Shankar Nag: ಸರ್ಕಾರವೇ ಶಂಕರ್‌ನಾಗ ಜನ್ಮದಿನವನ್ನು 'ಚಾಲಕರ ದಿನ'ವಾಗಿ ಆಚರಿಸಬೇಕು: ಮನವಿ
ಬೆಂಗಳೂರು, ನವೆಂಬರ್ 10: ಇಂದಿಗೂ ಆಟೋ ಚಾಲಕರಿಗೆ ಸ್ಪೂರ್ತಿಯ ಚಿಲುಮೆಯಾಗಿರುವ ನಟ ದಿವಗಂತ ಶಂಕರ್‌ನಾಗ್ ಅವರ ಜನ್ಮದಿನವನ್ನು ರಾಜ್ಯ ಸರ್ಕಾರವೇ ಅಧಿಕೃತವಾಗಿ 'ಚಾಲಕರ ದಿನ'ವನ್ನಾಗಿ ಆಚರಿಸಬೇಕು ಎಂದು ಪೀಸ್ ಆಟೋ ಸೇರಿದಂತೆ ವಿವಿಧ ಚಾಲಕರ ಸಂಘಟನೆಯು ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಪೀಸ್‌ಆಟೋ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಯೂನಿಯನ್, ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನ ಚಾಲಕರ ಯೂನಿಯನ್, ಜೈ ಭಾರತ ವಾಹನ ಚಾಲಕರ ಸಂಘ, ನೊಂದ ಚಾಲಕರ ವೇದಿಕೆ ಸಹಯೋಗದೊಂದಿಗೆ ಶನಿವಾರ ಜಯನಗರದಲ್ಲಿ ದಿವಂಗತ ಶಂಕರ್‌ನಾಗ್ ಅವರ ಜನ್ಮದಿನದ ಪ್ರಯುಕ್ತ 11ನೇ ವರ್ಷದ "ಚಾಲಕರ ದಿನ" ಸಮಾರಂಭ ನಡೆಯಿತು.

ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿದ ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಆಟೋ ಚಾಲಕರು ಮನವಿ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 5000ಕ್ಕೂ ಹೆಚ್ಚು ಆಟೋ, ಟ್ಯಾಕ್ಸಿ, ಗೂಡ್ಸ್ ವಾಹನ ಹಾಗೂ ಶಾಲಾ ವಾಹನದ ಚಾಲಕರು ಪಾಲ್ಗೊಂಡಿದ್ದರು. ಇದರಲ್ಲಿ ಸುಮಾರು 100 ಮಹಿಳಾ ಚಾಲಕಿಯರು ಇದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ನಗರದಲ್ಲಿ ಸದ್ಯ ಮೂರು ಲಕ್ಷಕ್ಕೂ ಅಧಿಕ ಆಟೋ ಸಂಚರಿಸುತ್ತಿದ್ದು, ಆಟೋ ಚಾಲಕರಿಲ್ಲದೇ ಬೆಂಗಳೂರು ಇಲ್ಲ. ಬೆಂಗಳೂರಿನಲ್ಲಿ ಆಟೋ ಚಾಲಕರ ಸೇವೆ ಶ್ಲಾಘನೀಯ. ಶಂಕರ್‌ನಾಗ್ ಅವರು ಇಂದಿಗೂ ಸಹ ಆಟೋ ಚಾಲಕರಿಗೆ ಅತ್ಯಂತ ಪ್ರಿಯವಾದ, ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾರೆ ಇವರ ಆದರ್ಶದಂತೆ ಇನ್ನಷ್ಟು ಉತ್ತಮ ಸೇವೆಯನ್ನು ಚಾಲಕರು ನೀಡಲಿ ಎಂದು ಅವರು ಆಶಿಸಿದರು.
ಪೀಸ್ ಆಟೋ ವತಿಯಿಂದ ಪ್ರತಿವರ್ಷ ಶಂಕರ್‌ನಾಗ್ ಅವರ ಜನ್ಮದಿನದಂದು ಚಾಲಕರ ದಿನವನ್ನಾಗಿ ಆಚರಿಸುತ್ತಾ, ಆಟೋಚಾಲಕರಿಗೆ ಹಲವು ಸಹಾಯ ಮಾಡುತ್ತಾ ಬಂದಿದ್ದಾರೆ. ಒಬ್ಬರಿಗೆ ಉಚಿತ ಆಟೋ ನೀಡುತ್ತಿದ್ದರು, ಈ ಬಾರಿ ಎರಡು ಆಟೋ ಉಚಿತವಾಗಿ ನೀಡಿದ್ದಾರೆ ಎಂದು ತಿಳಿಸಿದರು.

ಸ್ವಂತ ಆಟೋ ಖರೀದಿಗೆ ಮಹಿಳೆಯರಿಗೆ ನೆರವು
ಪೀಸ್ ಆಟೋ ಸಂಘಟನೆ ವತಿಯಿಂದ 300 ಮಹಿಳೆಯರಿಗೆ ಆಟೋ ಚಾಲನೆಯ ತರಬೇತಿ ನೀಡಲಾಗಿದೆ. ಈ ಮಹಿಳೆಯರು ಸ್ವತಃ ಆಟೋ ಖರೀದಿಗೆ ಹಣಕಾಸಿನ ನೆರವು ಸಹ ಇದೇ ವೇಳೆ ನೀಡಲಾಯಿತು. ಎಕ್ಸ್‌ಪೊನೆಂಟ್ ಕಂಪನಿಯ 15 ನಿಮಿಷದಲ್ಲೇ ಚಾರ್ಜ್ ಆಗಲಿದೆ.
ವಿಶೇಷವೆಂದರೆ, ಚಾಲನಾ ವೃತ್ತಿಯಲ್ಲಿ ಮಾನವೀಯತೆ ಹಾಗೂ ಪ್ರಾಮಾಣಿಕತೆ ಮೆರೆದ ಆಯ್ದ ಚಾಲಕರಿಗೆ ಚಿನ್ನದ ಪದಕ ನೀಡಿ ಅವರನ್ನು ಗೌರವಿಸಲಾಯಿತು. ಇನ್ನು, ಬಡ ಚಾಲಕರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಟ ಮುರುಳಿ, ನಟ ಗರುಡ ರಾಮ್, ಪೀಸ್-ಆಟೋ ಅಧ್ಯಕ್ಷರು ರಘು ನಾರಾಯಣ ಗೌಡ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಯೂನಿಯನ್ ಅಧ್ಯಕ್ಷರು ಮಂಜುನಾಥ್, ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನ ಚಾಲಕರ ಯೂನಿಯನ್ ಅಧ್ಯಕ್ಷರು ಜಿ. ರವಿ ಕುಮಾರ್ ಹಾಗೂ ಮತ್ತಿತರರು ಶಂಕರ್‌ನಾಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಆಟೋ ಚಾಲಕರ ಮನವಿಗೆ ಸ್ಪಂದಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.












Click it and Unblock the Notifications