ಮಲ್ಲೇಶ್ವರಂನಲ್ಲಿ ಸಚಿವ ಅಶ್ವತ್ಥ್ ನಾರಾಯಾಣ ಮತಬೇಟೆ
ಬೆಂಗಳೂರು, ಏಪ್ರಿಲ್ 11: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬಂದಂತೆ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಸಚಿವ ಸಿಎನ್ ಅಶ್ವತ್ಥ್ ನಾರಾಯಣ ಅವರು ಮತಬೇಟೆ ಆರಂಭಿಸಿದ್ದಾರೆ. ಬಿಜೆಪಿ ಟಿಕೆಟ್ ಅಭ್ಯರ್ಥಿಗಳ ಪಟ್ಟಿ ಇನ್ನಷ್ಟೇ ಘೋಷಿಸಬೇಕಿದೆ.
ಈ ಬಾರಿ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಸಿಎನ್ ಅಶ್ವತ್ಥ್ ನಾರಾಯಣ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಸಿಗುವುದು ಪಕ್ಕಾ ಆದಂತಿದೆ. ಈ ನಿಟ್ಟಿನಲ್ಲಿ ಅವರು ಕ್ಷೇತ್ರದಾದ್ಯಂತ ಪ್ರಚಾರ ಆರಂಭಿಸಿದ್ದಾರೆ. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಪಾರ್ಟ್ಮೆಂಟ್ ನಿವಾಸಿಗಳೊಂದಿಗೆ ಸಚಿವ ಸಿಎನ್ ಅಶ್ವತ್ಥ್ ನಾರಾಯಣ ಇಂದು ಸಂವಾದ ನಡೆಸಿ ಮತಯಾಚನೆ ಮಾಡುತ್ತಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಬಗೆಯ ಸಭೆ, ಸಮಾರಂಭ ಹಾಗೂ ಕಾರ್ಯಕ್ರಮಗಳನ್ನು ನಡೆಸಬೇಕಾದರೂ ಈಗ ಅನುಮತಿ ಕಡ್ಡಾಯವಾಗಿದೆ. ಹೀಗಾಗಿ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ತಮ್ಮ ತಮ್ಮ ಕ್ಷೇತ್ರದ ಮತದಾರರನ್ನು ಸೆಳೆಯಲು ತಮ್ಮದೇ ಆದ ತಂತ್ರಗಳನ್ನು ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎನ್ ಅಶ್ವತ್ಥ್ ನಾರಾಯಣ ಅವರು ಮಲ್ಲೇಶ್ವರಂನಲ್ಲಿ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಪಾರ್ಟ್ಮೆಂಟ್ ನಿವಾಸಿಗಳೊಂದಿಗೆ ಸಂವಾದ ನಡೆಸುವ ಮೂಲಕ ಮತಯಾಚನೆ ಮಾಡಿದ್ದಾರೆ.
ಇದಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕವೂ ಭರ್ಜರಿ ಪ್ರಚಾರ ಆರಂಭಿಸಿರುವ ಸಿಎನ್ ಅಶ್ವತ್ಥ್ ನಾರಾಯಣ ಅವರು ಮಲ್ಲೇಶ್ವರದ ಡಿಜಿಟಲ್ ಹೆಲ್ತ್ ಕ್ಲಿನಿಕ್‌ಗಳಲ್ಲಿ ಡಿಜಿಟೈಸ್ಡ್ ಲ್ಯಾಬ್‌ಗಳನ್ನು ಅಳವಡಿಸಲಾಗಿದ್ದು, ಲಭ್ಯವಿರುವ ಎಲ್ಲಾ ಟೆಸ್ಟ್‌ಗಳನ್ನು ಉಚಿತವಾಗಿ ಕಲ್ಪಿಸಲಾಗುತ್ತಿದೆ. ಜನತೆಗೆ ಆರೋಗ್ಯ ಸೌಲಭ್ಯಗಳು ಸರಳವಾಗಿ, ಸುಲಭವಾಗಿ ದೊರಕುವಂತೆ ಮಾಡುವುದು ನಮ್ಮ ಆದ್ಯತೆ ಎಂದು ತಿಳಿಸಿದ್ದಾರೆ.

ಮಲ್ಲೇಶ್ವರದ ಗಾಂಧಿಗ್ರಾಮದ ಸುತ್ತಮುತ್ತಲಿನ ಮನೆ ಮನೆಗೆ ಭೇಟಿನೀಡಿ, ಈ ಭಾಗದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿ, ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಲಾಗುತ್ತಿದೆ. ಅಲ್ಲದೆ ನಮ್ಮ ಮಲ್ಲೇಶ್ವರದ ಜನತೆಗೆ ಆದ್ಯತೆ ಮೇರೆಗೆ ಮೂಲ ಸೌಕರ್ಯ ಕಲ್ಪಿಸುವ ಜತೆ ಕುಡಿಯುವ ನೀರಿನ ಸೋರಿಕೆಯನ್ನು ಶೇಕಡ 45 ರಿಂದ 14.75ಕ್ಕೆ ಇಳಿಸಲಾಗಿದ್ದು, ಬಹುಮಹಡಿಯ ಮನೆಗಳಿಗೂ ನೀರು ಸರಾಗವಾಗಿ ಪೂರೈಕೆ ಆಗುವಂತೆ ನೋಡಿಕೊಳ್ಳಲಾಗಿದೆ. ಶಿಕ್ಷಣ, ಆರೋಗ್ಯ ಸಹಿತ ವಿವಿಧ ವಲಯಗಳಲ್ಲಿ ನಮ್ಮ ಮಲ್ಲೇಶ್ವರ ಮಾದರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಮಲ್ಲೇಶ್ವರದ ನಿವಾಸಿಗಳ ಜತೆ ಸಂವಾದ ನಡೆಸಿ, ಭಾರತೀಯ ಜನತಾ ಪಾರ್ಟಿ ನೇತೃತ್ವದ ಸರ್ಕಾರದ ಜನಪರ ಕಾರ್ಯಗಳು ಹಾಗೂ ನಮ್ಮ ಮಲ್ಲೇಶ್ವರದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ಅಲ್ಲದೆ ಮಲ್ಲೇಶ್ವರದಲ್ಲಿ ಹಮ್ಮಿಕೊಳ್ಳಲಾದ ಬೂತ್ ಸಮಿತಿ ಸಭೆಯಲ್ಲಿ ಪಾಲ್ಗೊಂಡು, ಈ ಬಾರಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸುವ ಬಗ್ಗೆ ಚರ್ಚಿಸಲಾಗುತ್ತಿದೆ.
ಇದರೊಂದಿಗೆ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಮುಖಂಡರು, ಬೂತ್ ಮಟ್ಟದ ಕಾರ್ಯಕರ್ತರನ್ನು ಸಿಎನ್ ಅಶ್ವತ್ಥ್ ನಾರಾಯಣ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯ ಗಾಯತ್ರಿನಗರ ವಾರ್ಡ್‌ನ ಮಹಾಕವಿ ಕುವೆಂಪು ಮೆಟ್ರೋ ನಿಲ್ದಾಣದ ಪಕ್ಕದಲ್ಲಿರುವ ಸ್ಥಳದಲ್ಲಿ ನಮ್ಮಕ್ಲಿನಿಕ್ ನಿರ್ಮಿಸಲು ಅನುಮತಿ ಪಡೆದು, ಕೇವಲ 34 ದಿನಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆಯನ್ನು ಮಾಡಲಾಗಿದೆ.
ನಮ್ಮ ಮಲ್ಲೇಶ್ವರದ ಹಿರಿಮೆಗೆ ಕಳಶಪ್ರಾಯವಾಗಿರುವ ಸ್ಯಾಂಕಿ ಕೆರೆಯನ್ನು ಸ್ವಚ್ಛ, ಸುಂದರವಾಗಿಡುವ ಜತೆ ವರ್ಷಪೂರ್ತಿ ತುಂಬಿರಬೇಕು ಎಂಬ ಆಶಯದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಸ್ಯಾಂಕಿಯ ಸುತ್ತ ಗಿಡಗಳನ್ನು ಬೆಳೆಸಿ ಹಸಿರಾಗಿಡುವ ಜತೆ ಇದರ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಸಿಎನ್ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.












Click it and Unblock the Notifications