ಜಕ್ಕೂರು ಬಳಿ ನಮ್ಮ ಮೆಟ್ರೋ ಕಾಮಗಾರಿಗೆ ಹೈಕೋರ್ಟ್ ತಡೆ
ಬೆಂಗಳೂರು, ಸೆಪ್ಟೆಂಬರ್ 30: ಜಕ್ಕೂರು ಏರೋಡ್ರೋಮ್ ಬಳಿ ನಮ್ಮ ಮೆಟ್ರೋ ಕಾಮಗಾರಿಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ಮಾರ್ಗ ಜಕ್ಕೂರು ಮೂಲಕ ಹಾದು ಹೋಗಲಿದೆ.
ವಕೀಲ ಅಜಯಕುಮಾರ್ ಪಾಟೀಲ ಅವರು ಸಲ್ಲಿಕೆ ಮಾಡಿದ್ದ ಪಿಐಎಲ್ ವಿಚಾರಣೆ ನಡೆಸಿದ ನ್ಯಾಯಾಲಯ ಏರೋಡ್ರೋಮ್ ಪಶ್ಚಿಮ ಭಾಗದಲ್ಲಿ ಎತ್ತರಿಸಿದ ಮೆಟ್ರೋ ಸೇರಿದಂತೆ ಯಾವುದೇ ನಿರ್ಮಾಣ ಚಟುವಟಿಕೆ ನಡೆಸದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ನಿಷೇಧಿತ ವಲಯದಲ್ಲಿ ಯಾವುದೇ ನಿರ್ಮಾಣ ಮಾಡುವಂತಿಲ್ಲ ಎಂದು ಪಿಐಎಲ್‌ನಲ್ಲಿ ಮನವಿ ಮಾಡಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಕಾಮಗಾರಿಗೆ ತಡೆ ನೀಡಿದೆ.

1934ರ ಏರ್ ಕ್ರಾಫ್ಟ್ ಕಾಯ್ದೆ ಪ್ರಕಾರ ಕಾಮಗಾರಿಗೂ ಮೊದಲು ಏರೋಡ್ರೋಮ್‌ನಿಂದ ಎನ್‌ಒಸಿ ಪಡೆಯಬೇಕು. ರನ್ ವೇ ಇಂದ 60 ಮೀಟರ್ ಅಂತರದಲ್ಲಿ ಯಾವುದೇ ನಿರ್ಮಾಣ ಕಾರ್ಯ ಮಾಡುವಂತಿಲ್ಲ. ಆದರೆ, ಪಸ್ತಾವಿತ ಮೆಟ್ರೋ ಮಾರ್ಗ ನಿಷೇಧಿತ ವಲಯದ ವ್ಯಾಪ್ತಿಯಲ್ಲಿಯೇ ಬರಲಿದೆ.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು 2013ರಲ್ಲಿ ಫ್ಲೈ ಓವರ್ ನಿರ್ಮಾಣ ಮಾಡುವಾಗಲೂ ಈ ನಿಯಮವನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಏರೋಡ್ರೋಮ್ ಜಾಗವನ್ನು ಉಳಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಏರೋಡ್ರೋಮ್ ಜಾಗವನ್ನು ಒತ್ತುವರಿ ಮಾಡಲು ಹಿಂದೆಯೂ ಪ್ರಯತ್ನ ನಡೆದಿತ್ತು. ಅತ್ಯಂತ ಹಳೆಯ ಮತ್ತು ಬಡ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗುವ ಏರೋಡ್ರೋಮ್ ಉಳಿಸಬೇಕು ಎಂದು ಅರ್ಜಿಯಲ್ಲಿ ಕೋರ್ಟ್‌ಗೆ ಮನವಿ ಮಾಡಲಾಗಿದೆ.












Click it and Unblock the Notifications