ಕರ್ನಾಟಕ ಕಲಾದರ್ಶಿನಿ ನಡೆಸಿಕೊಟ್ಟ ಯಕ್ಷಗಾನ ಬೇಸಿಗೆ ಶಿಬಿರ -2023
ಕರ್ನಾಟಕ ಕಲಾದರ್ಶಿನಿ ನಡೆಸಿಕೊಟ್ಟ ಯಕ್ಷಗಾನ ಬೇಸಿಗೆ ಶಿಬಿರ -2023 ಸಮಾರೋಪ ಸಮಾರಂಭ ಬೆಂಗಳೂರಿನ ಗಿರಿನಗರದ ಶ್ರೀ ಮಹಾಗಣಪತಿ ದೇವಾಲಯ ಸಭಾಂಗಣದಲ್ಲಿ ನೆರವೇರಿತು. ಯಕ್ಷಗಾನ ಪೂರ್ವರಂಗ, ಸಂಗೀತ ತರಬೇತಿಯನ್ನು ಯಕ್ಷಗುರು ಶ್ರೀನಿವಾಸ ಸಾಸ್ತಾನ , ಗೌತಮ್ ಸಾಸ್ತಾನ ಮತ್ತು ಡಾ. ಸುಪ್ರೀತ ನಡೆಸಿಕೊಟ್ಟರು.
ಬಳಿಕ ಶ್ರೀನಿವಾಸ ಸಾಸ್ತಾನ ಅವರ ಮಾರ್ಗದರ್ಶನದಲ್ಲಿ ತಂಡದ ವಿದ್ಯಾರ್ಥಿಗಳಿಂದ ಕೃಷ್ಣಾರ್ಜುನ ಕಾಳಗ ಮತ್ತು ಶಿಬಿರಾರ್ಥಿ ಪುಟಾಣಿಗಳಿಂದ 'ವೀರ ಅಭಿಮನ್ಯು' ಯಕ್ಷಗಾನ ಪ್ರಸಂಗಗಳನ್ನು ಆಡಿತೋರಿಸಲಾಯಿತು. ಶನಿವಾರ (15/4/2022) ನಡೆದ ಕೃಷ್ಣಾರ್ಜುನ ಕಾಳಗ ಪ್ರಸಂಗದಲ್ಲಿ ದೀಕ್ಷಾಭಟ್, ಆದರ್ಶ ಶೆಟ್ಟಿ, ಶ್ರೀಹರಿ ಸರಳಾಯ, ಸುಧನ್ವ ಭಟ್, ಧೃತಿ ಅಮ್ಮೆಂಬಳ, ಶ್ರೇಯಸ್ ಸರಳಾಯ, ರಘುವೀರ ಪಾಂಗಣ್ಣಾಯ, ಅಭಿಶ್ರೀ ವಿವಿಧ ಪಾತ್ರಗಳಲ್ಲಿ ರಂಜಿಸಿದರು.

ಮರುದಿನ ನಡೆದ ಶಿಬಿರಾರ್ಥಿ ಪುಟಾಣಿಗಳು ನಡೆಸಿಕೊಟ್ಟ ವೀರ ಅಭಿಮನ್ಯು ಯಕ್ಷಗಾನದಲ್ಲಿ ಸೃಷ್ಟಿ ಚೇತನ್ ಜಯಂತ, ಆಯುಷ್ ಎಸ್, ಸಾಯಿ ಪ್ರಣಾಮ್, ಕೃಷ್ಣ ಭಟ್, ಕೃತಿ ಅಮ್ಮೆಂಬಳ, ಇಶಾನಿ ಎಸ್, ಶ್ರೇಷ್ಠಾ ಚೇತನ್ ಜಯಂತ, ಶ್ರೇಯಸ್ ಸರಳಾಯ, ಶ್ರೀವತ್ಸ ಸರಳಾಯ, ಅಭಿಶ್ರೀ ಶ್ರೀಹರ್ಷ ಭಟ್ಟ, ಧನುಶ್ ಶೆಟ್ಟಿ, ಸಮನ್ವಿತ, ಯಶ್ವಿತಾ, ಶ್ರೀಯಾ, ಯಾದವಿ, ಅಗಸ್ತ್ಯ, ಧನ್ವಿನ್, ವಿಶ್ರುತ್, ಧೃತಿ ಅಮ್ಮೆಂಬಳ ಬಾಲಕಲಾವಿದರಾಗಿ ಮಿಂಚಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ಶಂಕರ್ ಬಾಳೆಕುದ್ರು, ಚೆಂಡೆಯಲ್ಲಿ ಸಬ್ರಹ್ಮಣ್ಯ ಸಾಸ್ತಾನ, ಮದ್ದಲೆಯಲ್ಲಿ ರಾಘವೇಂದ್ರ ಬಿಡುವಾಳ ಭಾಗವಹಿಸಿದ್ದರು. ಚೈತ್ರಾ ಕೋಟಾ ಅವರು ಕಾರ್ಯಕ್ರಮ ನಿರ್ವಹಿಸಿದರು.

ಕೃಷ್ಣಾರ್ಜುನ ಕಾಳಗ ಪ್ರಸಂಗ ವಿವರ:
ಕೃಷ್ಣಾರ್ಜುನ ಪ್ರಸಂಗದ ಪ್ರಾರಂಭದಲ್ಲಿ ಕೃಷ್ಣನು ಅರ್ಘ್ಯ ಬಿಡುವಾಗ ಕುಬೇರನ ಮಗನಾದ ಗಯನ ಬೆವರ ಹನಿ ಬಿದ್ದು ಮಲಿನವಾಗುತ್ತದೆ. ಅರ್ಘ್ಯವನ್ನು ಮಲಿನ ಮಾಡಿದವರನ್ನು 8 ದಿನದೊಳಗಾಗಿ ಕೊಲ್ಲುತ್ತೇನೆ. ಇಲ್ಲವಾದರೆ ತಾನೇ ಪ್ರಾಣ ತ್ಯಾಗ ಮಾಡುತ್ತೇನೆಂದು ಕೃಷ್ಣ ಶಪಥ ಮಾಡುತ್ತಾನೆ. ಕೊನೆಗೆ ನಾರದರಿಂದ ಕೃಷ್ಣನಿಗೆ ಗಯನು ಅರ್ಜುನನ ಆಶ್ರಯದಲ್ಲಿರುವುದು ತಿಳಿಯುತ್ತದೆ.
ಕೃಷ್ಣ ಅರ್ಜುನನೊಂದಿಗೆ ಯುದ್ದ ಮಾಡಲು ಸಿದ್ದನಾಗುತ್ತಾನೆ. ಯುದ್ದ ನಡೆದರೂ ಕೊನೆಗೆ ತನ್ನ ಲೀಲಾ ನಾಟಕದ ಕಥೆಯನ್ನು ಅರ್ಜುನನಲ್ಲಿ ಹೇಳುತ್ತಾನೆ. ಮುಂದೆ ಬರುವ ಭಾರತ ಯುದ್ದದಲ್ಲಿ ತನ್ನ ಸಂಬಂಧಿಕರೊಂದಿಗೆ ಯುದ್ದ ಮಾಡಲು, ಅವರನ್ನು ಎದುರಿಸಲು ಅರ್ಜುನನಿಗೆ ಧೈರ್ಯ ಎಷ್ಟಿದೆ ಎಂದು ಪರೀಕ್ಷಿಸಲು ಈ ನಾಟಕವಾಡಿ ಅರ್ಜುನನಿಗೆ ಬುದ್ದಿ ಹೇಳುತ್ತಾನೆ.
ಇನ್ನು ವೀರ ಅಭಿಮನ್ಯು ಪ್ರಸಂಗದಲ್ಲಿ ಪಾಂಡವರು ಮತ್ತು ಕೌರವರ ನಡುವೆ ಕುರುಕ್ಷೇತ್ರ ಯುದ್ದ ಪ್ರಾರಂಭವಾದ ಸಮಯದಲ್ಲಿ ಪಾಂಡವರು ಸೋಲು ಗೆಲುವಿನ ನಡುವೆ ಹೋರಾಡುವ ಸ್ಥಿತಿ ಬಂದೊದಗಿತ್ತು. ಈ ಸಂದರ್ಭದಲ್ಲಿ ಅಭಿಮನ್ಯುವಿಗೆ ಚಕ್ರವ್ಯೂಹವನ್ನು ಬೇಧಿಸುವ ತಂತ್ರ ತಿಳಿದಿತ್ತು. ಹಿಂದೆ ತಾಯಿಯ ಗರ್ಭದಲ್ಲಿದ್ದಾಗ ಚಕ್ರವ್ಯೂಹದೊಳಗೆ ನುಗ್ಗುವ ಮಾಹಿತಿಯನ್ನು ಸುಭದ್ರೆಗೆ ಕೃಷ್ಣ ಹೇಳಿದ್ದ.
ಗರ್ಭದಲ್ಲಿರುವಾಗಲೇ ಈ ವಿಷಯ ಅಭಿಮನ್ಯುವಿನ ಮನಸ್ಸಿನಲ್ಲಿ ಸ್ಥಾಪಿತವಾಗಿತ್ತು. ಚಕ್ರವ್ಯೂಹವನ್ನು ಬೇಧಿಸಲು ತಿಳಿದಿದ್ದ ಅಭಿಮನ್ಯು ಬಂದ ಎದುರಾಳಿಗಳನ್ನೆಲ್ಲ ಸೋಲಿಸಿದ. ಕೊನೆಗೆ ಚಕ್ರವ್ಯೂಹದೊಳಗೆ ನುಗ್ಗಿದ ಅಭಿಮನ್ಯುವಿಗೆ ಅದರಿಂದ ಹೊರಗೆ ಬರುವ ವಿದ್ಯೆ ಅವನಿಗೆ ಗೊತ್ತಿರಲಿಲ್ಲ. ಕೊನೆಗೆ ಎಲ್ಲರೊಂದಿಗೆ ಹೋರಾಡಿದರೂ ಜಯ ಸಿಗಲಿಲ್ಲ. ವೀರ ಮರಣವನ್ನಪ್ಪಿದ.












Click it and Unblock the Notifications