ಅವರು ಬಂಗಾರಪ್ಪನವರ ಮಗಳು ಹೀಗಾಗಿ ಕಾಂಗ್ರೆಸ್ ಸೇರಿದ್ದಾರೆ: ಆರ್.ಅಶೋಕ್ ಪ್ರತಿಕ್ರಿಯೆ
ಬೆಂಗಳೂರು, ಏಪ್ರಿಲ್ 28: ದಿವಂಗತ ಮೇರುನಟ ಡಾ.ರಾಜಕುಮಾರ್ ಹಾಗೂ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಯಾವತ್ತು ರಾಜಕೀಯದ ಬಗ್ಗೆ ಮಾತನಾಡಿದವರಲ್ಲ. ಇವರು ಬಂಗಾರಪ್ಪನವರ ಮಗಳು ಹೀಗಾಗಿ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಹೇಳಿದರು.
ಜೆಡಿಎಸ್ ತೊರೆದು ಶುಕ್ರವಾರ ಕಾಂಗ್ರೆಸ್ ಸೇರ್ಪಡೆಯಾದ ಗೀತಾ ಶಿವರಾಜಕುಮಾರ್ ಅವರ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಕನಕಪುರ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ ಪ್ರತಿಕ್ರಿಯಿಸಿದರು. ಗೀತಾ ಶಿವರಾಜಕುಮಾರ್ ಅವರ ಪಕ್ಷ ಸೇರ್ಪಡೆ ಇದೇ ಮೊದಲೇನಲ್ಲ. ಅವರ ಸಹೋದರ (ಮಧು ಬಂಗಾರಪ್ಪ) ರಾಜಕೀಯಕ್ಕೆ ಬಂದಾಗಲೇ ಅವರಿಗೂ ಆಸೆ ಇತ್ತು. ಆಗಲೂ ಅವರು ರಾಜಕೀಯ ಪಕ್ಷವೊಂದನ್ನು ಸೇರಿದ್ದರು ಎಂದರು.

ಡಾ.ರಾಜಕುಮಾರ್ ಅವರಾಗಲಿ, ಡಾ.ಪುನೀತ್ ರಾಜಕುಮಾರ್ ಅವರಾಗಲಿ ರಾಜಕೀಯಕ್ಕೆ ಬಂದವರಲ್ಲ. ರಾಜಕೀಯ ಕುರಿತು ಯಾವತ್ತೂ ಮಾತನಾಡಿಲ್ಲ. ಗೀತಾ ಶಿವರಾಜಕುಮಾರ್ ರಾಜಕುಮಾರ್ ಅವರ ಸೊಸೆಯಾದರೂ ಸಹ ಅವರು ಮಾಜಿ ಸಿಎಂ ಎಸ್. ಬಂಗಾರಪ್ಪನವರ ಪುತ್ರಿ. ಅವರಿಗೆ ಮೊದಲಿಂದಲೂ ರಾಜಕೀಯದ ಆಸೆ ಇತ್ತು. ಅವರು ಹೊಸದಾಗೇನು ಪಕ್ಷ ಸೇರಿಲ್ಲ. ಇದಕ್ಕೂ ರಾಜಕುಮಾರ್ ಅವರ ಕುಟುಂಬಕ್ಕೂ ಏನು ಸಂಬಂಧ ಇಲ್ಲ ಎಂದು ಹೇಳಿದರು.
ಮಧು ಬಂಗಾರಪ್ಪ ನಂತರ ಗೀತಾ ಸೇರ್ಪಡೆ
ಇತ್ತೀಚೆಗಷ್ಟೇ ಗೀತಾ ಶಿವರಾಜ್ ಕುಮಾರ್ ಸಹೋದರ ಮಧು ಬಂಗಾರಪ್ಪನವರು ಸಹ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಅವರು ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅದೇ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಈ ಮೊದಲು ಜೆಡಿಎಸ್‌ನಲ್ಲಿದ್ದ ಹಿರಿಯ ನಟ ಶಿವರಾಜಕುಮಾರ್ ಅವರ ಪತ್ನಿ ಗೀತಾ ಅವರು ಪಕ್ಷ ತೊರೆದು ಶುಕ್ರವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದರು. ಸಾಕಷ್ಟು ಜನರಿಗೆ ಗಾಳಾ ಹಾಕಿ ಹಾಕಿ ಸುಸ್ತಾಗಿದ್ದೆ. ಈ ಬಾರಿ ಗೀತಾ ಶಿವರಾಜಕುಮಾರ್ ಅವರಿಗೆ ಗಾಳ ಹಾಕಿ ಹಿಡಿದು ಪಕ್ಷಕ್ಕೆ ಕರೆತಂದಿದ್ದೇನೆ. ಅವರ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಬಲ ಬರಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.












Click it and Unblock the Notifications