ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ ನಿವಾಸದ ಮೇಲೆ ಜಿಎಸ್‌ಟಿ ಅಧಿಕಾರಿಗಳ ದಾಳಿ
ಬೆಂಗಳೂರು, ಮಾರ್ಚ್. 28: ಕೋರಮಂಗಲದಲ್ಲಿರುವ ಬಿಟಿಎಂ ಲೇಔಟ್ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ ಅವರ ನಿವಾಸದ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆ ಅಧಿಕಾರಿಗಳು ಸೋಮವಾರ ರಾತ್ರಿ ದಾಳಿ ನಡೆಸಿದ್ದಾರೆ. ಮನೆಯಲ್ಲಿ ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಇದೇ ವೇಳೆ, ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಇದು ತಮ್ಮ ವಿರುದ್ಧದ ರಾಜಕೀಯ ಷಡ್ಯಂತ್ರ. ಬಿಟಿಎಂ ಲೇಔಟ್ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಈ ರೀತಿ ದಾಳಿ ಮಾಡಿಸಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ವಿರುದ್ಧ ಆರೋಪ ಮಾಡಿದ್ದಾರೆ. ದಾಳಿ ವೇಳೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆ ಅಧಿಕಾರಿಗಳು ಏನಾದರು ವಶಪಡಿಸಿಕೊಂಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಆದರೆ, ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಮತದಾರರಿಗೆ ಉಡುಗೊರೆಯಾಗಿ ನೀಡಿದ ಕಡಿಮೆ ಗುಣಮಟ್ಟದ ಕುಕ್ಕರ್‌ಗಳನ್ನು ನೂರಾರು ಜನರು ಹಿಂದಿರುಗಿಸಿದ್ದಾರೆ ಮತ್ತು ಆ ಕುಕ್ಕರ್‌ಗಳನ್ನು ತಮ್ಮ ನಿವಾಸದಲ್ಲಿ ಇರಿಸಲಾಗಿದೆ ಎಂದು ಅನುಲ್ ಶೆಟ್ಟಿ ಹೇಳಿದ್ದಾರೆ. ತಮ್ಮ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ್ ಶೆಟ್ಟಿ, ಅಧಿಕಾರಿಗಳು ಯಾವುದೇ ವಾರಂಟ್ ಇಲ್ಲದೆ ತಮ್ಮ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
"ಅವರು ದಾಳಿ ನಡೆಸಿದಾಗ ನಾನು ದೆಹಲಿಯಲ್ಲಿದ್ದೆ. ಕಾನೂನು ವಿಧಿವಿಧಾನಗಳನ್ನು ಅನುಸರಿಸದೆ ಅಕ್ರಮವಾಗಿ ನನ್ನ ಮನೆಗೆ ಪ್ರವೇಶಿಸಿದ್ದಾರೆ. ನಾನು ಸಾರ್ವಜನಿಕ ಜೀವನದಲ್ಲಿದ್ದೇನೆ. ಪ್ರತಿದಿನ ನೂರಾರು ಜನರು ನನ್ನನ್ನು ಭೇಟಿಯಾಗುತ್ತಾರೆ. ನಾನು ದೆಹಲಿಯಲ್ಲಿದ್ದಾಗ ಅವರು ನನ್ನ ಮನೆಯ ಮೇಲೆ ದಾಳಿ ಮಾಡಲು ಏಕೆ ಬಂದರು..? ಇದು ಸ್ಥಳೀಯ ಶಾಸಕ ರಾಮಲಿಂಗಾರೆಡ್ಡಿ ರೂಪಿಸಿರುವ ರಾಜಕೀಯ ಷಡ್ಯಂತ್ರ" ಎಂದಿದ್ದಾರೆ.
ಮನೆಯ ಹೊರಗಡೆ ನೂರಾರು ಮಂದಿ ಬೆಂಬಲಿಗರ ಜೊತೆಗೆ ಸಂವಾದ ನಡೆಸಿರುವ ಅವರು, ಬಿಟಿಎಂ ಲೇಔಟ್ ಜನರಿಗೆ ಎಲ್ಲವೂ ಗೊತ್ತು. ಇದು ರಾಮಲಿಂಗಾರೆಡ್ಡಿ ಅವರ ಕೆಲಸ ಎಂದು. ನಾವು ಏನನ್ನು ಹೇಳಬೇಕಾಗಿಲ್ಲ. ಇಂತಹ ದಾಳಿಗಳನ್ನು ನಡೆಸಲು ಭ್ರಷ್ಟ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ. ನಮ್ಮ ಮನೆಯಲ್ಲಿ ಏನಾದರೂ ಅಕ್ರಮ ಕಂಡು ಬಂದರೆ ನಾನು ರಾಜಕೀಯ ತ್ಯಜಿಸುತ್ತೇನೆ ಎಂದು ಅನಿಲ್ ಶೆಟ್ಟಿ ಹೇಳಿದ್ದಾರೆ.

"ರಾಮಲಿಂಗಾ ರೆಡ್ಡಿ ಅವರು ಕುಕ್ಕರ್ ವಿತರಣೆ ಮಾಡಿದ ಹಿನ್ನೆಲೆ ಅವರ ಮೇಲೆ ಎಫ್‌ಐಆರ್ ಆಗುತ್ತೆ ಎಂದು ನನ್ನ ಮೇಲೆ ದಾಳಿ ಮಾಡಿಸಿದ್ದಾರೆ. ನಾವೆಲ್ಲರೂ ಕಾರ್ಯಕರ್ತರು ಒಗ್ಗಟ್ಟಾಗಿ ಹೋರಾಡುತ್ತೇವೆ. ರಾಮಲಿಂಗಾರೆಡ್ಡಿ ಅವರ ಅಧಿಕಾರ ಇವತ್ತಿಗೆ ಕೊನೆ ಆಗಬೇಕು. ರಾಜಕೀಯ ಷಡ್ಯಂತ್ರಕ್ಕೆ ನನ್ನ ಮನೆ ಮೇಲೆ ದಾಳಿ ನಡೆಸಲಾಗಿದೆ. ನಮ್ಮ ಮನೆ ಕೆಲಸದವರಿಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ಧಮ್ಕಿ ಹಾಕಿದ್ದಾರೆ" ಎಂದು ಹೇಳಿದ್ದಾರೆ.
ಶಾಸಕ ರಾಮಲಿಂಗಾ ರೆಡ್ಡಿ ಮತದಾರರಿಗೆ ಕಡಿಮೆ ಗುಣಮಟ್ಟದ ಕುಕ್ಕರ್‌ಗಳನ್ನು ವಿತರಿಸಿದ್ದಾರೆ. ಇದರಿಂದಾಗಿ ಕುಕ್ಕರ್ ಸ್ಫೋಟದ ನಿದರ್ಶನಗಳು ವರದಿಯಾಗಿವೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ ಆರೋಪಿಸಿದ್ದಾರೆ. ಫೆಬ್ರವರಿಯಲ್ಲಿ, ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ರಾಮಲಿಂಗಾರೆಡ್ಡಿ ಅವರು ವಿತರಿಸಿದ ಕಡಿಮೆ ಗುಣಮಟ್ಟದ ಕುಕ್ಕರ್‌ಗಳನ್ನು ವಿತರಿಸಿದ್ದಾರೆ ಎಂದು ಹೇಳಿ ಹೊಸ ಉತ್ತಮ ಕುಕ್ಕರ್‌ಗಳನ್ನು ನೀಡುತ್ತಿದ್ದೇನೆ ಎಂದು ವಿಡಿಯೋ ಪೋಸ್ಟ್ ಮಾಡಿದ್ದರು. ಆರೋಪದ ಬಗ್ಗೆ ಕಾಂಗ್ರೆಸ್ ನಾಯಕರು ಇನ್ನೂ ಪ್ರತಿಕ್ರಿಯಿಸಿಲ್ಲ.












Click it and Unblock the Notifications