Karnataka: ವಾಯುಮಾಲಿನ್ಯ ನಿಯಂತ್ರಿಸಿದರೆ ನೀವು ಎಷ್ಟು ಹೆಚ್ಚು ವರ್ಷ ಬದುಕುತ್ತೀರಾ ಗೊತ್ತಾ?, ಇಲ್ಲಿದೆ ಮಾಹಿತಿ
ಬೆಂಗಳೂರು, ಆಗಸ್ಟ್ 30: ವಿಶ್ವ ಆರೋಗ್ಯ ಸಂಸ್ಥೆ ಸೂಚಿಸುವಂತೆ ಕರ್ನಾಟಕ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಂಡಿದ್ದೇ ಆದಲ್ಲಿ ಮನುಷ್ಯ ಆಯಸ್ಸು ಇನ್ನಷ್ಟು ವೃದ್ಧಿಯಾಗುತ್ತದೆ. ನಿಮ್ಮ ಜೀವಿತಾವಧಿ ಹೆಚ್ಚಾಗುತ್ತದೆ ಎಂದು ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್ ಮಂಗಳವಾರ ಬಿಡುಗಡೆ ಮಾಡಿದ ''ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್(AQLI)'' ವರದಿ ಬಹಿರಂಗಪಡಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪಿಎಂ2.5 ಮಾರ್ಗಸೂಚಿ 5 μg/m³ ರ ಪ್ರಕಾರ, ಕರ್ನಾಟಕವು ಸೂಕ್ಷ್ಮವಾದ ಕಣಗಳ ವಾಯು ಮಾಲಿನ್ಯ ನಿಯಂತ್ರಿಸಲು ಕ್ರಮ ವಹಿಸಿದ್ದೇ ಆದರೆ ರಾಜ್ಯದ ಜನರ ಜೀವಿತಾವಧಿಯು 2.4 ವರ್ಷಗಳಷ್ಟು ಹೆಚ್ಚಾಗುತ್ತದೆ. ಅಂದರೆ ಉದಾಹರಣಗೆ ಒಬ್ಬರು ಜೀವಿತಾವಧಿ 50ವರ್ಷವಾದರೆ, ಅವರು 52.4 ವರ್ಷ ಜೀವಿಸಬಲ್ಲರು ಎಂದು ವರದಿ ಹೇಳುತ್ತದೆ.

ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 10 ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯವು ಒಂದು. ಕರ್ನಾಟಕದ ವಾರ್ಷಿಕ ಸರಾಸರಿ ಕಣಗಳ ಸಾಂದ್ರತೆಯು 29.5 μg/m³ ಆಗಿದೆ. ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್(AQLI) ವರದಿಯು ಭಾರತದ ಎಲ್ಲಾ 1.3 ಶತಕೋಟಿ ಜನರು ವಾರ್ಷಿಕ ಸರಾಸರಿ ಕಣಗಳ ಮಾಲಿನ್ಯದ ಮಟ್ಟ ಮೀರಿದ ಪ್ರದೇಶಗಲಲ್ಲಿ ಜೀವಿಸುತ್ತಿದ್ದಾರೆ. ಹೀಗಾಗಿ ಗಾಳಿಯ ಗುಣಮಟ್ಟ ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ.
ಸರ್ಕಾರಕ್ಕೆ ಈ ವರದಿ ಎಚ್ಚರಿಕೆಯ ಗಂಟೆ
ಭಾರತದ ಶೇಕಡಾ 67.4 ರಷ್ಟು ಜನರು ದೇಶದ ಸ್ವಂತ ರಾಷ್ಟ್ರೀಯ ವಾಯು ಗುಣಮಟ್ಟದ ಮಾನದಂಡವಾದ 40 μg/m3 ಅನ್ನು ಮೀರಿದ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ ತಿಳಿದು ಬಂದಿದೆ.
ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಗ್ರೀನ್‌ಪೀಸ್ ಇಂಡಿಯಾ ಮುಖ್ಯಸ್ಥ ಅವಿನಾಶ್ ಕುಮಾರ್ ಚಂಚಲ್ ಅವರು, ವಿಶ್ವವಿದ್ಯಾಲಯದ ಈ ವರದಿಯು ಕರ್ನಾಟಕದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆ ಆಗಬೇಕು. ಕರ್ನಾಟಕದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು. ಮಾಲಿನ್ಯವನ್ನು ಕಡಿಮೆ ಮಾಡಲು ಕ್ರಿಯಾ ಯೋಜನೆ ಹೊಂದದೇ ಇರುವ ಅನೇಕ ನಗರಗಳು ರಾಜ್ಯದಲ್ಲಿ ಇವೆ ಎಂದು ಅವರು ವಿವರಿಸಿದರು.

ಸಾರ್ವಜನಿಕ ಆರೋಗ್ಯ ಬಿಕಟ್ಟು
ತ್ಯಾಜ್ಯ, ಪಳೆಯುಳಿಕೆ ಸುಡುವುದು, ಇಂಧನ ಹೊರಸೂಸುವಿಕೆ, ಇಲ್ಲವೇ ನಿರ್ಮಾಣ ಹಂತದ ಸ್ಥಳ, ರಸ್ತೆ ಅಭಿವೃದ್ಧಿ ಕಾರ್ಯಗಳಲ್ಲಿ ವಾಯುಮಾಲಿನ್ಯಗೊಳ್ಳುತ್ತದೆ. ಇವೆಲ್ಲ ವಲಯಗಳ ಕೊಡುಗೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಶೀಘ್ರವೇ ಯೋಜನೆ ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ಮುಂಬರುವ ವರ್ಷಗಳಲ್ಲಿ ರಾಜ್ಯವು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿಗೆ ಒಳಗಾಗಬೇಕಾಗುತ್ತದೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಕಾರುಗಳನ್ನು ಕೇಂದ್ರೀಕೃತವಾಗಿಟ್ಟುಕೊಂಡು ರಸ್ತೆ ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿರುವ ಮೇಲ್ಸೇತುವೆ ಹಾಗೂ ರಸ್ತೆ ಅಂಡರ್ ಪಾಸ್ (ಸುರಂಗ) ನಿರ್ಮಾಣವು ಹೆಚ್ಚಾಗಿ ಸಾರ್ವಜನಿಕ ಸಾರಿಗೆಗಿಂತ ಖಾಸಗಿ ವಾಹನಗಳನ್ನು ಉತ್ತೇಜಿಸುತ್ತವೆ.
ಸಾರ್ವಜನಿಕ ಸಾರಿಗೆ ಮೂಲಸೌಕರ್ಯಕ್ಕೆ ಒತ್ತು ನೀಡಿ
ಆದ್ದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅದ್ಯತೆ ನೀಡಬೇಕು. ಸರ್ಕಾರಿ ಸಾರಿಗೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರ ಗಮನ ಹರಿಸಬೇಕು. ಅದಾಗಲೇ ಮಾಲಿನ್ಯ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.
ಭಾರತದಲ್ಲಿ ವಾಯು ಮಾಲಿನ್ಯವು ಮನುಷ್ಯರ ಆರೋಗ್ಯದ ಮೇಲೆ ಭಾರೀ ಪ್ರಯಾಣದಲ್ಲಿ ಅಪಾಯ ತಂದೊಡ್ಡುವ ಸಾಧ್ಯತೆಗಳು ಇರುತ್ತವೆ. ಇದರಿಂದ ಭಾರತೀಯರ ಆಯಸ್ಸಿನಲ್ಲಿ ಸರಾಸರಿ 5.3 ವರ್ಷದಷ್ಟು ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆ ಹಾಗೂ ಇನ್ನಿತರ ರೋಗಗಳು ಎದುರಾಗಿ ಜೀವಿತಾವಧಿ ಇಳಿಕೆ ಆಗುತ್ತದೆ. ಅಲ್ಲದೇ ಇದು ಮಗು ಮತ್ತು ತಾಯಿಗೆ ಅಪೌಷ್ಠಿಕತೆ ತಂದೊಂಡ್ಡಿ ಅವರ 1.8 ವರ್ಷಗಳ ಜೀವಿತಾವಧಿ ಕಿತ್ತುಕೊಳ್ಳುತ್ತದೆ ಎಂದು ವರದಿ ತಿಳಿಸಿದೆ.












Click it and Unblock the Notifications