ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡದ ಬೆಂಗಳೂರಿನ ಕ್ಷೇತ್ರಗಳು
ಬೆಂಗಳೂರು, ಏಪ್ರಿಲ್ 06; ಕರ್ನಾಟಕದ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಗುರುವಾರ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಘೋಷಣೆ ಮಾಡಿದೆ. ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಈ ಬಾರಿಯ ಚುನಾವಣೆಗೆ ಮಾರ್ಚ್ 25ರಂದು ಕಾಂಗ್ರೆಸ್ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಏಪ್ರಿಲ್ 6ರಂದು ಎರಡನೇ ಪಟ್ಟಿಯನ್ನು ಪ್ರಕಟಿಸಿದೆ. 2ನೇ ಪಟ್ಟಿಯಲ್ಲಿ ಬೆಂಗಳೂರು ನಗರದ 4 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಮೊದಲ ಪಟ್ಟಿಯಲ್ಲಿ ನಗರದ 16 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು.

ಬೆಂಗಳೂರು ನಗರ (ಬಿಬಿಎಂಪಿ ವ್ಯಾಪ್ತಿ)ಯಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. ರಾಜ್ಯದಲ್ಲಿ ಅಧಿಕಾರ ಹಿಡಿಯಲು ಯಾವುದೇ ಪಕ್ಷವಾದರೂ ಸಹ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ, ಬೆಂಗಳೂರು ನಗರದಲ್ಲಿ ಹೆಚ್ಚಿನ ಸ್ಥಾನಗಳಿಗಬೇಕಿದೆ. ಕಾಂಗ್ರೆಸ್ ಪಕ್ಷ ಸಹ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಸ್ಥಾನಗಳಿಸಲು ತಂತ್ರ ರೂಪಿಸಿದೆ.
ಟಿಕೆಟ್ ಘೋಷಣೆಯಾದ ಕ್ಷೇತ್ರಗಳು; ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿಯಲ್ಲಿ ಬ್ಯಾಟರಾಯನಪುರ (ಕೃಷ್ಣ ಬೈರೇಗೌಡ), ರಾಜರಾಜೇಶ್ವರಿ ನಗರ (ಕುಸುಮಾ ಹನುಮಂತರಾಯಪ್ಪ), ಮಲ್ಲೇಶ್ವರ (ಅನೂಪ್ ಅಯ್ಯಂಗಾರ್) ಹೆಬ್ಬಾಳ (ಬೈರತಿ ಸುರೇಶ್), ಸರ್ವಜ್ಞ ನಗರ (ಕೆ. ಜೆ. ಜಾರ್ಜ್), ಶಿವಾಜಿ ನಗರ (ರಿಜ್ವಾನ್ ಅರ್ಷದ್), ಶಾಂತಿ ನಗರ (ಎನ್. ಎ. ಹ್ಯಾರೀಸ್), ಗಾಂಧಿ ನಗರ (ದಿನೇಶ್ ಗುಂಡೂರಾವ್), ರಾಜಾಜಿನಗರ (ಪುಟ್ಟಣ್ಣ) ಅಭ್ಯರ್ಥಿಗಳು ಎಂದು ಘೋಷಣೆ ಮಾಡಲಾಗಿದೆ.
ಗೋವಿಂದ ರಾಜನಗರ (ಪ್ರಿಯ ಕೃಷ್ಣ), ವಿಜಯ ನಗರ (ಎಂ. ಕೃಷ್ಣಪ್ಪ), ಚಾಮರಾಜಪೇಟೆ (ಜಮೀರ ಅಹಮದ್ ಖಾನ್), ಬಸವನಗುಡಿ (ಯು. ಬಿ. ವೆಂಕಟೇಶ್), ಬಿಟಿಎಂ ಲೇಔಟ್ (ರಾಮಲಿಂಗಾ ರೆಡ್ಡಿ), ಜಯನಗರ (ಸೌಮ್ಯಾ ರೆಡ್ಡಿ), ಮಹದೇವಪುರ (ನಾಗೇಶ್ ಟಿ.), ಆನೇಕಲ್ (ಬಿ. ಶಿವಣ್ಣ) ಅಭ್ಯರ್ಥಿಗಳು ಎಂದು ಕಾಂಗ್ರೆಸ್ ಪಕ್ಷ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಗುರುವಾರ ಬಿಡುಗಡೆಯಾದ 2ನೇ ಪಟ್ಟಿಯಲ್ಲಿ ಕಾಂಗ್ರೆಸ್ ಯಲಹಂಕ (ಕೇಶವ ರಾಜಣ್ಣ ಬಿ.), ಯಶವಂತಪುರ (ಎಸ್. ಬಾಲರಾಜ್ ಗೌಡ), ಮಹಾಲಕ್ಷ್ಮೀ ಲೇಔಟ್ (ಕೇಶವಮೂರ್ತಿ), ಪದ್ಮನಾಭನಗರ (ವಿ. ರಘುನಾಥ ನಾಯ್ಡು) ಅಭ್ಯರ್ಥಿಗಳು ಎಂದು ಘೋಷಣೆ ಮಾಡಲಾಗಿದೆ. ಇನ್ನೂ ನಗರದಲ್ಲಿ ಚಿಕ್ಕಪೇಟೆ, ಕೆ. ಆರ್. ಪುರ, ಬೊಮ್ಮನಹಳ್ಳಿ, ದಾಸರಹಳ್ಳಿ, ಸಿವಿ ರಾಮನ್ ನಗರ, ಪುಲಿಕೇಶಿ ನಗರ, ಬೆಂಗಳೂರು ದಕ್ಷಿಣ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಬೇಕಿದೆ.
ಪುಲಿಕೇಶಿ ನಗರದಲ್ಲಿ ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್‌ನವರೇ. ಆದರೆ ಅಲ್ಲಿ ಬಿಬಿಎಂಪಿ ಮಾಜಿ ಮೇಯರ್ ಮತ್ತು ಡಿ. ಕೆ. ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಸಂಪತ್ ರಾಜ್ ಮತ್ತು ಸಿದ್ದರಾಮಯ್ಯ ಬೆಂಬಲಿಗ ಅಖಂಡ ಶ್ರೀನಿವಾಸಮೂರ್ತಿ ನಡುವೆ ಟಿಕೆಟ್ ಪಡೆಯಲು ಜಟಾಪಟಿ ಇದೆ. ಆದ ಕಾರಣ ಪಕ್ಷ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ.
ಚಿಕ್ಕಪೇಟೆಯಲ್ಲಿ ಮಾಜಿ ಶಾಸಕ ಆರ್. ವಿ. ದೇವರಾಜ್‌ಗೆ ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆ ಇದೆ. ಆದರೆ ಅವರ ಪುತ್ರ ಬಿಬಿಎಂಪಿ ಮಾಜಿ ಸದಸ್ಯ ಯುವರಾಜ್ ಸಹ ಪ್ರಬಲ ಆಕಾಂಕ್ಷಿ. ಪಿ. ಆರ್. ರಮೇಶ್, ಗಂಗಾಬಿಕೆ ಸಹ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದ್ದರಿಂದ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಘೋಷಣೆ ಬಾಕಿ ಇಟ್ಟಿದೆ.
ಕೆ. ಆರ್. ಪುರ ಕ್ಷೇತ್ರದಲ್ಲಿ ಬಿಜೆಪಿಯ ನಾಯಕ, ಮಾಜಿ ಶಾಸಕ ನಂದೀಶ್ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಇದೆ. ಬಿಜೆಪಿ ಕ್ಷೇತ್ರದಲ್ಲಿ ಬೈರತಿ ಬಸವರಾಜಗೆ ಟಿಕೆಟ್ ನೀಡುವುದು ಖಚಿತವಾಗಿದೆ. ಉಪ ಚುನಾವಣೆಯಲ್ಲಿ ಬೈರತಿಗೆ ಕ್ಷೇತ್ರ ಬಿಟ್ಟುಕೊಟ್ಟ ನಂದೀಶ್ ರೆಡ್ಡಿ ಪಕ್ಷದಲ್ಲಿ ಮೂಲೆಗುಂಪಾಗುತ್ತಿದ್ದು, ಅವರ ಬೆಂಬಲಿಗರು ಕಾಂಗ್ರೆಸ್ ಸೇರುವಂತೆ ಸಲಹೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಇದೆ.
ಹಿರಿಯ ಶಾಸಕರಿಗೆ ಟಾಸ್ಕ್; ಬೆಂಗಳೂರುನಗರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಹಿರಿಯ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟಾಸ್ಕ್ ನೀಡಿದ್ದಾರೆ. ಕಳೆದ ಮೂರು ಚುನಾವಣೆಯಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿರುವ ನಾಯಕರಿಗೆ ಅಕ್ಕ-ಪಕ್ಕದ ಕ್ಷೇತ್ರಗಳಲ್ಲಿ ಸಹ ಗೆಲ್ಲಲು ಕೆಲಸ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಜಮೀರ್ ಅಹಮದ್ ಖಾನ್, ಕೃಷ್ಣ ಬೈರೇಗೌಡ, ಎನ್. ಎ. ಹ್ಯಾರೀಸ್, ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಎಂ. ಕೃಷ್ಣಪ್ಪಗೆ ಈ ಜವಾಬ್ದಾರಿ ನೀಡಡಲಾಗಿದೆ.
2018ರಲ್ಲಿ ಕಾಂಗ್ರೆಸ್ ಪಕ್ಷ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಆನೇಕಲ್ ಸೇರಿ 12 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಬಂದಿದ್ದರು. ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಆರ್. ಆರ್. ನಗರದ ಮುನಿರತ್ನ, ಕೆ. ಆರ್. ಪುರದ ಬೈರತಿ ಬಸವರಾಜ, ಯಶವಂತಪುರದ ಎಸ್. ಟಿ. ಸೋಮಶೇಖರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.












Click it and Unblock the Notifications