Karnataka Investors Meet: ಜಾಗತಿಕ ಹೂಡಿಕೆದಾರರ ಸಮಾವೇಶ 2025: ಸಿದ್ಧತೆ, ಅಪ್ಡೇಟ್ ಇಲ್ಲಿದೆ
ಬೆಂಗಳೂರು, ಜನವರಿ 05: ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಬೃಹತ್ ಜಾಗತಿಕ ಹೂಡಿಕೆದಾರರ ಸಮಾವೇಶ 2025 ಆಯೋಜನೆಗೊಳ್ಳುತ್ತಿದೆ. ಮುಂದಿನ ತಿಂಗಳು ಫೆಬ್ರವರಿಯ ಎರಡನೇ ವಾರದಲ್ಲಿ ಈ ಸಮಾವೇಶ ಜರುಗಲಿದೆ. ದೇಶ, ವಿದೇಶಗಳಿಂದ ವಿವಿಧ ಕಂಪನಿಗಳು ಸಿಇಒ, ಅಧ್ಯಕ್ಷರು, ಸಂಸ್ಥಾಪಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಬರದ ಸಿದ್ಧತೆ ನಡೆಸಿದೆ.
ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆ ದಾರರ ಸಮಾವೇಶವು ಫೆಬ್ರವರಿ 12 ರಿಂದ 14ರವರೆಗೆ ಮೂರು ದಿನಗಳ ಕಾಲ ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ನಡೆಯುತ್ತಿರುವ ಸಿದ್ಧತೆಗಳನ್ನು ಶನಿವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸಮಗ್ರವಾಗಿ ಪರಿಶೀಲಿಸಿದರು. ಅಧಿಕಾರಿ ಸಿಬ್ಬಂದಿಗಳಿಗೆ ಅಗತ್ಯ ಸೂಚನೆ ನೀಡಿದರು.

ಉನ್ನತ ಮಟ್ಟದ ಅಧಿಕಾರಿಗಳ ಜತೆ ಉದ್ಯೋಗ ಮಿತ್ರ ಕಚೇರಿಯಲ್ಲಿ ಸಮಾಲೋಚಿಸಿದರು. ಬಳಿಕ ಸಮಾವೇಶವು ಅಚ್ಚು ಕಟ್ಟಾಗಿ ನಡೆಯಲು ಏನೆಲ್ಲ ಬೇಕು ಎಂಬುದರ ಸೂಕ್ತ ಸಲಹೆಗಳನ್ನು ನೀಡಿ, ಮುಂದಿನ ವಾರ ಮತ್ತೊಂದು ಸುತ್ತಿನ ಪರಿಶೀಲನೆ ನಡೆಸುವುದಾಗಿ ಹೇಳಿದರು.
ಜಾಗತಿಕ ಹೂಡಿಕೆದಾರರ ಸಮಾವೇಶವು ಫೆಬ್ರವರಿ 11ರ ಸಂಜೆಯಂದೇ ಉದ್ಘಾಟನೆ ಆಗಲಿದೆ. ಈ ಸಮಾವೇಶವು ಅಭೂತಪೂರ್ವ ರೀತಿಯಲ್ಲಿ ಯಶಸ್ಸುಗಳಿಸುವ ಸಂಬಂಧ ಪ್ರತಿಯೊಬ್ಬರೂ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಸಮಾವೇಶದ ಅತಿಥಿಗಳಿಗೆ ವಿಶಿಷ್ಟ ಉಡುಗೊರೆ
ಸಮಾವೇಶದಲ್ಲಿ ಯಾವ್ಯಾವ ಗೋಷ್ಠಿಗಳಲ್ಲಿ ಯಾರಾರು ಮಾತನಾಡಬೇಕು ಎನ್ನುವುದನ್ನು ಆಖೈರು ಮಾಡಲಾಗುತ್ತಿದೆ. ಜತೆಗೆ ಅತಿಥಿಗಳಿಗೆ ಕರ್ನಾಟಕದ ಅಸ್ಮಿತೆ ಸಾರುವಂತಹ ರೇಷ್ಮೆ ಸ್ಕಾರ್ಫ್, ಮೈಸೂರು ಸ್ಯಾಂಡಲ್ ಸೋಪ್ ಮುಂತಾದ ವಿಶಿಷ್ಟ ವಸ್ತುಗಳನ್ನು ಉಡುಗೊರೆಯಾಗಿ ನೀಡುವ ಬಗ್ಗೆಯೂ ಚರ್ಚೆಯಾಯಿತು.
ಫೆಬ್ರವರಿ 12, 13 ಮತ್ತು 14ರಂದು ಮೂರು ದಿನಗಳ ಕಾಲ ಪೂರ್ಣ ಪ್ರಮಾಣದಲ್ಲಿ ಹಲವು ವಿಚಾರಗಳ ಕುರಿತು ಗೋಷ್ಠಿಗಳು ನಡೆಯುತ್ತವೆ. ಅನೇಕ ಕಂಪನಿಗಳು ಭಾಗವಹಿಸಲಿದ್ದು, ಕರ್ನಾಟಕದ ಜೊತೆಗೆ ಹೂಡಿಕೆ ಕುರಿತಾದ ಒಡಂಬಡಿಕೆಗಳು ನಡೆಯಲಿವೆ. ಪ್ರತಿಯೊಂದು ವಿಭಾಗಕ್ಕೂ ಸೂಕ್ತ ಆದ್ಯತೆ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಪರಿಶೀಲನೆ ವೇಳೆ, ಸಮಾವೇಶದ ಪೂರ್ವಭಾವಿ ಕೆಲಸ ಕಾರ್ಯಗಳ ಕುರಿತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಮತ್ತುತರರು ಮಾಹಿತಿ ನೀಡಿದರು.
ವಿದೇಶಿ ಕಂಪನಿಗಳಿಗೆ ಸಮಾವೇಶಕ್ಕೆ ಆಹ್ವಾನ
ಈಗಾಗಲೇ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಕೆಲವು ವಿದೇಶಗಳನ್ನು ಸುತ್ತಿದ್ದಾರೆ. ದಕ್ಷಿಣ ಕೋರಿ, ಜರ್ಮನಿ, ಜಪಾನ್ ಸೇರಿದಂತೆ ಅನೇಕ ಕಂಪನಿಗಳ ಮುಖ್ಯಸ್ಥರ ಜೊತೆಗೆ ಚರ್ಚಿಸಿದ್ದಾರೆ. ವಿದೇಶದಲ್ಲಿ ರೋಡ್ ಶೋ ನಡೆಸಿ, ಕರ್ನಾಟಕದಲ್ಲಿರುವ ಸಂಪನ್ಮೂಲಗಳ ಲಭ್ಯತೆ, ಬಂಡವಾಳ ಹೂಡಿಕೆಗೆ ಸಿಗುವ ಆದ್ಯತೆ, ಸರ್ಕಾರದ ಸಹಕಾರ ಎಲ್ಲವನ್ನು ತಿಳಿಸಿದ್ದಾರೆ. ಹೀಗಾಗಿ ಕೆಲ ಕಂಪನಿಗಳು ಉತ್ಪಾದನೆ ವಲಯದಲ್ಲಿ, ಬಿಡಿ ಭಾಗಗಳ ಘಟಕ ಸ್ಥಾಪನೆಗಾಗಿ ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಒಪ್ಪಂದಕ್ಕೆ ಸಹಿ ಹಾಕಿವೆ. ಈ ವೇಳೆ ಸಚಿವರು ಫೆಬ್ರವರಿಯಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನಿಸಿದ್ದಾರೆ.












Click it and Unblock the Notifications