ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೇ ಮುಸ್ಲಿಮರಿಗೆ ರದ್ದಾದ ಮೀಸಲಾತಿ ಮತ್ತೆ ಜಾರಿಗೆ ತರುತ್ತೇವೆ ಎಂದ ಕಾಂಗ್ರೆಸ್
ಬೆಂಗಳೂರು, ಮಾರ್ಚ್. 26: ಒಬಿಸಿ ಪಟ್ಟಿಯಲ್ಲಿ 2ಬಿ ವರ್ಗದ ಅಡಿಯಲ್ಲಿ ಮುಸ್ಲಿಮರಿಗೆ ಮೀಸಲಾತಿಯನ್ನು ರದ್ದುಗೊಳಿಸುವ ನಿರ್ಧಾರಕ್ಕಾಗಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕೆಂಡಕಾರಿರುವ ಕಾಂಗ್ರೆಸ್, ಪಕ್ಷವು ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಾತಿಯನ್ನು ಮತ್ತೆ ಜಾರಿಗೆ ತರುವುದಾಗಿ ಭಾನುವಾರ ಘೋಷಿಸಿದೆ.
ಕರ್ನಾಟಕದಲ್ಲಿ ಏಪ್ರಿಲ್, ಮೇ ತಿಂಗಳೊಳಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ಒಬಿಸಿ ಪಟ್ಟಿಯಲ್ಲಿ 2ಬಿ ವರ್ಗದ ಅಡಿಯಲ್ಲಿ ಮುಸ್ಲಿಮರ ಶೇಕಡಾ 4ರಷ್ಟಿರುವ ಮೀಸಲಾತಿಯನ್ನು ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ವೀರಶೈವ ಲಿಂಗಾಯತರಿಗೆ ತಲಾ ಎರಡರಂತೆ ಈ ಸಮಾನವಾಗಿ ಹಂಚಲು ನಿರ್ಧರಿಸಲಾಗಿದೆ. ಇದನ್ನು ಎರಡು ರಾಜಕೀಯವಾಗಿ ಪ್ರಭಾವಿ ಸಮುದಾಯಗಳು ಸ್ವಾಗತಿಸಿವೆ.

ಸರ್ಕಾರವು ಮುಸ್ಲಿಮರನ್ನು 10 ಪ್ರತಿಶತದಷ್ಟು ಮೀಸಲಾತಿಯಿರುವ ಆರ್ಥಿಕವಾಗಿ ದುರ್ಬಲ ವರ್ಗಗಳ (EWS) ಅಡಿಗೆ ವರ್ಗಾಯಿಸಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ಕ್ರಮವನ್ನು ಅಸಂವಿಧಾನಿಕ ಎಂದು ಕರೆದಿದ್ದು, " ಬಿಜೆಪಿ ಸರ್ಕಾರ ಮೀಸಲಾತಿಯನ್ನು ಆಸ್ತಿಯಂತೆ ಹಂಚಬಹುದು ಎಂದು ಭಾವಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
"ಅದು ಆಸ್ತಿಯಲ್ಲ. ಇದು ಅಲ್ಪಸಂಖ್ಯಾತರ ಹಕ್ಕು" ಎಂದಿರುವ ಅವರು, ಮುಸ್ಲಿಮರ ಶೇಕಡಾ 4 ರಷ್ಟನ್ನು ರದ್ದುಪಡಿಸಿ ಯಾವುದೇ ಪ್ರಮುಖ ಸಮುದಾಯಗಳಿಗೆ ನೀಡುವುದು ನಮಗೆ ಇಷ್ಟವಿಲ್ಲ. ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ನಮ್ಮ ಸಹೋದರರು ಮತ್ತು ಕುಟುಂಬದ ಸದಸ್ಯರು. ಇಡೀ ಒಕ್ಕಲಿಗರು ಮತ್ತು ವೀರಶೈವ-ಲಿಂಗಾಯತರು ಈ ಪ್ರಸ್ತಾಪವನ್ನು ತಿರಸ್ಕರಿಸುತ್ತಿದ್ದಾರೆ" ಎಂದಿದ್ದಾರೆ.

"ಮುಂದಿನ 45 ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಈ ಮೀಸಲಾಯತಿಯ ಹೊಸ ನಿಯಮವನ್ನು ನಾವು ರದ್ದುಗೊಳಿಸುತ್ತೇವೆ. ಮುಸ್ಲಿಮರನ್ನು ಒಬಿಸಿ ಪಟ್ಟಿಯಿಂದ ತೆಗೆದುಹಾಕಲು ಯಾವುದೇ ಆಧಾರವಿಲ್ಲ" ಎಂದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಸೋಲನುಭವಿಸಲಿರುವ ಬಸವರಾಜ ಬೊಮ್ಮಾಯಿ ಸರ್ಕಾರವು "ಭಾವನಾತ್ಮಕ ಸಮಸ್ಯೆಗಳನ್ನು" ಇಟ್ಟುಕೊಂಡು ಮತ ಗಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪಕ್ಷದ ಅಧ್ಯಕ್ಷರಾಗಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲ ಸಚಿವ ಸಂಪುಟ ಸಭೆಯಲ್ಲೇ ಮುಸ್ಲಿಮರ ಶೇಕಡಾ 4ರಷ್ಟಿರುವ ಮೀಸಲಾತಿಯನ್ನು ಮರುಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ರಾಜ್ಯದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪ್ರವರ್ಗ 2 ಬಿ ಕೋಟಾದಡಿಯಲ್ಲಿದ್ದ ಮುಸ್ಲಿಮರ 4 ಪ್ರತಿಶತ ಕೋಟಾ ಈಗ ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯಗಳ ಪಾಲಾಗಲಿದೆ. ಮುಸ್ಲಿಮರ ಮೀಸಲಾತಿಗೆ ಕತ್ತರಿ ಪ್ರಯೋಗ ಮಾಡಿ ಒಕ್ಕಲಿಗರಿಗೆ ಹಾಗೂ ವೀರಶೈವ ಲಿಂಗಾಯತರಿಗೆ ತಲಾ ಎರಡು ಪ್ರತಿಶತದಷ್ಟು ಹಂಚಿಕೆ ಮಾಡಿ ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.
ಒಬಿಸಿ ವರ್ಗದಿಂದ ಮುಸ್ಲಿಮರನ್ನು ತೆಗೆದುಹಾಕಿ ಶೇಕಡಾ 10 ರಷ್ಟು ಮೀಸಲಾತಿ ಇರುವ ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯೂಎಸ್) ಅಡಿಯಲ್ಲಿ ಅವರನ್ನು ಸೇರಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಒಕ್ಕಲಿಗರು 4 % ಮತ್ತು ಲಿಂಗಾಯತರು 5% ಮೀಸಲಾತಿ ಹೊಂದಿದ್ದಾರೆ. ಸಂಪುಟ ಸಭೆಯ ನಿರ್ಧಾರದ ನಂತರ, ಒಕ್ಕಲಿಗರು ಕ್ರಮವಾಗಿ 2 (ಸಿ) ಮತ್ತು 2 (ಡಿ) ಅಡಿಯಲ್ಲಿ ಶೇಕಡಾ 6 ರಷ್ಟು ಮೀಸಲಾತಿ ಮತ್ತು ಲಿಂಗಾಯತರು ಶೇಕಡಾ 7 ರಷ್ಟು ಮೀಸಲಾತಿಯನ್ನು ಪಡೆಯಲಿದ್ದಾರೆ.












Click it and Unblock the Notifications