ಚಿತ್ರದುರ್ಗದ ಮುರುಘಾ ಮಠಕ್ಕೆ ಆಡಳಿತಾಧಿಕಾರಿಯಾಗಿ ಪಿ.ಎಸ್ ವಸ್ತ್ರದ್ ನೇಮಕ
ಬೆಂಗಳೂರು, ಡಿ. 13: ಚಿತ್ರದುರ್ಗದ ಹೊರವಲಯದಲ್ಲಿರುವ ಮುರುಘಾ ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್ ವಸ್ತ್ರದ್ ಅವರನ್ನು ಮಠದ ಆಡಳಿತಾಧಿಕಾರಿಯಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಟ್ರಸ್ಟಿಯಾಗಿರುವ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಟ್ರಸ್ಟಿನ ಸ್ವತ್ತನ್ನು ರಕ್ಷಿಸುವ ದೃಷ್ಟಿಯಿಂದ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಭಾರತ ಸಂವಿಧಾನದ ಅನುಚ್ಛೇದ 162 ರನ್ವಯ ಸರ್ಕಾರವು ಸದರಿ ಸಂಸ್ಥೆಗೆ ಆಡಳಿತಾಧಿಕಾರಿಯನ್ನು ನೇಮಿಸಬಹುದು ಎಂಬುದನ್ನು ಆದೇಶದಲ್ಲಿ ಉಲ್ಲೇಖಿಸಿದೆ.

ನವೆಂಬರ್ 10 ರಂದು ಚಿತ್ರದುರ್ಗ ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿಯಲ್ಲಿ, ಜಗದ್ಗುರು ಮುರುರಾಜೇಂದ್ರ ಮಠದ ಟ್ರಸ್ಟಿಯಾಗಿರುವ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ಬಂಧನದರುವುದರಿಂದ ಮಠದ ಒಟ್ಟು ಸ್ಥಿರಾಸ್ತಿಗೆ ಮತ್ತು ಮಠದ ಹಣಕಾಸು ನಿರ್ವಹಣೆಯನ್ನು ನೋಡಿಕೊಳ್ಳುವುದು ಕಷ್ಟಕರವಾಗಿರುತ್ತದೆ. ಜೊತೆಗೆ ಈ ಟ್ರಸ್ಟ್ ಸಾರ್ವಜನಿಕ ಟ್ರಸ್ಟ್ ಆಗಿರುವುದರಿಂದ ಆಸ್ತಿಗಳ ನಿರ್ವಹಣೆಗಳ ತೊಡಕುಂಟಾಗುತ್ತಿದೆ ಎಂದಿದೆ.
ದುರಾಡಳಿತ ಹಾಗೂ ಹಣಕಾಸು ದುರುಪಯೋಗ ಆದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ದಕ್ಕೆಯಾಗುವ ಸಂಭವ ಇರುತ್ತದೆ. ಆದ ಕಾರಣ ಟ್ರಸ್ಟ್ ಮತ್ತು ವಿದ್ಯಾಸಂಸ್ಥೆಯ ನಿರ್ವಹಣೆಗೂ ಸಹ ತೊಂದರೆ ಉಂಟಾಗುತ್ತದೆ. ಸದರಿ ಸಂಸ್ಥೆಗೆ ಶಿವಮೂರ್ತಿ ಮುರುಘಾ ಶರಣರು ಮಠದ ಆಜೀವ ಪೀಠಾಧಿಪತಿ ಹಾಗೂ ವಿದ್ಯಾ ಸಂಸ್ಥೆಗೆ ಆಜೀವ ಅಧ್ಯಕ್ಷರು ಆಗಿದ್ದಾರೆ. ಹೀಗಾಗಿ ಮಠದ ಹಾಗೂ ವಿದ್ಯಾ ಸಂಸ್ಥೆಗಳಲ್ಲಿನ ಅನಾನುಕೂಲಗಳನ್ನು ತಪ್ಪಿಸಲು ಸಾರ್ವಜನಿಕ ಹಿತದೃಷ್ಟಿಯಿಂದ ಕಾನೂನು ರೀತ್ಯ ಕ್ರಮ ಕೈಗೊಳ್ಳುವುದು ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿ ವರದಿಯಲ್ಲಿ ತಿಳಿಸಿರುತ್ತಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರವು ಮಾನ್ಯ ಅಡ್ವಕೇಟ್ ಜನರಲ್, ಜಿಲ್ಲಾಧಿಕಾರಿ ವರದಿ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ ಸಾರ್ವಜನಿಕ ಹಿತಾಸಕ್ತಿಗೆ ದಕ್ಕೆಯಾಗುವ, ಮಠದ ಆಡಳಿತದಲ್ಲಿ ಅವ್ಯವಹಾರ ಹಾಗೂ ಹಣಕಾಸಿನ ದುರುಪಯೋಗವಾಗುವ ಸಂಭವವಿರುವುದರಿಂದ ಭಾರತ ಸಂವಿಧಾನ ಅನುಚ್ಛೇದ 152, 3(ಎ) ರನ್ವಯ ಸಾರ್ವಜನಿಕ ಹಿತದೃಷ್ಟಿಯಿಂದ ಆಡಳಿತಾಧಿಕಾರಿಯನ್ನು ನೇಮಿಸುವುದು ಅವಶ್ಯಕವಾಗಿದೆ. ಹೀಗಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್ ವಸ್ತ್ರದ್ ಇವರನ್ನು ಆಡಳಿತಾಧಿಕಾರಿಯಾನ್ನಾಗಿ ನೇಮಿಸಲು ಸರ್ಕಾರವು ನಿರ್ಧರಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.












Click it and Unblock the Notifications