NIMHANS: ರಾಜಧಾನಿಯಲ್ಲೇ ಇನ್ನೊಂದು 'ನಿಮ್ಹಾನ್ಸ್' ಘಟಕ ಸ್ಥಾಪನೆ: ಅಪ್ಡೇಟ್ ಮಾಹಿತಿ
ಬೆಂಗಳೂರು, ಫೆಬ್ರವರಿ 23: ಮಾನಸಿಕ ಅಸ್ವಸ್ಥ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (NIMHANS) ಮತ್ತೊಂದ ಘಟಕವು ರಾಜಧಾನಿ ಬೆಂಗಳೂರಿನಲ್ಲಿ ತಲೆ ಎತ್ತಲಿದೆ.
ಹೌದು, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಎರಡನೇ ಘಟಕವನ್ನು ನಗರದ ಉತ್ತರ ಭಾಗದಲ್ಲಿ ಆರಂಭಿಸಲು ಕರ್ನಾಟಕ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುಮತಿ ದೊರೆಯುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತವಾಗಿದೆ.

ಹೊಸೂರು ರಸ್ತೆಯಲ್ಲಿರುವ ಹಾಲಿ ನಿಮ್ಹಾನ್ಸ್‌ಗೆ ಸದ್ಯ ಹೆಚ್ಚು ಹೊರೆಯಾಗುತ್ತಿದೆ. ಅಲ್ಲದೇ ರೋಗಿಗಳು ಹಾಸಿಗೆ ಪಡೆಯಲು ಹರಸಾಹಸಪಡುವ ಸ್ಥಿತಿ ಎದುರಾಗಿದೆ ಎನ್ನಲಾಗಿದೆ. ನಮ್ಮ ರಾಜ್ಯದ ರೋಗಿಗಳನ್ನು ಹೊರತುಪಡಿಸಿ, ಕೇರಳ, ತಮಿಳುನಾಡು ಮತ್ತು ದೇಶದ ಹಲವಾರು ಉತ್ತರ ರಾಜ್ಯಗಳ ರೋಗಿಗಳು ಇಲ್ಲಿಗೆ ಚಿಕಿತ್ಸೆ ಪಡೆಯಲು ಬರುತ್ತಾರೆ.
ನಿಮ್ಹಾನ್ಸ್‌ನಲ್ಲಿ ಹಾಸಿಗೆಗಳು ಸಿಗುತ್ತಿಲ್ಲ?
ಬೇರೆ ರಾಜ್ಯದಿಂದಲೂ ಇಲ್ಲಿಗೆ ಚಿಕಿತ್ಸೆಗೆ ಬರುವ ಕಾರಣ ಪ್ರತಿಷ್ಠಿತ ಸಂಸ್ಥೆಯಲ್ಲಿ ಹಾಸಿಗೆಗಳಿಗೆ ಭಾರಿ ಬೇಡಿಕೆ ಇದೆ. ಇದೆಲ್ಲ ಕಾರಣದಿಂದ ಹೊರೆ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡಲು ಉತ್ತರ ಬೆಂಗಳೂರಿನಲ್ಲಿ ತನ್ನ ಎರಡನೇ ಘಟಕ ಆರಂಭಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಅನುಮತಿ ಕೋರಿ ರಾಜ್ಯವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಬೆಂಗಳೂರಿನ ನಿಮ್ಹಾನ್ಸ್ ರಾಷ್ಟ್ರ ಮಟ್ಟದ ಪ್ರಮುಖ ಸಂಸ್ಥೆಯಾಗಿದೆ. ಸಂಸತ್ತಿನ ಕಾಯಿದೆಯಿಂದ ಸ್ಥಾಪಿಸಲಾಗಿದೆ. ಆಸ್ಪತ್ರೆಯು ಕೇಂದ್ರ ಸರ್ಕಾರದ ಅಧೀನದಲ್ಲಿದೆ. ವೈದ್ಯಕೀಯ ಶಿಕ್ಷಣ ಸಚಿವನಾಗಿ ನಾನು ಆಸ್ಪತ್ರೆ ಆಡಳಿತ ಮಂಡಳಿಯ ಉಪಾಧ್ಯಕ್ಷನಾಗಿದ್ದೇನೆ. ಇದರ ಅಧ್ಯಕ್ಷರು ಕೇಂದ್ರ ಆರೋಗ್ಯ ಸಚಿವರಾಗಿದ್ದಾರೆ.
ಕಳೆದ ಸಭೆಯಲ್ಲಿ ನಿಮ್ಹಾನ್ಸ್‌ನ ಎರಡನೇ ಘಟಕವನ್ನು ಪ್ರಾರಂಭಿಸಲು ನಾವು ಈಗಾಗಲೇ ಪ್ರಸ್ತಾವನೆ ನೀಡಿದ್ದೇವೆ ಮತ್ತು ಅದು ಕೇಂದ್ರ ಪುರಸ್ಕರಿಸಲಿದೆ ಎಂದು ರಾಜ್ಯವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಖದ್ದು ವಿವರಿಸಿದರು.

ಮತ್ತೊಂದು ನಿಮ್ಹಾನ್ಸ್ ನಿರ್ಮಾಣ ಎಲ್ಲಿ?
ಬೆಂಗಳೂರು ಉತ್ತರದ ಕ್ಯಾಲಸನಹಳ್ಳಿಯಲ್ಲಿ ನಿಮ್ಹಾನ್ಸ್‌ನ ಎರಡನೇ ಘಟಕ ನಿರ್ಮಾಣ ಮಾಡಬೇಕೆಂದು ರಾಜ್ಯ ಸರ್ಕಾರ 40 ಎಕರೆ ಭೂಮಿಯನ್ನು ಈಗಾಗಲೇ ಗುರುತಿಸಿದೆ. ಅನುಮೋದನೆ ಸಿಗುತ್ತಿದ್ದಂತೆ ಡಿಪಿಆರ್ ಸಿದ್ಧಪಡಿಸಿ ಬಳಿಕ ಯೋಜನೆ ಕಾಮಗಾರಿ ಆರಂಭಗೊಳ್ಳಲಿದೆ.
ಬೆಂಗಳೂರಿನ ಈ ನಿಮ್ಹಾನ್ಸ್ ಮೇಲಿನ ಹೊರೆ ಇಳಿಸಲು ಕೆಲವು ಕ್ರಮ ಕೈಗೊಳ್ಳಲಾಗಿದೆ. ಅದರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಹಲವಾರು ಟ್ರಾಮಾ ಸೆಂಟರ್‌ಗಳನ್ನು ತೆರೆದಿರುವುದು ಒಂದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
ಟ್ರಾಮಾ ಸೆಂಟರ್ ವಿಸ್ತರಣೆಗೆ ಕ್ರಮ
ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಸರ್ಕಾರ ಹಲವಾರು ಆಘಾತ ಕೇಂದ್ರಗಳನ್ನು ತೆರೆದಿದೆ. ರಾಜ್ಯದ ಕಲಬುರಗಿ, ಬಳ್ಳಾರಿ ಹಾಗೂ ಮೈಸೂರಿಯಲ್ಲಿ ಟ್ರಾಮಾ ಸೆಂಟರ್ ಸ್ಥಾಪಿಸಿದ್ದೇವೆ. ಇವುಗಳನ್ನು ಬೇರೆ ಜಿಲ್ಲೆಗಳಿಗೂ ವಿಸ್ತರಣೆ ಮಾಡುತ್ತಿದ್ದು, ಈ ಮೂಲಕ ನಿಮ್ಹಾನ್ಸ್ ಮೇಲಿನ ಹೊರೆ ಇಳಿಸುತ್ತಿದ್ದೇವೆ.












Click it and Unblock the Notifications