ಕೈಗಾರಿಕೆಗಳಿಗೆ ವಿದ್ಯುತ್ ಕೊರತೆ: ಕಾಂಗ್ರೆಸ್ ಸರ್ಕಾರಕ್ಕೆ ಯಡಿಯೂರಪ್ಪ ಎಚ್ಚರಿಕೆ
ತುಮಕೂರು, ನವೆಂಬರ್ 06: ಕರ್ನಾಟಕದಲ್ಲಿ ವಿದ್ಯುತ್ ಕಡಿತ, ಕೈಗಾರಿಕೆಗಳ ಸಮಸ್ಯೆ ಕುರಿತು ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ರಾಜ್ಯ ಸರ್ಕಾರಕ್ಕೆ ಹೋರಾಟ ಎಚ್ಚರಿಕೆ ನೀಡಿದ್ದಾರೆ.
ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ಕೈಗಾರಿಕೋದ್ಯಮ ಬೆಳವಣಿಗೆ ಹೊಂದುತ್ತಿದೆ. ಸಾವಿರಾರು ಜನರಿಗೆ ಈ ಜಿಲ್ಲೆಯು ಉದ್ಯೋಗ ನೀಡುತ್ತಿದೆ. ಇಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳು ಇವೆ ಎಂದು ಯಡಿಯೂರಪ್ಪನವರು ಸೋಮವಾರ ಖುದ್ದು ಅವುಗಳನ್ನು ಪರಿಶೀಲಿಸಿದರು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಯಡಿಯೂರಪ್ಪನವರ ಹೇಳಿಕೆಯ ವಿಡಿಯೋ ಅನ್ನು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ. ಸಾವಿವಾರು ಜನರಿಗೆ ಉದ್ಯೋಗ ನೀಡುತ್ತಿರುವ, ಕೈಗಾರಿಕೆಗಳು ಹೆಚ್ಚಿರುವ ಈ ಪ್ರದೇಶದ್ಲಲಿ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಕುಡಿಯಲು ನೀರು ಇಲ್ಲ. ಇದರಿಂದ ಕೈಗಾರಿಕೋದ್ಯಮಗಳು ಮುಚ್ಚುವ ಹಂತ ತಲುಪಿವೆ ಎಂದು ಯಡಿಯೂರಪ್ಪನವರು ವಿಡಿಯೋದಲ್ಲಿ ವಿವರಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಬದುಕಿದ್ದು ಸತ್ತಂತಿದೆ: ಬಿಎಸ್‌ವೈ
ಈ ಜಿಲ್ಲೆಯ ಇಬ್ಬರು ಸಚಿವರು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿ ಪರಿಹರಿಸುವ ಪ್ರಮಾಣಿಕ ಪ್ರಯತ್ನ ಮಾಡಬೇಕಿದೆ. ಆದರೆ ಸಮಸ್ಯೆಗಳಿಗೆ ಸ್ಪಂದಿಸದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬದುಕಿದ್ದು, ಸತ್ತಂತೆ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೈಗಾರಿಕಾ ಪ್ರದೇಶಗಳಲ್ಲಿನ ವಾಸ್ತವಿಕ ಸ್ಥಿತಿ ಯನ್ನು ಕರ್ನಾಟಕ ಚೆಂಬರ್ಸ್ ಆಫ್ ಕಾಮರ್ಸ್ ಸದಸ್ಯರು ತಿಳಿಸಿದ್ದಾರೆ. ವಿದ್ಯುತ್ ಕಣ್ಣ ಮುಚ್ಚಾಲೆಯಿಂದ ಕೈಗಾರಿಕೋದ್ಯಮಗಳು ಬಂದ್ ಆಗುವ ಸ್ಥಿತಿ ತಲುಪಿವೆ. ಒಂದು ಕಡೆ ವಿದ್ಯುತ್ ಅಭಾವ ಮತ್ತೊಂದೆಡೆ ದೊಡ್ಡ ಪ್ರಮಾಣದಲ್ಲಿ ಹೇರಿಕೆ ಮಾಡಿರುವುದು ಸೇರಿ ಎಲ್ಲ ಸಮಸ್ಯೆ ಸರ್ಕಾರ ಬಗೆಹರಿಸಬೇಕು. ಕೂಡಲೇ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.
ಒಂದು ವೇಳೆ ಸರ್ಕಾರ ಕೈಗಾರಿಕೆಗಳ ಸಮಸ್ಯೆ ಬಗೆಹರಿಸದಿದ್ದರೆ ಬಿಜೆಪಿಯು ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಬರ ಅಧ್ಯಯನಕ್ಕೆ ಡಿಕೆಶಿ ವ್ಯಂಗ್ಯ: ಗರಂ
ರಾಜ್ಯದಲ್ಲಿ ಮಳೆ ಆಗದೇ ಬರ ತಾಂಡವವಾಡುತ್ತಿದೆ. ಬಿಜೆಪಿ ರಾಜ್ಯದ ಬರ ಕುರಿತು ಅಧ್ಯಯನ ಮಾಡಲಿದೆ ಎಂದು ಹೇಳಿದಾಗ ನಮ್ಮ ಬಗ್ಗೆ ಸರ್ಕಾರ ಹಾಗೂ ಡಿಕೆ ಶಿವಕುಮಾರ್ ಅವರು ಹಗುರವಾಗಿ ಮಾತನಾಡಿದ್ದಾರೆ. ಅದೆಲ್ಲವನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಇಂತಹ ವರ್ತನೆ ಸರಿಯಲ್ಲ ಎಂದು ಅವರು ಹೇಳಿದರು.
ಸದ್ಯ ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಬರ ಅಧ್ಯಯನ ತಂಡ ಪರಿಶೀಲನೆ ನಡೆಸುತ್ತಿದೆ. ಅದರ ಆಧಾರದಲ್ಲಿ ವರದಿ ಸಲ್ಲಿಸಲಿದೆ. ಇದನ್ನೆ ಬಿಜೆಪಿ ಮುಂದಿನ ಚುನಾವಣೆ ವೇಳೆ ಅಸ್ತ್ರವಾಗಿ ಬಳಸುವ ಸಾಧ್ಯತೆಗಳು ಇವೆ.
ಇಂದಿನಿಂದ ರೈತರಿಗೆ ತ್ರಿಫೇಸ್ ವಿದ್ಯುತ್ ಪೂರೈಕೆ: ಸಿಎಂ
ಇಂದು ಬೆಂಗಳೂರಿನ ಗೃಹ ಕಚೇರಿಯಲ್ಲಿ ಇಂಧನ ಇಲಾಖೆ ಜೊತೆಗೆ ಸಭೆ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕರ್ನಾಟಕದ ರೈತರಿಗೆ ಇಂದಿನಿಂದ ಏಳು ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಕಳೆದ ವಾರವೇ ಸಭೆ ನಡೆಸಲಾಗಿತ್ತು. ಈ ಹಿಂದೆ ಹೇಳಿದಂತೆ ನಿರಂತರ ವಿದ್ಯುತ್ ಪೂರೈಸಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಈ ಆದೇಶ ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ಅವರು ಘೋಷಿಸಿದರು.












Click it and Unblock the Notifications