ಬಿಬಿಎಂಪಿಗೆ ಗುಡ್‌ಬೈ: ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ 5 ನಗರ ಪಾಲಿಕೆಗಳಾಗಿ ವಿಂಗಡಿಸಿ ಆದೇಶ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇನ್ನು ಇತಿಹಾಸದ ಪುಟ ಸೇರಿದೆ. ಈಗಿನ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಐದು ನಗರ ಪಾಲಿಕೆಗಳನ್ನು ರಚನೆ ಮಾಡಿ ಕರ್ನಾಟಕ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಈ ಮೂಲಕ ಬೆಂಗಳೂರು ನಗರವನ್ನು ಉತ್ತಮ ನಗರಾಡಳಿತಕ್ಕಾಗಿ ಐದು ನಗರದ ಪಾಲಿಕೆಗಳಾಗಿ ವಿಭಜಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈಗಿನ ಬಿಬಿಎಂಪಿಯನ್ನು ಮರುವಿಂಗಡಿಸಿ, ಹೊಸ "ಗ್ರೇಟರ್ ಬೆಂಗಳೂರು ಪ್ರಾಧಿಕಾರದ (Greater Bengaluru Authority) ಅಡಿಯಲ್ಲಿ ಈ ಐದು ಪಾಲಿಕೆಗಳನ್ನು ರಚಿಸಲಾಗಿದೆ. ಇದರ ಜೊತೆಗೆ ಬಿಬಿಎಂಪಿ ಕೇಂದ್ರ ಕಚೇರಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೇಂದ್ರ ಕಚೇರಿಯಾಗಿ ಹೆಸರು ಬದಲಾವಣೆಯೂ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಕರ್ನಾಟಕ ಸರ್ಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ನಗರ ಪಾಲಿಕೆಗಳನ್ನು ರಚನೆ ಮಾಡುವ ಆದೇಶವನ್ನು ಹೊರಡಿಸಿದೆ. ಈ ಹೊಸ ವ್ಯವಸ್ಥೆಯೊಂದಿಗೆ ಇತ್ತೀಚೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ವಿಭಜಿಸಿದ್ದು, ನಗರದ ಆಡಳಿತವನ್ನು ಸುಧಾರಿಸುವುದು ಇದರ ಉದ್ದೇಶ ಎನ್ನಲಾಗಿದೆ.

ಹೊಸದಾಗಿ ರಚನೆಯಾದ 5 ಮಹಾನಗರ ಪಾಲಿಕೆಗಳು
* ಬೆಂಗಳೂರು ದಕ್ಷಿಣ ನಗರ ಪಾಲಿಕೆ
* ಬೆಂಗಳೂರು ಉತ್ತರ ನಗರ ಪಾಲಿಕೆ
* ಬೆಂಗಳೂರು ಕೇಂದ್ರ ನಗರ ಪಾಲಿಕೆ
* ಬೆಂಗಳೂರು ಪಶ್ಚಿಮ ನಗರ ಪಾಲಿಕೆ
* ಬೆಂಗಳೂರು ಪೂರ್ವ ನಗರ ಪಾಲಿಕೆ
ಬಿಬಿಎಂಪಿ ಕೇಂದ್ರ ಕಚೇರಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕೇಂದ್ರ ಕಚೇರಿ ಆಗಿ ಮಾರ್ಪಡಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ. ಇದರೊಂದಿಗೆ ನಗರ ಆಡಳಿತ ವ್ಯವಸ್ಥೆ ಮೂರು ಹಂತಗಳಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ನಗರ ಪಾಲಿಕೆಗಳು ಮತ್ತು ವಾರ್ಡ್ ಸಮಿತಿಗಳಲ್ಲಿ ರೂಪುಗೊಳ್ಳಲಿದೆ. ಈ ಹಂಚಿಕೆಯು ನಗರ ಆಡಳಿತವನ್ನು ಸ್ಥಳೀಯಗೊಳಿಸುವ ಮೂಲಕ ಪ್ರತಿ ಹೊಸ ಪಾಲಿಕೆಗೆ ಮೇಯರ್, ಕಮೀಷನರ್ ಹಾಗೂ ಸ್ಥಳೀಯ ಪಂಚಾಯಿತಿ ಸದಸ್ಯರ ಕ್ರಮಾನುಸಾರ ಕಾರ್ಯನಿರ್ವಹಣೆ ಮಾಡಲಿವೆ.
ಬೆಂಗಳೂರು ನಗರ ಆಡಳಿತ ವ್ಯವಸ್ಥೆಯಲ್ಲಿ ಇದು ಪ್ರಮುಖ ಹೆಜ್ಜೆ. ನಗರ ಅಭಿವೃದ್ಧಿ, ಯೋಜನೆಗಳು, ಸಾರ್ವಜನಿಕ ಸೇವೆಗಳು ಮತ್ತು ಸಾರ್ವಜನಿಕ ಭಾಗವಹಿಸುವಿಕೆಯನ್ನು ಈ ಹೊಸ ವ್ಯವಸ್ಥೆ ಬಲಪಡಿಸುವ ನಿರೀಕ್ಷೆಯಿದೆ. ಈ ಪರೀಕ್ಷಿತ ಪ್ರಾಧಿಕಾರ ಮುಂದಿನ ದಿನಗಳಲ್ಲಿ ಒಟ್ಟು ಹತ್ತು ಪಾಲಿಕೆಗಳ ವಿಸ್ತರಣೆಯಿಗೂ ಅವಕಾಶ ನೀಡಲಿದೆ ಎಂದು ಹೇಳಲಾಗುತ್ತಿದೆ. ಆಗಸ್ಟ್ 11ರಿಂದ ಶುರುವಾಗುವ ಮುಂಗಾರು ಅಧಿವೇಶನದಲ್ಲಿ ಈ ಕುರಿತು ಚರ್ಚೆ ಮಾಡಿ, ಬಿಲ್ ಪಾಸ್ ಮಾಡಲು ಸರ್ಕಾರ ಸಜ್ಜಾಗಿದೆ. ಪಾಲಿಕೆಗಳ ರಚನೆ ಬಗ್ಗೆ ಆಕ್ಷೇಪಣೆಗಳಿದ್ದರೆ, ಸಾರ್ವಜನಿಕರು ಸಲಹೆ ನೀಡುವಂತೆ ಸರ್ಕಾರ ಹೇಳಿದೆ.












Click it and Unblock the Notifications