ್ದ ಸೂಚನೆಗಳ ಪಟ್ಟಿ
* ತಿಂಗಳಲ್ಲಿ ಒಂದು ದಿನ ಜನತಾದರ್ಶನ ಮಾಡಿ ಎಂದರೂ ಮಾಡುತ್ತಿಲ್ಲ.
* ಜಿಲ್ಲಾ ಪ್ರವಾಸ ಮಾಡಿ ಜನರ ಸಮಸ್ಯೆ ಕೇಳಿ ಎಂದರೂ ಮಾಡುತ್ತಿಲ್ಲ.
* ಕನಿಷ್ಟ ಪಕ್ಷ ವಾರದಲ್ಲಿ ಮೂರು ದಿನ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿ ಎಂದರೂ ಗುರುವಾರದ ಸಂಪುಟ ಸಭೆಗೆ ಬಿಟ್ಟರೆ ಬಹುತೇಕ ಸಚಿವರು ವಿಧಾನಸೌಧದತ್ತ ತಲೆಯೂ ಹಾಕುತ್ತಿಲ್ಲ.
* ನಿವೃತ್ತ ಅಧಿಕಾರಿಗಳನ್ನು ಹೊರ ಗುತ್ತಿಗೆ ಸೇವೆಯಿಂದ ತಕ್ಷಣ ಬಿಡುಗಡೆ ಮಾಡಿ ಎಂದರೂ ಬಿಡುಗಡೆ ಮಾಡಲಿಲ್ಲ.
* ಜನಸ್ಪಂದನ ಅರ್ಜಿ ವಿಲೇವಾರಿ ತ್ವರಿತವಾಗಿ ಆಗಬೇಕು ಎಂಬ ಸೂಚನೆ ಭಾಷಣಕ್ಕೆ ಸೀಮಿತವಾಯಿತು.
* ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ನೀಡಿ ಎಂದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ. ಇನ್ನೂ ಅನೇಕ ಜಿಲ್ಲೆಗಳಲ್ಲಿ ಕಳೆದ ವರ್ಷದ ಪರಿಹಾರ ವಿತರಣೆಯೇ ಬಾಕಿ ಉಳಿದಿದೆ.
* ಕೆರೆ ಒತ್ತುವರಿ ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಿ ಎಂದು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಹೇಳಿದ್ದನ್ನು ಯಾರೂ ಕೇರ್ ಮಾಡಿಲ್ಲ.
* ರಾಜಕಾಲುವೆ ಅಕ್ರಮ ಒತ್ತುವರಿ ತೆರವು ಮಾಡಿ ಎಂದು ನಗರ ಪ್ರದಕ್ಷಿಣೆ ಹಾಕಿ ಬಂದರೂ ಯಾರೂ ಕ್ಯಾರೆ ಅನ್ನುತ್ತಿಲ್ಲ.
* ಮೈಕ್ರೋಫೈನಾನ್ಸ್ ದೌರ್ಜನ್ಯ ಪ್ರಕರಣಗಳ ಬಗ್ಗೆ ಕೆಡಿಪಿ ಸಭೆಗಳಲ್ಲಿ ಪರಿಶೀಲನೆ ನಡೆಸಿ ಎಂದಿದ್ದ ಸಿಎಂ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ನಿಮ್ಮ ಗಮನಕ್ಕೆ ಬಂದಿದೆಯೇ ಇಲ್ಲವೋ ಗೊತ್ತಿಲ್ಲ, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ನಿನ್ನೆಯೂ ಕೊಡಗಿನಲ್ಲಿ ಒಂದು ಆತ್ಮಹತ್ಯೆ ಆಗಿದೆ ಎಂದು ಅವರು ತಿಳಿಸಿದರು.
* ಡಿಸಿಎಂ ಸಾಹೇಬರು ನೋಡಿದರೆ ತಾವು ಮಾಡಿದ ಎಂಜಿನಿಯರ್ ಗಳ ವರ್ಗಾವಣೆ ಆದೇಶಕ್ಕೆ ಸಡ್ಡು ಹೊಡೆದು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ತಮ್ಮ ಅನುಮತಿ ಇಲ್ಲದೆ ಮಾಡುವಂತಿಲ್ಲ ಎಂದು ಧಮ್ಕಿ ಹಾಕುತ್ತಾರೆ.
ನಿಮ್ಮ ಘನಂದಾರಿ ಕಾರ್ಯವೈಖರಿ ಬಗ್ಗೆ ಹೇಳುತ್ತಾ ಹೋದರೆ ಇನ್ನೂ ದೊಡ್ಡ ಪಟ್ಟಿಯೇ ಇದೆ ಎಂದು ವ್ಯಂಗ್ಯವಾಡಿದರು.
ಮನೆಯ ಯಜಮಾನ ಸರಿ ಇಲ್ಲದೆ ಹೋದರೆ ಹೇಗೆ ಸಂಸಾರ ಬೀದಿಗೆ ಬರುತ್ತದೋ ಅದೇ ರೀತಿ ಒಂದು ಸರ್ಕಾರದಲ್ಲಿ ಮುಖ್ಯಮಂತ್ರಿಗೆ ಹಿಡಿತ ಇಲ್ಲದೆ ಹೋದರೆ ಆಡಳಿತ ಯಂತ್ರ ಹಳ್ಳ ಹಿಡಿಯುತ್ತದೆ. ಮುಖ್ಯಮಂತ್ರಿ ಮಾತಿಗೆ ಸಚಿವರೇ ಕಿಮ್ಮತ್ತು ಕೊಡುತ್ತಿಲ್ಲ ಎಂದರೆ ಆಡಳಿತಶಾಹಿಯಲ್ಲಿ ಗೊಂದಲ ಮೂಡಿಸುತ್ತದೆ ಎಂದು ತಿಳಿಸಿದರು.
ಹೊರ ನಡೆಯುವ ಸಿಎಂ ಎಂಬ ಸೂಚನೆಯೇ?
ಮೊದಲು ನಿಮ್ಮ ಸಚಿವ ಸಂಪುಟ ಸಚಿವರಿಗೆ ನಿಮ್ಮ ಮಾತು, ಆದೇಶ ಪಾಲನೆ ಮಾಡುವಂತೆ ಕ್ಲಾಸ್ ತೆಗೆದುಕೊಂಡು ತಾಕೀತು ಮಾಡಿ. ಕೆಲಸ ಮಾಡದ ಸೋಮಾರಿ ಸಚಿವರನ್ನು ಸಂಪುಟದಿಂದ ಕಿತ್ತು ಬಿಸಾಕಿ ಸಮರ್ಥರನ್ನು ತೆಗೆದುಕೊಳ್ಳಿ. ಇಷ್ಟಕ್ಕೂ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂಬ ನಿಮ್ಮ ಬೇಡಿಕೆಗೆ ಹೈಕಮಾಂಡ್ ಯಾಕೆ ಸೊಪ್ಪು ಹಾಕುತ್ತಿಲ್ಲ? ಇದು ತಾವು outgoing ಸಿಎಂ ಎಂಬುದಕ್ಕೆ ಪರೋಕ್ಷ ಸೂಚನೆಯೋ? ಅಥವಾ ಹೇಗಿದ್ದರೂ ಮುಖ್ಯಮಂತ್ರಿ ಬದಲಾವಣೆ ಆಗಲಿದೆ, ಈಗ ಸಂಪುಟ ವಿಸ್ತರಣೆ/ಪುನಾರಾಚನೆ ಯಾಕೆ ಎಂದು ಸುಮ್ಮನಿದ್ದಾರೋ?












Click it and Unblock the Notifications