ರಾಜ್ಯದ ಮುಂದಿನ ಜಂಟಿ ಅಧಿವೇಶನ ಜೂನ್ 15 ನಂತರ
ಬೆಂಗಳೂರು, ಮೇ8: ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನವು ಜೂನ್ 15ರ ನಂತರ ಜುಲೈ ತಿಂಗಳವರೆಗೂ ಒಟ್ಟು 30 ದಿನಗಳ ಕಾಲ ನಡೆಯಲಿದೆ. ಅಧಿವೇಶನದ ಸಂಬಂಧ ನಡೆದಿರುವ ಸಿದ್ಧತೆಗಳ ಬಗ್ಗೆ ವಿಧಾನ ಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ಅವರು ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್ ನವೀಕರಣ ಕಾರ್ಯ ನಡೆಯುತ್ತಿದ್ದು, ಜೂನ್ 12 ರ ವೇಳೆಗೆ ಅದು ಸಂಪೂರ್ಣಗೊಳ್ಳಲಿದೆ. ಜೂನ್ 15ರ ಅಧಿವೇಶನ ಆರಂಭಿಸಿ 30 ದಿನಗಳ ಕಾಲ ನಡೆಸಲು ಸಕಲ ಸಿದ್ಧತೆ ನಡೆದಿದೆ ಎಂದು ಡಿಎಚ್ ಶಂಕರಮೂರ್ತಿ ಅವರು ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ವಿಧಾನ ಸಭಾಧ್ಯಕ್ಷರೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಅವರು 30 ದಿನಗಳ ಕಾಲ ಅಧಿವೇಶನ ನಡೆಸಲು ಸೂಚಿಸಿದ್ದರು. ಅದರಂತೆ ಎಲ್ಲ ಸಿದ್ಧತೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಜೂನ್ ತಿಂಗಳಲ್ಲಿ ನಾಮಕರಣ ಸದಸ್ಯರು, ವಿಧಾನಸಭೆಯಿಂದ ವಿಧಾನ ಪಕ್ಷಕ್ಕೆ ಚುನಾಯಿತರಾದವರು, ಶಿಕ್ಷಕರು, ಪದವೀಧರರಿಂದ 16 ಸ್ಥಾನಗಳು ಖಾಲಿಯಾಗುತ್ತವೆ. ಅವುಗಳನ್ನು ಭರ್ತಿ ಮಾಡಲು ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ.
40 ವರ್ಷಗಳಷ್ಟು ಹಳೆಯದಾಗಿರುವ ವಿಧಾನ ಪರಿಷತ್ ಸಭಾಂಗಣವನ್ನು ನವೀಕರಣ ಮಾಡಲಾಗುತ್ತಿದ್ದು, ಮೈಕ್ ಗಳು, ಕಾರ್ಪೆಟ್, ಬೆಳಕಿನ ವ್ಯವಸ್ಥೆ, ಹವಾನಿಯಂತ್ರಣ ವ್ಯವಸ್ಥೆಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ ಎಂದೂ ಅವರು ಮಾಹಿತಿ ನೀಡಿದರು.












Click it and Unblock the Notifications