ಲೋಕಾಯುಕ್ತಕ್ಕೆ ಮತ್ತೆ ಬಲ: ಬೆಂಗಳೂರಿನ 45 ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ- ಎಲ್ಲೆಲ್ಲಿ ತಲಾಶ್, ಏನೇನು ವಶ? ವರದಿ, ವಿವರ
ಬೆಂಗಳೂರು, ಆಗಸ್ಟ್ 04: ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ದುರಾಡಳಿತದ ಕುರಿತ ದೂರುಗಳನ್ನು ಕರ್ನಾಟಕ ಲೋಕಾಯುಕ್ತ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಇರುವ 45 ಬಿಬಿಎಂಪಿ ಕಚೇರಿಗಳ ಮೇಲೆ ಗುರುವಾರ ಲೋಕಾಯುಕ್ತ ದಾಳಿ ನಡೆಸಿದೆ.
ಬಿಬಿಎಂಪಿಯ ಕಂದಾಯ ಮತ್ತು ಪಟ್ಟಣ ಯೋಜನಾ ವಿಭಾಗಕ್ಕೆ ಸೇರಿರುವ 45 ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ. ಲೋಕಾಯುಕ್ತ, ಉಪ ಲೋಕಾಯುಕ್ತ ಹಾಗೂ ನ್ಯಾಯಾಂಗ ಅಧಿಕಾರಿಗಳು ನಗರದಾದ್ಯಂತ ಇರುವ ಬಿಬಿಎಂಪಿ ಕಚೇರಿಗಳಲ್ಲಿ ತಲಾಶ್ ನಡೆಸಿದ್ದಾರೆ.

ದಾಳಿಯ ಸಮಯದಲ್ಲಿ, ಪಾಲಿಕೆ ಕಚೇರಿಗಳಲ್ಲಿ ಲೆಕ್ಕಕ್ಕೆ ಸಿಗದ ನಗದು, ಅಕ್ರಮಗಳು ಮತ್ತು ಕಾರ್ಯವಿಧಾನದ ಲೋಪಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಮೊದಲ ಕಾರ್ಯಾಚರಣೆಯಲ್ಲಿ, ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಮತ್ತು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆಎನ್ ಫಣೀಂದ್ರ ಅವರು ಕೆಲವು ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದರು.
ಬೆಂಗಳೂರು ಪೂರ್ವ, ಬೊಮ್ಮನಹಳ್ಳಿ, ಯಲಹಂಕ, ಮಹದೇವಪುರ, ಮಲ್ಲೇಶ್ವರಂ, ರಾಜಾಜಿನಗರ, ಬನಶಂಕರಿ, ವಿಜಯನಗರ, ಬಸವನಗುಡಿ, ರಾಜರಾಜೇಶ್ವರಿ ನಗರ, ಯಶವಂತಪುರ ಮತ್ತು ದಾಸರಹಳ್ಳಿಯ ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹದಿಮೂರು ನ್ಯಾಯಾಂಗ ಅಧಿಕಾರಿಗಳು, ಏಳು ಪೊಲೀಸ್ ಅಧೀಕ್ಷಕರು, 19 ಉಪ ಪೊಲೀಸ್ ವರಿಷ್ಠಾಧಿಕಾರಿಗಳು, 26 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ಹಲವಾರು ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇತರ ಜಿಲ್ಲೆಗಳ ಪೊಲೀಸರೂ ಕಾರ್ಯಾಚರಣೆಯಲ್ಲಿ ಭಾಗಿ
ಕರ್ನಾಟಕ ಲೋಕಾಯುಕ್ತದ ಪೊಲೀಸ್ ಮಹಾನಿರ್ದೇಶಕರು ಮತ್ತು ಕರ್ನಾಟಕ ಲೋಕಾಯುಕ್ತದ ಪೊಲೀಸ್ ಮಹಾನಿರೀಕ್ಷಕರು ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದರು. ಅಕ್ಕಪಕ್ಕದ ಜಿಲ್ಲೆಗಳ ಲೋಕಾಯುಕ್ತ ಕಚೇರಿಯ ಪೊಲೀಸರು ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕಂದಾಯ ಮತ್ತು ಪಟ್ಟಣ ಯೋಜನಾ ಕಚೇರಿಗಳ ಸಿಬ್ಬಂದಿ ಜನರಿಂದ ಹೆಚ್ಚಿನ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತಿ ಒನ್ ಬಿಎಚ್‌ಕೆ ಮನೆಗೆ ಕಟ್ಟಡ ಕಾಮಗಾರಿ ಆರಂಭ ಪ್ರಮಾಣಪತ್ರ, ಪೂರ್ಣಗೊಳಿಸುವಿಕೆ ಪ್ರಮಾಣ ಪತ್ರ ಮತ್ತು ಆಕ್ಯುಪೆನ್ಸಿ ಪ್ರಮಾಣ ಪತ್ರ ನೀಡಲು ಲಂಚವಾಗಿ 50,000 ರೂ ತೆಗೆದುಕೊಳ್ಳಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ಖಾತಾ ಪ್ರಮಾಣಪತ್ರ, ಕಟ್ಟಡದ ಯೋಜನೆ ಅನುಮೋದನೆ ಮತ್ತು ಇತರ ದಾಖಲೆಗಳನ್ನು ನೀಡಲು ಅಧಿಕಾರಿಗಳು ಲಂಚವನ್ನು ಕೇಳಿದ್ದರು ಎನ್ನಲಾಗಿದೆ. ಬಿಬಿಎಂಪಿ ಸಿಬ್ಬಂದಿ ವಿರುದ್ಧ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications