'ಬ್ರ್ಯಾಂಡ್ ಬೆಂಗಳೂರು' ಜಾರಿಗೂ ಮೊದಲು ಈ ಸಮಸ್ಯೆಗಳನ್ನು ಪರಿಹರಿಸಿ: ಗ್ರೂಪ್ ಸಿಟಿಜನ್ ಪತ್ರ
ಬೆಂಗಳೂರು, ಅಕ್ಟೋಬರ್ 26: ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಉಪಕ್ರಮ ಅಡಿ ನಗರವನ್ನು ಅಭಿವೃದ್ಧಿ ಪಡಿಸಿ ಅನೇಕ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ ದೊರಕಿಸಿಕೊಡುವ ಬಗ್ಗೆ ಹೇಳುವುದು ಸುಲಭ. ಆದರೆ ಅಗತ್ಯ ಮೂಲ ಸೌಕರ್ಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಮುಖ್ಯವಾಗಿದೆ. ಉಪಕ್ರಮ ಅನುಷ್ಠಾನಕ್ಕೂ ಮೊದಲು ಸಾಮಾನ್ಯ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಗ್ರೂಪ್ ಸಿಟಿಜನ್ ಆಕ್ಷನ್ ಫೋರಂ (CAF) ಒತ್ತಾಯಿಸಿದೆ.
ಈ ಕುರಿತು ವೇದಿಕೆಯು ಉಪ ಮುಖ್ಯಮಂತ್ರಿಗಳೂ ಆಗಿರುವ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರ ತನ್ನ ಭವ್ಯವಾದ 'ಬ್ರಾಂಡ್ ಬೆಂಗಳೂರು' ಯೋಜನೆ ಆರಂಭಿಸುವ ಮೊದಲು ಮಳೆನೀರು ಚರಂಡಿಗಳನ್ನು ಸರಿಪಡಿಸಬೇಕು. ಸಮರ್ಪಕ ಕಸ ವಿಲೇವಾರಿ ಆಗುವಂತೆ ನೋಡಿಕೊಳ್ಳಬೇಕು. ಕೆರೆಗಳನ್ನು ಪುನರುಜ್ಜೀವನಗೊಳಿಸಬೇಕು ಮತ್ತು ರಸ್ತೆಗಳು ಮತ್ತು ಬೀದಿ ದೀಪಗಳನ್ನು ಸರಿಪಡಿಸಬೇಕು ಎಂದು ಸರ್ಕಾರದ ಗಮನ ಸೆಳೆದಿದೆ.

ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಆಗಿಸಲು ಸರ್ಕಾರ ಚಿಂತನೆ ನಡೆಸಿ ಸಾರ್ವಜನಿಕರಿಂದ ಎಂಟು ವಿಷಯಗಳ ಮೇಲೆ ಸಲಹೆಗಳನ್ನು ಸ್ವೀಕರಿಸಿದೆ. ಇದರ ಮೇಲೆ ನಂಬಿಕೆ ಇದ್ದರೂ ಸಹಿತ ಸರ್ಕಾರ ಮೊದಲು ಅತ್ಯಂತ ಅಗತ್ಯವಾದ ಸಮಸ್ಯೆಗಳನ್ನು ಪರಿಹರಿಸದೆ ಈ ಯೋಜನೆ ಪ್ರಾರಂಭಿಸುವುದು ವ್ಯರ್ಥ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.
ನಗರದಲ್ಲಿನ ಹಾಲಿ ಸಮಸ್ಯೆಗಳು
ಸದ್ಯ ನಗರದಲ್ಲಿ ಅನಿಯಮಿತ ಕಸ ತೆರವು, ಅನೇಕ ಪ್ರದೇಶಗಳಲ್ಲಿ ನೀರಿನ ಕೊರತೆ ಇದೆ. ಮಳೆ ನೀರು ಚರಂಡಿಗಳಿಗೆ ಸರಾಗವಾಗಿ ಹೋಗದೆ ಸಮಸ್ಯೆ ಆಗುತ್ತಿದೆ. ಕಟ್ಟಡಗಳ ಬೈಲಾ ಉಲ್ಲಂಘನೆ, ಅಕ್ರಮ ಪಾರ್ಕಿಂಗ್, ಪಾದಾಚಾರಿ ಮಾರ್ಗ (ಫುಟ್‌ಪಾತ್) ಒತ್ತುವರಿ ಆಗಿವೆ.
ಹಾಲಿ ಬೀದಿ ದೀಪಗಳಲ್ಲಿ ಸಮಸ್ಯೆ, ಕಳಪೆ ಗುಣಮಟ್ಟದ ಸಾರ್ವಜನಿಕ ಕೆಲಸಗಳು, ಕೆರೆ ನೀರಿನಲ್ಲಿ ಮಾಲಿನ್ಯ, ಸಮಸ್ಯೆ ಕಡೆಗಣಿಸುವ ಅಧಿಕಾರಿಗಳು ಸೇರಿದಂತೆ ನಗರದಲ್ಲಿ ಸಾಕಷ್ಟು ಸಮಸ್ಯೆಗಳು ಅಸ್ತಿತ್ವದಲ್ಲಿದೆ. ಇದೆಲ್ಲದರ ಮೇಲ್ವಿಚಾರಣೆ ಮಾಡುವ ಬಿಬಿಎಂಪಿಗೆ ಕೌನ್ಸಿಲ್ ಚುನಾವಣೆಯೇ ನಡೆಯದೇ ವರ್ಷಗಳು ಉರಳಿವೆ ಎಂದು ವೇದಿಕೆ ಮೂಲಭೂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದೆ.
ವ್ಯವಸ್ಥಿತ ಬದಲಾವಣೆಗಳು ಆಗಬೇಕಿದೆ
ಇಷ್ಟೆಲ್ಲ ಸಮಸ್ಯೆಗಳಿರುವ ಬೆಂಗಳೂರಿನ ಅಭಿವೃದ್ಧಿ ಕುರಿತು ಭರವಸೆ ನೀಡುವುದು, ಅಭಿವೃದ್ಧಿಯನ್ನು ಚಿತ್ರೀಕರಿಸುವುದು ಸುಲಭವಾಗಿದೆ. ಮೇಲೆ ಹೇಳಲಾದ ಪ್ರಮುಖ ದೌರ್ಬಲ್ಯಗಳನ್ನು ಮುಕ್ತವಾಗಿ ತೆರೆದು, ಅಂಗೀಕರಿಸುವ ಮತ್ತು ಪರಿಹರಿಸುವವರೆಗೆ ಮತ್ತು ವ್ಯವಸ್ಥಿತ ಬದಲಾವಣೆಗಳಿಗೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಇಲ್ಲವಾದರೆ ನೂತನ ಯೋಜನೆ ಅತೃಪ್ತ ದೃಷ್ಟಿಯಾಗಿಯೇ ಉಳಿಯುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಗರದ ಅಭಿವೃದ್ಧಿಗೆ ಸಮಸ್ಯೆಗಳ ಪರಿಹಾರಕ್ಕೆ ಆಡಳಿತಗಾರರನ್ನು ಕಾನೂನುಬದ್ಧವಾಗಿ ಹೊಣೆಗಾರರನ್ನಾಗಿ ಮಾಡಬೇಕು. 'ಉಕ್ಕು ಮತ್ತು ಕಾಂಕ್ರೀಟ್' ಅವಲಂಬಿತ ಯೋಜನೆಗಳ ಮೇಲೆ ಭಾರೀ ಹೂಡಿಕೆ ನಿಲ್ಲಿಸಬೇಕು. ನಾಗರಿಕರ ಜೀವನದ ಮೇಲೆ ಪರಿಣಾಮ ಬೀರುವ ನಾಗರಿಕ ಸೌಲಭ್ಯಗಳ ಸಣ್ಣ ಮತ್ತು ಮಹತ್ವದ ಅಂಶಗಳ ಮೇಲೆ ಹಣ ಹಾಕಿ ಅಭಿವೃದ್ಧಿ ಮಾಡಬೇಕು ಎಂದು ವೇದಿಕೆ ಮನವಿ ಮಾಡಿದೆ.











Click it and Unblock the Notifications