Holiday: ಬೆಂಗಳೂರಿನ ಈ ಉದ್ಯೋಗಿಗಳಿಗೆ ಮತದಾನ ದಿನ ವೇತನ ಸಹಿತ ರಜೆ
ಬೆಂಗಳೂರು, ಏಪ್ರಿಲ್ 16: ಐಟಿ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಮತದಾನ ಹೆಚ್ಚಿಸಲು ಪ್ರತಿ ಭಾರಿಯು ನಾಗರಿಕ ಸಂಸ್ಥೆಗಳು, ಚುನಾವಣಾಧಿಕಾರಿಗಳು ಜಾಗೃತಿಯಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತವೆ. ಅದೇ ರೀತಿ ಈ ಬಾರಿಯು ಹಲವು ಕಾರ್ಯಕ್ರಮ ಕೈಗೊಂಡಿದೆ. ಅದರ ಭಾಗವಾಗಿ ಐಟಿ ಬಿಟಿ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾದಿಕಾರಿಗಳು ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಮಂಗಳವಾರ ಬೆಂಗಳೂರಿನಲ್ಲಿ ಐಟಿ-ಬಿಟಿ ಇಲಾಖೆ ಸಹಯೋಗದಲ್ಲಿ ಐಟಿ-ಬಿಟಿ ಸಂಸ್ಥೆಗಳ ಮುಖ್ಯಸ್ಥರ ಜೊತೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಸಭೆ ನಡೆಸಿದರು. ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮತದಾನದ ದಿನ ರಜೆ ನೀಡಿ ಎಲ್ಲರಿಂದಲೂ ಕಡ್ಡಾಯ ಮತದಾನ ಮಾಡಿಸಲು ಐಟಿ-ಬಿಟಿ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.

ವೇತನ ಸಹಿತ ರಜೆಗೆ ಸರ್ಕಾರ ಆದೇಶ
ಈ ಕುರಿತು ಅವರು ಸಭೆ ಬಳಿಕ ಸುದ್ದಿಗಾರರ ಜೊತೆ ಮಾಹಿತಿ ಹಂಚಿಕೊಂಡರು. ಎಲ್ಲಾ ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವೇತನ ಸಹಿತ ರಜೆ ನೀಡಲು ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ. ಆ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಲಾಗಿದೆ. ರಜೆ ನೀಡಲು ಎಲ್ಲ ಐಟಿ ಬಿಟಿ ಸಂಸ್ಥೆ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ. ಜೊತೆಗೆ ಮತದಾನ ಬಗ್ಗೆ ಅರಿವು ಮೂಡಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ಜಾಗೃತಿ ಮೂಡಿಸಲು ಸೂಚನೆ
ಹೆಚ್ಚು ಐಟಿ-ಬಿಟಿ ಸಂಸ್ಥೆಗಳಿರುವ ಬೆಂಗಳೂರಿನಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಐಟಿ-ಬಿಟಿ ಸಂಸ್ಥೆಗಳಲ್ಲಿ ಹೆಚ್.ಆರ್.ಎಂ.ಎಸ್ ವ್ಯವಸ್ಥೆಯಿದ್ದು, ಆ ಮೂಲಕ ಸಿಬ್ಬಂದಿಗಳಿಗೆ ತಪ್ಪದೆ ಮತದಾನ ಮಾಡಲು ಸಂದೇಶ ಕಳುಹಿಸುವ, ಎಲ್ಲಾ ಭಾಷೆಯನ್ನೊಳಗೊಂಡ 'ಮೈ ಭಾರತ್ ಹೂ' ಚುನಾವಣಾ ಗೀತೆ ಹಾಗೂ ಇನ್ನಿತರೆ ಜಾಗೃತಿ ಸಂದೇಶಗಳ ದೃಶ್ಯಾವಳಿಗಳನ್ನು ಎಲ್ಲಾ ಸಂಸ್ಥೆಗಳ ಎಲ್‌ಇಡಿ ಪರದೆಗಳಲ್ಲಿ ಹಾಕಲು ಸೂಚಿಸಲಾಗಿದೆ.
ಸಿಬ್ಬಂದಿಗಳು ಐಟಿ-ಬಿಟಿ ಸಂಸ್ಥೆಗಳಲ್ಲಿ ಬೇರೆ ರಾಜ್ಯಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದು, ಇಲ್ಲಿ ಮತದಾನದ ಹಕ್ಕನ್ನು ಹೊಂದಿರುವುದಿಲ್ಲ. ಇನ್ನು ಕೆಲವರು ಮನೆಯಿಂದ ಕೆಲಸ ಮಾಡುತ್ತಿರುವ ಕಾರಣ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಅದಲ್ಲದೆ ಮತಗಟ್ಟೆಗಳಲ್ಲಿ ಯಾವುದೇ ವ್ಯವಸ್ಥೆ ಇರುವುದಿಲ್ಲ ಎಂಬ ಮನೋಭಾವಿರುತ್ತದೆ. ಈ ಪೈಕಿ ಮತಗಟ್ಟೆಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಇರುವುದಾಗಿ ಮಾಹಿತಿ ನೀಡಿದ್ದೇವೆ.

ಎಲ್ಲ ಸಂಸ್ಥೆಗಳ ಸಿಬ್ಬಂದಿ ಮತದಾನ ಮಾಡಬೇಕು
ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿಯಾದ ಶ್ರೀಮತಿ ಏಕ್ ರೂಪ್ ಕೌರ್ ರವರು ಮಾತನಾಡಿ, ಬೆಂಗಳೂರಿನಲ್ಲಿ 4,500 ಐಟಿ-ಬಿಟಿ ಸಂಸ್ಥೆಗಳಿವೆ. ಎಲ್ಲಾ ಸಂಸ್ಥೆಗಳಿಗೂ ಮತದಾನದ ದಿನವಾದ ಏಪ್ರಿಲ್ 26ರಂದು ರಜೆ ನೀಡಿ ಎಲ್ಲಾ ಮತದಾರರಿಗೆ ಮತ ಚಲಾಯಿಸಲು ಅನುಕೂಲ ಮಾಡಿಕೊಡಲು ಮನವಿ ಮಾಡಲಾಗಿದೆ. ಜೊತೆಗೆ ಎಲ್ಲಾ ಸಿಬ್ಬಂದಿಗಳಿಗೆ ಮೇಲ್ ಮೂಲಕವೂ ಮತದಾನ ಮಾಡಲು ಅರಿವು ಮೂಡಿಸಲು ತಿಳಿಸಲಾಗಿದೆ ಎಂದು ಹೇಳಿದರು.
ವೇತನ ಸಹಿತ ರಜೆ ನೀಡಲು ಅಧಿಸೂಚನೆ
ಲೋಕಸಭಾ ಕ್ಷೇತ್ರಗಳಲ್ಲಿರುವ ವ್ಯವಹಾರಿಕ, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರು ಮತದಾನ ಮಾಡಬೇಕು. ಅವರಿಗೆಅನುವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆ 1951 ಕಲಂ 135ಬಿ ಅಡಿಯಲ್ಲಿ ಎಲ್ಲಾ ಉಪಬಂಧಗಳಿಗೆ ಒಳಪಟ್ಟು ವೇತನ ಸಹಿತ ರಜೆ ನೀಡಲು ಸರ್ಕಾರ ಮಾರ್ಚ್ 30 ಅಧಿಸೂಚನೆ ಹೊರಡಿಸಿದೆ.
ಸಭೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಕಾಂತರಾಜು, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಯಾದ ಪ್ರತಿಭಾ, ವಿವಿಧ ಐಟಿ-ಬಿಟಿ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಹಳು ಉಪಸ್ಥಿತರಿದ್ದರು.












Click it and Unblock the Notifications