New Cubbon Park: ಬೆಂಗಳೂರಲ್ಲಿ ತಲೆ ಎತ್ತಲಿದೆ ಮತ್ತೊಂದು 'ಕಬ್ಬನ್ ಉದ್ಯಾನ', ಎಲ್ಲಿ?
ಬೆಂಗಳೂರು, ಅಕ್ಟೋಬರ್ 08: ನಗರೀಕರಣ, ಅಭಿವೃದ್ಧಿ, ಸಂಚಾರ ದಟ್ಟಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಡೆಯುತ್ತಿರುವ ಕೆಲಸಗಳಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಸಿರಿನ ಹೊದಿಕೆ ಪ್ರಮಾಣ ಕಡಿಮೆ ಆಗುತ್ತಿದೆ. ಈ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಅರಣ್ಯ ಇಲಾಖೆಯು ಬೆಂಗಳೂರಿನಲ್ಲಿ ಮತ್ತೊಂದು 'ಕಬ್ಬನ್ ಪಾರ್ಕ್' ನಿರ್ಮಾಣಕ್ಕೆ ಮುಂದಾಗಿದೆ.
ಹೌದು, ಈ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ವತಿಯಿಂದ ನಗರ ಅರಣ್ಯ ಭವನದಲ್ಲಿ ಸೋಮವಾರ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಸಚಿವರು, ನಗರದ ಹರಿಸು ಹೊದಿಕೆ ಹೆಚ್ಚಿಸಲು ಯಲಹಂಕದಲ್ಲಿ ಕಬ್ಬನ್ ಉದ್ಯಾನ ರೀತಿಯಲ್ಲಿ ಪಾರ್ಕ್ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಯಲಹಂಕದ ಮಾದರಾಯಪ್ಪನಹಳ್ಳಿಯಲ್ಲಿ 153 ಎಕರೆ ಅರಣ್ಯ ಪ್ರದೇಶದಲ್ಲಿ ಕಬ್ಬನ್ ಉದ್ಯಾನ ಮಾದರಿಯಲ್ಲಿ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ ಅಭಿವೃದ್ಧಿಪಡಿಸಲಾಗುತ್ತದೆ. ಇದರಿಂದ ಬೆಂಗಳೂರು ಹಸಿರು ಹೊದಿಕೆಗೆ ಕೊಡುಗೆ ನೀಡಲಾಗುವುದು ಎಂದು ಹೇಳಿದರು.
ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ ಸುಮಾರು 80 ಚದರ ಕಿಲೋ ಮಿಟರ್‌ಗೂ ಹೆಚ್ಚು ಅರಣ್ಯ ಪ್ರದೇಶವಿದೆ. ನಗರದಲ್ಲಿ ಹಸಿರು ಹೊದಿಕೆ ಶೇಕಡಾ 6.81 ರಷ್ಟಿದೆ. ಈವರೆಗೆ ಐದು ಕಿಲೋ ಮೀಟರ್ ನಷ್ಟು ಹಸಿರು ಹೊದಿಕೆ ಕಡಿಮೆ ಆಗಿದೆ. ಇದರ ವಿರುದ್ಧ ಹಸಿರು ಹೊದಿಕೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಅದರ ಫಲವಾಗಿ ಯಲಹಂಕದಲ್ಲಿ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು.
ಭಾರತೀಯ ಅರಣ್ಯ ಸಮೀಕ್ಷಾ ವರದಿಯಂತೆ ಬೆಂಗಳೂರು ಭಾರತದಲ್ಲಿ ಅತೀ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ನಗರವಾಗಿದೆ. ಕಬ್ಬನ್ ಪಾರ್ಕ್ ನಂತೆ ಸಸ್ಯೋದ್ಯಾನ ಕಂಡ ಬರಲಿದೆ. ಹೀಗಾಗಿ ಇದಕ್ಕೆ 'ಸಾಲು ಮರದ ತಿಮ್ಮಕ್ಕ' ಸಸ್ಯೋದ್ಯಾನ ಎಂದು ಹೆಸರಿಡಲಾಗುವುದು ಎಂದು ಸಚಿವರು ಅಪ್ಡೇಟ್ ಕೊಟ್ಟಿದ್ದಾರೆ.
ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು ವನ್ಯಜೀವಿ ಮಂಡಳಿ ಸಮ್ಮತಿ
ಬೆಂಗಳೂರು ನಗರದ ಹೆಸರುಘಟ್ಟ ಹುಲ್ಲುಗಾವಲಿನ ಪ್ರದೇಶವನ್ನು 'ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ' ಎಂದು ಘೋಷಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆ ಅಂಗೀಕಾರ ನೀಡಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಇದೇ ವೇಳೆ ತಿಳಿಸಿದರು.
ಹೆಸರಘಟ್ಟವನ್ನು ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಬೇಕು ಎಂಬುದು ಬಹು ದಿನಗಳ ಬೇಡಿಕೆಯಾಗಿತ್ತು. ಈ ಬಗ್ಗೆ ಆಂದೋಲನವೂ ನಡೆದಿತ್ತು. ಪ್ರಕೃತಿ ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿರುವ ಸರ್ಕಾರ ಇಂದು ತನ್ನ ಮಹತ್ವದ ನಿರ್ಧಾರ ಪ್ರಕಟಿಸಿದೆ ಎಂದರು..












Click it and Unblock the Notifications