Bengaluru 2nd Airport: ಇಂದು ಏರ್‌ಪೋರ್ಟ್ ನಿರ್ಮಾಣಕ್ಕೆ ಜಾಗ ಫೈನಲ್, ಪ್ರಸ್ತಾವನೆ ಸಲ್ಲಿಕೆ ಯಾವಾಗ?
ಬೆಂಗಳೂರು, ಆಗಸ್ಟ್ 06: ರಾಜ್ಯ ರಾಜಧಾನಿ ಬೆಂಗಳೂರಿಗೆ ಅಗತ್ಯವಾಗಿರುವ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಸಿದ್ಧತೆಗಳು ಭರದಿಂದ ಸಾಗಿದೆ. ಈ ಕುರಿತು ಎಂಬಿ ಪಾಟೀಲ್ ಅವರು ಸರಣಿ ಸಭೆ ನಡೆಸಿದ್ದಾರೆ. ಸರ್ಕಾರ ಐಡೆಕ್ ಸಂಸ್ಥೆಗಳ ಜೊತೆಗೂಡಿ ಒಟ್ಟು ಒಂಬಂತ್ತು ಸ್ಥಳ ಗುರುತಿಸಿದ್ದು, ಎರಡು ಜಾಗ ಕೈ ಬಿಡಲಾಗಿದೆ.
ಬೆಂಗಳೂರಿಗೆ ಇನ್ನೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏಳು ಸ್ಥಳಗಳನ್ನು ಗುರುತಿಸಲಾಗಿದೆ. ಇದೇ ವಿಚಾರವಾಗಿ ಇಂದು ಮಂಗಳವಾರ ಇಲ್ಲವೇ ನಾಳೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರಕ್ಕೆ ಸಲಿಸಲು ಸಚಿವರು, ಉಪಮುಖ್ಯಮಂತ್ರಿಗಳು ತಿರ್ಮಾನಿಸಿದ್ದಾರೆ.

ಬೆಂಗಳೂರಿಗೆ ಹೊಸ ವಿಮಾನ ನಿಲ್ದಾಣ ಜಾಗ ಫೈನಲ್, ಪ್ರಸ್ತಾವನೆ ಕುರಿತು ಸೋಮವಾರ ಕೈಗಾರಿಕೆ ಸಚಿವ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಭೆ ನಡೆಸಿದರು. ಈ ವೇಳೆ ಜಾಗ ಅಂತಿಮ ಮಾಡಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ತ್ವರಿತವಾಗಿ ಪ್ರಸ್ತಾವನೆ ಸಲ್ಲಿಸಲು ಈ ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದ ಎಲ್ಲ ಅಂಶ ಗಮನಿಸಿ ಸೂಕ್ತ ನಿರ್ಧಾರ
ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಅವರು ಈಗಾಗಲೇ ಹತ್ತಕ್ಕೂ ಹೆಚ್ಚು ಸರಣಿ ಸಭೆಗಳನ್ನು ಮಾಡಿದ್ದಾರೆ. ಬೆಂಗಳೂರು ನಗರದ ಅಭಿವೃದ್ಧಿ, ಅವಕಾಶ ಮತ್ತು ಪ್ರಯಾಣಿಕರು ಹಾಗೂ ಸರಕು ಸಾಗಣೆ ಒತ್ತಡ ಪರಿಗಣಿಸಿ, ಮುಂದಿನ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು.

ಸಿಎಂ ಸಭೆ ಬಳಿಕ ಜಾಗ ಫೈನಲ್: ಸಚಿವ
ಸಚಿವ ಎಂಬಿ ಪಾಟೀಲ್ ಅವರು ಮಾತನಾಡಿ, ಹೊಸ ವಿಮಾನ ನಿಲ್ದಾಣಕ್ಕೆ ಐಡೆಕ್ ಸಂಸ್ಥೆಯು 9 ಜಾಗಗಳನ್ನು ಗುರುತಿಸಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಎರಡು ಸ್ಥಳಗಳನ್ನು ಬಿಟ್ಟು, ಏಳ ಸ್ಥಳಗಳನ್ನು ಲಿಸ್ಟ್‌ನಲ್ಲಿ ಇಟ್ಟುಕೊಳ್ಳಲಾಗಿದೆ. ಸದ್ಯ ಸಿಎಂ ಜೊತೆಗೆ ಮತ್ತೊಂದು ಸಭೆ ನಡೆಸಿ, ಜಾಗ ಯಾವುದು ಸೂಕ್ತ ಎಂದು ಅಂತಿಮಗೊಳಿಸಲಾಗುವುದು. ಉಳಿದ ಸ್ಥಳಗಳ ಮಾಹಿತಿಯು ಪ್ರಸ್ತಾವನೆಯಲ್ಲಿರಲಿದ್ದು, ಅದನ್ನು ಆದಷ್ಟು ಶೀಘ್ರವೇ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಕಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಾಗ ವಿಚಾರದಲ್ಲಿ ರಾಜಕೀಯ ಇಲ್ಲ, ಮಾನದಂಡ ಇದೆ
ಬೆಂಗಳೂರಿನ ಯಾವ ಪ್ರದೇಶ, ಜಾಗದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸಬೇಕು. ಎಲ್ಲಿ ನಿರ್ಮಿಸಿದರೆ ಸೂಕ್ತ ಎನ್ನುವುದನ್ನು ಬೆಂಗಳೂರು ಮತ್ತು ಕರ್ನಾಟಕದ ಹಿತದೃಷ್ಟಿಯಿಂದ ತೀರ್ಮಾನಿಸಲಾಗುವುದು. ಇದರಲ್ಲಿ ಯಾವುದೇ ರಾಜಕೀಯ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಎಂಬಿ ಪಾಟೀಲರು, ಪ್ರಾಧಿಕಾರವು 15 ಮಾನದಂಡಗಳನ್ನು ಇಟ್ಟುಕೊಂಡಿದೆ. ಅದರಂತೆ ಜಾಗ ನಿರ್ಧಾರವಾಗಲಿದೆ ಎಂದು ತಿಳಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಏರ್‌ಪೋರ್ಟ್ ನಿರ್ಮಾಣ ಕುರಿತಂತೆ ಐಡೆಕ್ ಮತ್ತು ಬೋಸ್ಟನ್ ಕನ್ಸಲ್ಟೆನ್ಸಿ ಗ್ರೂಪ್ ಸಂಸ್ಥೆಗಳು ಸಿದ್ಧಪಡಿಸಿರುವ ಪ್ರಾತ್ಯಕ್ಷಿಕೆ ಡಿಸಿಎಂ ಹಾಗೂ ಸಚಿವರು ವೀಕ್ಷಿಸಿದರು. ಸಭೆಯಲ್ಲಿ ನಗರಾಭಿವೃದ್ಧಿ, ಬಿಬಿಎಂಪಿ ಮೂಲಸೌಕಯಾಭೀವೃದ್ಧಿ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ತಮಿಳುನಾಡಿನಿಂದ ಪ್ರಸ್ತಾವನೆ ಸ್ವೀಕರಿಸಿಲ್ಲ: ಕೇಂದ್ರ
ಇನ್ನೂ ಕರ್ನಾಟಕ ಸರ್ಕಾರ ಘೋಷಿಸುತ್ತಿದ್ದಂತೆ ಹೊಸೂರಿನಲ್ಲಿ 2000 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ತಿಳಿಸಿದ್ದ ತಮಿಳುನಾಡು ಸರ್ಕಾರ ಈವರೆಗೆ ಯಾವುದೇ ಪ್ರಸ್ತಾವನೆಯನ್ನು ಕೇಂದ್ರ ಸಲ್ಲಿಕೆ ಮಾಡಿಲ್ಲ ಎಂದು ಲೋಕಸಭೆಯಲ್ಲಿ ಇತ್ತೀಚೆಗೆ ಕೇಳಲಾದ ಪ್ರಶ್ನೆಗಳಿಗೆ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವರು ಮಾಹಿತಿ ನೀಡಿದ್ದರು. ಈ ಮೂಲಕ ನೆರೆ ರಾಜ್ಯ ಬರೀ ಘೋಷಣೆಗೆ ಸಿಮೀತವಾಯಿತೇ ಎಂದನಿಸುತ್ತಿದೆ. ಇತ್ತ ಕರ್ನಾಟಕದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮಹತ್ವದ ಹೆಜ್ಜೆ ಇಟ್ಟಿರುವುದು ಶ್ಲಾಘನೀಯವಾಗಿದೆ.












Click it and Unblock the Notifications