ಅತ್ತ ಬಿಎಸ್‌ವೈಗೆ ಒಳಮೀಸಲಾತಿ ಪೆಟ್ಟು, ಇತ್ತ ಒಕ್ಕಲಿಗ, ಲಿಂಗಾಯತ ಮತಗಳು ನಮ್ಮವೇ ಎನ್ನುತ್ತಿರುವ ಬಿಜೆಪಿ!
ಬೆಂಗಳೂರು, ಮಾರ್ಚ್. 28: ಕಳೆದ ವಾರ ಬಸವರಾಜ ಬೊಮ್ಮಾಯಿ ಆಡಳಿತವು ಮೀಸಲಾತಿ ಸಂಬಂಧಿತ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ ನಂತರ ಬಿಜೆಪಿಯ ಚುನಾವಣಾ ವ್ಯವಸ್ಥಾಪಕರು ಉತ್ಸುಕರಾಗಿದ್ದಾರೆ. ಮೀಸಲಾತಿ ಹೆಚ್ಚಳದಿಂದ ಪ್ರಮುಖ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಮತಗಳು ತಮ್ಮವೇ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದೆ.
ಬಿಜೆಪಿಯ ಮೂಲಗಳ ಪ್ರಕಾರ, ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಮತ್ತು ಒಕ್ಕಲಿಗರು ಮತ್ತು ಲಿಂಗಾಯತರಿಗೆ ಒಬಿಸಿ ಕೋಟಾವನ್ನು ಹೆಚ್ಚಿಸುವ ಸರ್ಕಾರದ ನಿರ್ಧಾರಗಳ ನಂತರ ಎಲ್ಲರ ಮತಗಳು ತನ್ನ ಪರವಾಗಿ ತಿರುಗುತ್ತದೆ ಎಂದು ವಿಶ್ವಾಸ ಹೊಂದಿದೆ. ಆದರೆ, ಸೋಮವಾರವಷ್ಟೇ ಒಳಮೀಸಲಾತಿ ಕುರಿತಂತೆ ಬಿಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ನಡೆದು ಭಾರೀ ಪ್ರತಿಭಟನೆ ನಡೆದಿದೆ.

ಕಳೆದ ಶುಕ್ರವಾರ, ಒಬಿಸಿ ಕೋಟಾದಡಿಯಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಲು ಸಂಪುಟ ಸಭೆ ನಿರ್ಧರಿಸಿದೆ. ಮುಸ್ಲಿಮರ ಶೇಕಡಾ 4 ರಷ್ಟು ಮೀಸಲಾತಿಯನ್ನು ಒಕ್ಕಲಿಗರು ಮತ್ತು ಲಿಂಗಾಯತರಿಗೆ ಸಮಾನವಾಗಿ ವಿತರಿಸಲಾಗುವುದು. ವರ್ಗ 2B ಅಡಿಯಲ್ಲಿ ಬರುವ ಮುಸ್ಲಿಮರನ್ನು 10 ಪ್ರತಿಶತ ಇಡಬ್ಲ್ಯೂಎಸ್ ಕೋಟಾಗೆ ಸ್ಥಳಾಂತರಿಸಲಾಗುತ್ತದೆ.
ಸಂಪುಟ ಸಭೆ ನಿರ್ಧಾರದ ನಂತರ, ಈ ಹಿಂದೆ ಶೇಕಡಾ 4 ರಷ್ಟು ಮೀಸಲಾತಿ ಪಡೆಯುತ್ತಿದ್ದ ಒಕ್ಕಲಿಗರು ಕ್ರಮವಾಗಿ 2 (ಸಿ) ಮತ್ತು 2 (ಡಿ) ಅಡಿಯಲ್ಲಿ ಕ್ರಮವಾಗಿ ಶೇಕಡಾ 6 ರಷ್ಟು ಮೀಸಲಾತಿ ಪಡೆಯಲಿದ್ದಾರೆ. ಇನ್ನು, ಶೇಕಡಾ 5 ರಷ್ಟು ಮೀಸಲಾತಿ ಪಡೆಯುತ್ತಿದ್ದ ಲಿಂಗಾಯತರು ಶೇಕಡಾ 7 ರಷ್ಟು ಮೀಸಲಾತಿ ಪಡೆಯಲಿದ್ದಾರೆ. ಆದರೆ, ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರ ಕೈಗೊಂಡ ಮೀಸಲಾತಿ ನಿರ್ಧಾರಗಳನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ಈಗಾಗಲೇ ಘೋಷಿಸಿದೆ.

"ಮುಸ್ಲಿಂ ಕೋಟಾವನ್ನು ರದ್ದುಗೊಳಿಸುವ ನಿರ್ಧಾರವನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಬಿಜೆಪಿ ಈಗಾಗಲೇ ನಿರೀಕ್ಷಿಸಿತ್ತು. ಮುಸ್ಲಿಂ ಮೀಸಲಾತಿ ರದ್ದತಿ ವಿಚಾರವಾಗಿ ಕಾಂಗ್ರೆಸ್ ಬ್ಯಾಟಿಂಗ್ ಮಾಡಿದರೆ ಧರ್ಮ ಆಧಾರಿತ ಮೀಸಲಾತಿ ವಿರುದ್ಧ ನಮ್ಮ ನಿರೂಪಣೆಯು ಬಲಗೊಳ್ಳುತ್ತದೆ" ಎಂದು ಬಿಜೆಪಿ ಚುನಾವಣಾ ತಂತ್ರಜ್ಞರು ಹೇಳಿದ್ದಾರೆ.
ಬಿಜೆಪಿಯು ಒಕ್ಕಲಿಗರಿಂದ ಗಮನಾರ್ಹವಾದ ಚುನಾವಣಾ ಲಾಭವನ್ನು ನಿರೀಕ್ಷಿಸದಿದ್ದರೂ, ಪಂಚಮಸಾಲಿಗಳಿಗೆ ನೀಡಿರುವ ಮೀಸಲಾತಿಯು ಉತ್ತರ ಕರ್ನಾಟಕದಲ್ಲಿ ಲಿಂಗಾಯತರಿಗೆ ಸಂಬಂಧಿಸಿದಂತೆ ತನ್ನ ಸ್ಥಾನವನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ ಎಂದು ಪಕ್ಷವು ವಿಶ್ವಾಸ ಹೊಂದಿದೆ. ಪಂಚಮಸಾಲಿಗಳಿಗೆ ಮೀಸಲಾತಿ ಹೆಚ್ಚು ಗೊಳಿಸಿರುವುದು ಕೂಡ ಅಲ್ಲಿ ಇದ್ದ ಆಡಳಿತ ವಿರೋಧಿ ಆತಂಕದಿಂದಲೇ.
ಇನ್ನು, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎಂದು ಬಿಜೆಪಿ ನಿರೀಕ್ಷಿಸಿದೆ. ಕಾಂಗ್ರೆಸ್‌ನ ಹಲವು ದಲಿತ ನಾಯಕರು ಒಳಮೀಸಲಾತಿಯನ್ನು ಬಯಸಿದ್ದರು. ಎಸ್‌ಸಿ (ಎಡ)ಗೆ ಶೇ 6, ಎಸ್‌ಸಿ (ಬಲಕ್ಕೆ ಶೇ 5.5), ಲಂಬಾಣಿಗಳು/ಭೋವಿಗಳು/ಕೊರಮಗಳು/ಕೊರಚರಿಗೆ ಶೇ 4.5 ಮತ್ತು ಇತರರಿಗೆ ಶೇ 1ರಷ್ಟು ಕೋಟಾವನ್ನು ಶಿಫಾರಸು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.
"ಸರ್ಕಾರ ಒಳಮೀಸಲಾತಿ ಘೋಷಿಸಿರುವುದು ನಮಗೆ ಈಗ ಸವಾಲಾಗಿದೆ" ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಒಪ್ಪಿಕೊಂಡಿದ್ದಾರೆ. "ಇದು ಬಿಜೆಪಿಯ ಕಡೆಗೆ ಮತಗಳನ್ನು ಸೆಳೆಯಬಹುದು. ಅದರಲ್ಲೂ ವಿಶೇಷವಾಗಿ ಒಳ ಮೀಸಲಾತಿಯನ್ನು ಬಯಸುವ ಸಮುದಾಯಗಳಿಂದ" ಎಂದು ಹೇಳಿದ್ದಾರೆ. ಆದರೆ, ಈಗಾಗಲೇ ಒಳಮೀಸಲಾತಿ ಕುರಿತಂತೆ ಬಂಜಾರ ಸಮುದಾಯದಿಂದ ಭಾರೀ ಪ್ರತಿಭಟನೆ ನಡೆದಿದೆ. ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡುಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ.
ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಒಳಮೀಸಲಾತಿ ನಿರ್ಧಾರ ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. "ಬಿಜೆಪಿ ಮಾತ್ರ ಇದನ್ನು ಮಾಡಬಹುದಿತ್ತು. ಕಾಂಗ್ರೆಸ್ ಆರು ವರ್ಷಗಳ ಕಾಲ ಆಡಳಿತ ನಡೆಸಿದೆ. ಆದರೆ, ಏನು ಉಪಯೀಗವಾಗಲಿಲ್ಲ. ನಾವು ಈ ವಿಷಯವನ್ನು ಈಗ ಸರಿ ಮಾಡಿದ್ದೇವೆ. ಈ ಬಗ್ಗೆ ಏನೂ ಮಾಡದ ಕಾಂಗ್ರೆಸ್‌ಗೆ ಏಕೆಈ ಪ್ರಶ್ನೆಗಳನ್ನು ಕೇಳುತ್ತಿಲ್ಲ..?" ಅವರು ಹೇಳಿದ್ದಾರೆ.
ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ತರಾತುರಿಯಲ್ಲಿ ನಿರ್ಧಾರ ಕೈಗೊಂಡಿದೆ. ''ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ರಾಜ್ಯಗಳು ತಮ್ಮ ವಿಧಾನಸಭೆಗಳಲ್ಲಿ ಇದೇ ರೀತಿಯ ನಿರ್ಣಯಗಳನ್ನು ಕೈಗೊಂಡು ಕೇಂದ್ರಕ್ಕೆ ಕಳುಹಿಸಿವೆ. ಕೇಂದ್ರವು ಅವುಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಿದೆ. ಕರ್ನಾಟಕದ ನಿರ್ಧಾರವೂ ಇದೇ ಗತಿಯಾಗುವ ಸಾಧ್ಯತೆ ಇದೆ" ಎಂದು ಭವಿಷ್ಯ ನುಡಿದಿದ್ದಾರೆ.












Click it and Unblock the Notifications