Name Missing In Voters List: ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ
ಬೆಂಗಳೂರು, ಮೇ 10: ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮತದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇಂತಹ ಹೊತ್ತಿನಲ್ಲೇ ರಾಜಧಾನಿ ಬೆಂಗಳೂರಿನ ಜಯನಗರದಲ್ಲಿ ಮತದಾನದಲ್ಲಿ ಹೆಸರು ನಾಪತ್ತೆಯಾಗಿದ್ದು, ಮತ ಚಲಾಯಿಸಲಾಗದೇ ಪರದಾಡಿದ ಘಟನೆ ನಡೆದಿದೆ.
ಮತದಾನ ಹಕ್ಕು ಚಲಾಯಿಸಲು ಜಯನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆ.ಪಿ. ನಗರ 5ನೇ ಹಂತದಲ್ಲಿರುವ ಸಂವೇದ್ ಸ್ಕೂಲ್ ಮತಗಟ್ಟೆಗೆ ಬಂದ ಒಂದೇ ಕುಟುಂಬದ ಮೂವರಿಗೆ ನಿರಾಸೆಯಾಗಿದೆ. ಯಾಕೆಂದರೆ ಮತದಾರರ ಪಟ್ಟಿಯಲ್ಲಿ ಒಂದೇ ಕುಟುಂಬದ ಮೂವರ ಹೆಸರು ನಾಪತ್ತೆಯಾಗಿದೆ. ಒಂದೇ ಕುಟುಂಬ ನಾಲ್ವರ ಪೈಕಿ ಪತಿ ಹೆಸರು ಮಾತ್ರ ಇದೆ. ಆದರೆ ಪತ್ನಿ, ಅವರ ಅತ್ತೆ ಮತ್ತು ಮಾವ ಅವರ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ಇದರಿಂದ ಆ ಕುಟುಂಬಸ್ಥರು ಮತಗಟ್ಟೆ ಎದುರು ಆಕ್ರೋಶ ಹೊರ ಹಾಕಿದರು.

ಈ ಕುರಿತು ಪರ್ಯಾಯ ವ್ಯವಸ್ಥೆ ಮಾಡಿ ನಮಗೆ ಮತದಾನಕ್ಕೆ ಅವಕಾಶ ಮಾಡಿಕೊಡಿ ಎಂದು ಆ ಕುಟುಂಬಸ್ಥರು ಅಧಿಕಾರಿಗಳನ್ನು ಕೇಳಿದ್ದಾರೆ. ಆದರೆ ಅಧಿಕಾರಿಗಳು ಈ ಬಗ್ಗೆ ನಮಗೆ ಯಾವುದೇ ತರಬೇತಿ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಮತ್ತಷ್ಟು ಕಿಡಿಕಾರಿದ ಆ ಕುಟುಂಬಸ್ಥರು, ಕಳೆದ ಬಾರಿ (2018) ಹೀಗೆ ಆಗಿತ್ತು. ಅಂದು ಸಹ ಮತದಾನ ಪಟ್ಟಿಯಲ್ಲಿ ನಮ್ಮ ಹೆಸರು ಇರಲಿಲ್ಲ. ಈ ಬಾರಿಯು ನಾವು ಮತದಾನ ವಂಚಿತರಾಗುವಂತೆ ಮಾಡಲಾಗಿದೆ ಎಂದು ಕೂಗಾಡಿದ್ದಾರೆ.
ಬ್ಯಾಟರಾಯನಪುರದಲ್ಲಿ ಇಬ್ಬರಿಗೆ ನಿರಾಸೆ
ಜಯನಗರದಂತೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ 219ರಲ್ಲಿ ಮತಚಲಾಯಿಸಬೇಕಿದ್ದ ಇಬ್ಬರಿಗೆ ನಿರಾಸೆಯಾಗಿದೆ. ಉತ್ಸಾಹದಿಂದ ಮತಗಟ್ಟೆಗೆ ತೆರಳಿದ್ದ ಇಬ್ಬರಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದ್ದನ್ನು ಕಂಡು ಶಾಕ್ ಆದರು. ಈ ಕುರಿತು ಅಧಿಕಾರಿಗಳು ಮತ್ತು ಚುನಾವಣಾ ಆಯೋಗ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಮತ ಚಾಲಾಯಿಸದೇ ವಾಪಾಸ್ ಆದರು ಎಂದು ಟಿವಿ ನೈನ್ ಕನ್ನಡ ವರದಿ ಮಾಡಿದೆ.
ಇಂದು ಬೆಳಗ್ಗೆ 7ಗಂಟೆಯಿಂದ ಆರಂಭವಾದ ಮತದಾನಕ್ಕೆ ರಾಜ್ಯದ ದೊಡ್ಡ ಜಿಲ್ಲೆ ಬೆಂಗಳೂರು ನಗರ ಸೇರಿದಂತೆ ಎಲ್ಲ ಜಿಲ್ಲೆಗಳ ಮತದಾರರಿಂದಲೂ ವ್ಯಾಪಕ ಸ್ಪಂದನೆ ದೊರೆಯುತ್ತಿದೆ. ಯುವ ಮತದಾರರು, ನಟ ನಟಿಯರು, ವಯೋವೃದ್ಧರು ಸೇರಿದಂತೆ ರಾಜಕೀಯ ಗಣ್ಯರು ಮತ್ತು ಸಾರ್ವಜನಿಕರು ಉತ್ಸಾಹದಿಂದಲೇ ಬಂದು ಮತದಾನ ಮಾಡಿರುವುದು ಕಂಡು ಬಂದಿದೆ. ಸಂಜೆಯ 6ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.












Click it and Unblock the Notifications