'E-Khata: ಖಾತೆ ಮಾಡಲು ₹12,000 ಬೇಕು! 27 ತಿಂಗಳಲ್ಲಿ 25 ತೆರಿಗೆಗಳು'
ಬೆಂಗಳೂರು, ಆಗಸ್ಟ್ 20: ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಂದ ಹೆಚ್ಚುವರಿಯಾಗಿ 56,000 ಕೋಟಿ ರೂಪಾಯಿ ತೆರಿಗೆ ವಸೂಲಿ ಮಾಡುತ್ತಿದ್ದರೂ ಸಹ ಅಭಿವೃದ್ಧಿ ಮಾತ್ರ ನಡೆಯುತ್ತಿಲ್ಲ. ಎಷ್ಟೇ ಗ್ಯಾರಂಟಿಗಳನ್ನು ಕೊಟ್ಟರೂ ನಮಗೆ ತೊಂದರೆ ಇಲ್ಲ. ಆದರೆ ಅಭಿವೃದ್ಧಿ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಬುಧವಾರ ವಿಧಾನಸಭೆಯಲ್ಲಿ ಮಾತನಡಿದ ಆರ್.ಅಶೋಕ್ ಅವರು, ರಾಜ್ಯದಲ್ಲಿ ವಿವಿಧ ತೆರಿಗೆ, ಶುಲ್ಕ ಹೆಚ್ಚಿಸಿ ಒಟ್ಟು 56 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ಇದನ್ನು ಅಭಿವೃದ್ಧಿಗೆ ಬಳಸುತ್ತಿಲ್ಲ. ಗ್ಯಾರಂಟಿಗಳಿಗೆ ಈ ಹಣವನ್ನು ಬಳಸಿದರೂ ಇನ್ನೂ ಹಣ ಉಳಿಯುತ್ತದೆ. ಗ್ಯಾರಂಟಿಗೆ ಹಣ ಕೊಡಬೇಡಿ ಎಂದು ಹೇಳುತ್ತಿಲ್ಲ. ಆದರೆ ಕಾಂಗ್ರೆಸ್ ಶಾಸಕರೇ ಇದನ್ನು ವಿರೋಧಿಸುತ್ತಿದ್ದಾರೆ. ಗ್ಯಾರಂಟಿ ಕೊಟ್ಟರೆ ಎಲ್ಲ ದಿವಾಳಿ ಎಂದು ಶಾಸಕರು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಒಡೆದ ಮನೆಯಾಗಿದೆ. ಶಾಸಕರಿಗೆ ಅನುದಾನ ನೀಡಿದ್ದರೆ ಬಾಯಿ ಮುಚ್ಚಿಕೊಂಡು ಹೇಳುತ್ತಿದ್ದರು. ಅನುದಾನ ಕೊಡದೆ ಅಭಿವೃದ್ಧಿ ಮಾಡದೇ ಇರುವುದರಿಂದ ಈ ರೀತಿಯಾಗಿದೆ.

ಸರ್ಕಾರ ಕೆಎಸ್‌ಆರ್‌ಟಿಸಿಗೆ 1554 ಕೋಟಿ ರೂ. ಬಿಎಂಟಿಸಿಗೆ 532 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿಯ 35,000 ಕೋಟಿ ರೂ. ಪಡೆದು ಗ್ಯಾರಂಟಿಗೆ ಬಳಸಲಾಗಿದೆ. ದಲಿತರ ಹಣವನ್ನು ಮುಟ್ಟಬಾರದೆಂದು ಇವರೇ ಕಾನೂನು ರೂಪಿಸಿದ್ದರು. ಸರ್ಕಾರ ಆರಂಭದಲ್ಲಿ ತೆರಿಗೆ ವಿಧಿಸಲ್ಲ, ಕಮಿಶನ್ ಹಣವನ್ನು ಉಳಿಸಿ ಅಭಿವೃದ್ಧಿಗೆ ನೀಡುತ್ತೇವೆಂದು ಹೇಳಿದ್ದರು. ಆದರೀಗ ಕಮಿಶನ್ 60% ಆಗಿದೆ ಎಂದು ಗುತ್ತಿಗೆದಾರರು ಹೇಳಿದ್ದಾರೆ.
ಕಾಂಗ್ರೆಸ್ ಕಳೆದ 27 ತಿಂಗಳಲ್ಲಿ 25 ತೆರಿಗೆ ವಿಧಿಸಿದೆ. ಕಸದ ಸೆಸ್ ದುಪ್ಪಟ್ಟು ಮಾಡಲಾಗಿದೆ. ಹಾಲಿನ ದರ ಎರಡು ಬಾರಿ ಏರಿಸಲಾಗಿದೆ. ಬಸ್ ದರ ಶೇ.15 ಏರಿಕೆ, ವಾಹನ ದರ ಶೇ.9 ಏರಿಕೆ, ಕಾವೇರಿ ನೀರು ಶುಲ್ಕ ಏರಿಕೆ, ಒಳಚರಂಡಿ ಶುಲ್ಕ 300% ಏರಿಕೆ, ಮದ್ಯದ ದರ 40% ಏರಿಕೆ, ಮದ್ಯದಂಗಡಿ ಲೈಸೆನ್ಸ್ ಶುಲ್ಕ 50% ಏರಿಕೆ, ವಿದ್ಯುತ್ ದರ 36 ಪೈಸೆ ಏರಿಕೆ, ಮೆಟ್ರೊ ದರ ಏರಿಸಲಾಗಿದೆ.
ಆಸ್ತಿ ಮಾರ್ಗಸೂಚಿ ದರ ಏರಿಕೆ, ವೃತ್ತಿ ತೆರಿಗೆ ಹೆಚ್ಚಳ, ಸರ್ಕಾರಿ ಆಸ್ಪತ್ರೆಗಳ ಸೇವಾ ಶುಲ್ಕ ಹೆಚ್ಚಳ, ಕಾರ್ಮಿಕ ಇಲಾಖೆಯಲ್ಲಿ 250 ರೂ. ವರೆಗೆ ತೆರಿಗೆ ಹೆಚ್ಚಳ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ರೇರಾ ಹೊರಗೆ ಒಂದು ಫ್ಲ್ಯಾಟ್‌ಗೆ 15,000 ರೂ. ವಿಧಿಸಲಾಗಿದೆ. ಇದು ಒಂದು ರೀತಿಯಲ್ಲಿ ಟ್ಯಾಕ್ಸ್ ಟೆರರಿಸಂ ಆಗಿದೆ ಎಂದು ದೂರಿದರು.

ಒಂದು ಬಾರಿ ಖಾತೆ ಮಾಡಲು 12,000 ರೂ.!
ಸರ್ಕಾರ ಅಭಿವೃದ್ಧಿಗೆ ಹೊರೆ ಎಂಬಂತೆ ಇ-ಖಾತಾ ಕ್ರಮ ತಂದಿದ್ದಾರೆ. ಒಂದು ಬಾರಿ ಖಾತೆ ಮಾಡಲು 12,000 ರೂ. ಪಡೆಯುತ್ತಾರೆ. ಯಾವುದೇ ಕಚೇರಿಗೆ ಹೋದರೂ ಸರ್ವರ್ ಡೌನ್ ಎಂದು ಹೇಳುತ್ತಾರೆ. ಒಬ್ಬ ಮಾಲೀಕನಿಗೆ 150 ಬಾರಿ ಮೊಬೈಲ್‌ಗೆ ಒಟಿಪಿ ಬಂದಿದೆ ಎಂದರೆ ಇಂತಹ ವ್ಯವಸ್ಥೆಗೆ ಏನನ್ನಬೇಕು? ಇ-ಖಾತಾ ಎಂದರೆ ಸರಳತೆ ಇರಬೇಕು. ಆದರೆ ಇದರಿಂದ 10,000 ಕೋಟಿ ರೂ. ಅವ್ಯವಹಾರಕ್ಕೆ ದಾರಿಯಾಗಿದೆ ಎಂಬ ಅನುಮಾನವಿದೆ ಎಂದರು.
ಮನೆಯೊಳಗೆ ಕಾರು ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತದೆ. ಪಂಚಾಯಿತಿ ಇ-ಖಾತೆಗೆ 1,000 ರೂ. ಶುಲ್ಕ, ಬಿಬಿಎಂಪಿಯಲ್ಲಿ ಇ-ಖಾತಾ ಮಾಡಲು ಪ್ರತ್ಯೇಕ ಶುಲ್ಕ, ಮರಣ ಪ್ರಮಾಣಪತ್ರ ಪಡೆಯಲು 50 ರೂ. ಶುಲ್ಕ, ರೈತರ ಸಾಲಕ್ಕೆ ಸ್ಟಾಂಪ್ ಕಾಗದಕ್ಕೆ 100 ರೂ. ಹೀಗೆ ಅನೇಕ ತೆರಿಗೆ, ಶುಲ್ಕ ಹೆಚ್ಚಿಸಲಾಗಿದೆ ಎಂದು ಸರ್ಕಾರದ ತೆರಿಗೆ ಹೆಚ್ಚಳ ಭಾರ ಬಿಚ್ಚಿಟ್ಟರು.
ಕಸದ ತೆರಿಗೆಯಿಂದ 750 ಕೋಟಿ ರೂ. ಹಾಲಿನಿಂದ 1300 ಕೋಟಿ ರೂ., ಪೆಟ್ರೋಲ್-ಡೀಸೆಲ್‌ನಿಂದ 6500 ಕೋಟಿ ರೂ., ಬಸ್ ಟಿಕೆಟ್‌ನಿಂದ 1,000 ಕೋಟಿ ರೂ., ವಾಹನಗಳ ನೋಂದಣಿ ಶುಲ್ಕದಿಂದ 3300 ಕೋಟಿ ರೂ. ನೀರಿನ ಶುಲ್ಕದಿಂದ 600 ಕೋಟಿ ರೂ., ಹೀಗೆ ಹೆಚ್ಚುವರಿ ತೆರಿಗೆ, ಶುಲ್ಕದಿಂದ ಹೆಚ್ಚುವರಿ ಹಣ ಬರುತ್ತಿದೆ ಎಂದರು.
1500 ಕ್ಕೂ ಅಧಿಕ ರಸ್ತೆ ಗುಂಡಿ
ಬೆಂಗಳೂರಿನಲ್ಲಿ 1500 ಕ್ಕೂ ಅಧಿಕ ರಸ್ತೆ ಗುಂಡಿಗಳಿವೆ. ಒಂದು ರಸ್ತೆಯಲ್ಲೂ ನೆಮ್ಮದಿಯಾಗಿ ವಾಹನ ಚಲಾಯಿಸಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್‌ಗೆ ಬೆಂಗಳೂರಿಗೆ ಹೊಣೆ ನೀಡಿದಾಗ, ಕನಸು ಕಾಣುವ ಮಾತಾಡಿದ್ದರು. ಶೇ.60-65 ಆದಾಯ ನೀಡುವ ನಗರವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಕಿಂದರಿ ಜೋಗಿಯಂತೆ ಕಥೆ ಕಟ್ಟಿ ಜನರನ್ನು ವಂಚಿಸಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಹೋಗಿ ತೇಲುವ ಬೆಂಗಳೂರು ಹಾಗೂ ಬ್ಯಾಡ್ ಬೆಂಗಳೂರು ಆಗಿದೆ ಎಂದು ದೂರಿದರು.
ಬಿಎಂಟಿಸಿ ಬಸ್ ವೇಗ ಇಳಿಕೆ!
ರಸ್ತೆ ಗುಂಡಿಗಳಿಂದಾಗಿ ಬಿಎಂಟಿಸಿ ಬಸ್ಸುಗಳ ವೇಗ 15 ಕಿ.ಮೀ. ನಿಂದ 9 ಕಿ.ಮೀ. ಗೆ ಬಂದಿದೆ. ಸ್ಕೈವಾಕ್‌ಗಳು ಕಸದ ತೊಟ್ಟಿಯಾಗಿವೆ. ಕೆಟ್ಟ ನಗರಗಳಲ್ಲಿ ಪಟ್ಟಿಯಲ್ಲಿ ಬೆಂಗಳೂರು 3 ನೇ ಸ್ಥಾನಕ್ಕೆ ಬಂದಿದೆ. ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳು 824 ಕಿ.ಮೀ. ಉದ್ದವಿದ್ದು, ಈವರೆಗೆ 5,000 ಕೋಟಿ ರೂ. ಖರ್ಚು ಮಾಡಲಾಗಿದೆ. ಇಷ್ಟೊಂದು ಹಣ ಎಲ್ಲಿಗೆ ಹೋಗಿದೆ? ಎಂದು ಅವರು ಪ್ರಶ್ನಿಸಿದರು.
ಎತ್ತಿನಹೊಳೆ ಯೋಜನೆಗೆ ಒಂದು ಲಕ್ಷ ಕೋಟಿ ರೂ. ಖರ್ಚು ಮಾಡಿದರೂ ಮುಗಿದಿಲ್ಲ. ಇದೇ ರೀತಿ ಸುರಂಗ ರಸ್ತೆ ಯೋಜನೆಯನ್ನು 17,000 ಕೋಟಿ ರೂ. ವೆಚ್ಚ ಎಂದು ಹೇಳಿ ಪ್ರಸ್ತಾಪ ಮಾಡಲಾಗಿದೆ. ಸುರಂಗದಲ್ಲೇ ಕಸವನ್ನು ತುಂಬಬಹುದು. ನಾನು ಅಭಿವೃದ್ಧಿಯ ವಿರೋಧಿಯಲ್ಲ. ಆದರೆ ಸುರಂಗಕ್ಕಾಗಿ ಹಣ ಹಾಳು ಮಾಡಿದರೆ ನಗರದ ಅಭಿವೃದ್ಧಿ ಅಸಾಧ್ಯ ಎಂದು ಅವರು ಎಚ್ಚರಿಕೆ ನೀಡಿದರು.












Click it and Unblock the Notifications