Karnataka Elections 2023, Mahadevapura: ಲಿಂಬಾವಳಿಗೆ ಈ ಬಾರಿ ಗೆಲುವು ಕಬ್ಬಿಣದ ಕಡಲೆ?
ಅತ್ಯಂತ ವೇಗವಾಗಿ ಜೊತೆಗೆ ಹೈಟೆಕ್ ಪ್ರದೇಶವಾಗಿ ಬಹುಪಾಲು ಪ್ರತಿಷ್ಠಿತ, ಬಹುರಾಷ್ಟ್ರೀಯ ಕಂಪೆನಿಗಳನ್ನು ಹೊಂದಿರುವ ಬೆಂಗಳೂರು ನಗರ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಮಹದೇವಪುರ ಕೂಡಾ ಒಂದು. ಯಶವಂತಪುರ, ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದಂತೆ, ವಿಸ್ತೀರ್ಣದಲ್ಲೂ ಈ ಕ್ಷೇತ್ರ ಬಹುದೊಡ್ಡದು. ಮತ್ತು ಎರಡನೇ ಅತಿಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ ಕೂಡಾ..
ಕಳೆದ ಮೂರು ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಅಭ್ಯರ್ಥಿಗಳು ಬೇರೆ ಬೇರೆಯಿದ್ದರೂ ಗೆಲುವು ಮಾತ್ರ ಬಿಜೆಪಿಯದ್ದೇ. ಮೂರು ಬಾರಿಯೂ ಕ್ಷೇತ್ರದಿಂದ ಅರವಿಂದ ಲಿಂಬಾವಳಿ ಗೆಲುವನ್ನು ಸಾಧಿಸುತ್ತಾ ಬಂದಿದ್ದಾರೆ. ಪಕ್ಷದ ಬಲ, ವೈಯಕ್ತಿಕ ವರ್ಚಸ್ಸು ಅವರನ್ನು ನಿರಾಯಾಸವಾಗಿ ಗೆಲುವಿನ ದಡ ಸೇರಿಸುತ್ತಿದೆ.

ಎರಡು ಬಾರಿ ಲಿಂಬಾವಳಿ ವಿರುದ್ದ ಸೋಲುಂಡಿದ್ದ ಎ.ಸಿ.ಶ್ರೀನಿವಾಸ್ ಗೆ ಈ ಬಾರಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದೇ, ನಾಗೇಶ್.ಟಿ ಅವರನ್ನು ಕಣಕ್ಕಿಳಿಸಿದೆ. ಇಲ್ಲಿ ಏನಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ. ಜೆಡಿಎಸ್ ಬಾಹ್ಯ ಬೆಂಬಲ, ಆಮ್ ಆದ್ಮಿ ಪಕ್ಷಗಳು ಸ್ಪರ್ಧಾ ಕಣದಲ್ಲಿ ಇರುತ್ತವೆ, ಅಷ್ಟೇ.. ಈ ಬಾರಿ ಮತ್ತೆ ಅರವಿಂದ ಲಿಂಬಾವಳಿಗೆ ಬಿಜೆಪಿ ಟಿಕೆಟ್ ನೀಡದೇ ಅವರ ಪತ್ನಿಗೆ ಟಿಕೆಟ್ ನೀಡಿರುವುದು ಗಮನಿಸಬೇಕಾದ ವಿಚಾರ.
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಸಮಸ್ಯೆಗಳ ಆಗರವೇ ಇದೆ. ಸಂಚಾರ ದಟ್ಟಣೆ, ಮಳೆ ಬಂದರೆ ಹೊಳೆಯಂತಾಗುವ ಪ್ರದೇಶಗಳಿಂದಾಗಿ ಪ್ರತೀ ಬಾರಿಯೂ ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತದೆ. ಮುಳಬಾಗಿಲು ಶಾಸಕ ಎಚ್.ನಾಗೇಶ್ ಸೇರಿದಂತೆ ಬರೋಬ್ಬರಿ ಹದಿಮೂರು ಜನರು ಕಾಂಗ್ರೆಸ್ ಟಿಕೆಟಿಗಾಗಿ ಪೈಪೋಟಿ ನಡೆಸಿದ್ದರು.
ಅದರಲ್ಲಿ ನಾಗೇಶ್.ಟಿ ಗೆ, ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ಹಾಗಾಗಿ, ಎಲ್ಲಾ ಟಿಕೆಟ್ ಆಕಾಂಕ್ಷಿಗಳು ಒಟ್ಟಾಗಿ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸ ಕಾಂಗ್ರೆಸ್ ನಾಯಕರಿಗೆ ಇದ್ದಂತಿಲ್ಲ. ಆದರೂ, ಆಡಳಿತ ವಿರೋಧಿ ಅಲೆ, ಕ್ಷೇತ್ರದ ಸಮಸ್ಯೆಗಳನ್ನು ಜನರ ಮುಂದೆ ಇಟ್ಟು ಲಿಂಬಾವಳಿ ಹಿಡಿತ ತಗ್ಗಿಸಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.

ಜೆಡಿಎಸ್ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ RPI ಕ್ಯಾಂಡಿಡೇಟ್ ಗೆ ಬೆಂಬಲ ನೀಡುವ ನಿರ್ಧಾರಕ್ಕೆ ಬಂದಿದೆ. ಆಮ್ ಆದ್ಮಿ ಪಕ್ಷದಿಂದ ನಟರಾಜ್ ಸಿ.ಆರ್, ಬಿಜೆಪಿಯಿಂದ ಮಂಜುಳಾ ಅರವಿಂದ ಲಿಂಬಾವಳಿ, ಕಾಂಗ್ರೆಸ್ಸಿನಿಂದ ನಾಗೇಶ್ ಟಿ ಕಣದಲ್ಲಿದ್ದಾರೆ. ಮಹದೇವಪುರದ ಬಿಜೆಪಿ ಟಿಕೆಟ್ ಅನ್ನು ಬಹುತೇಕ ಕೊನೆಯ ಪಟ್ಟಿಯಲ್ಲಿ ಬಿಜೆಪಿ ಪ್ರಕಟಿಸಿತ್ತು.
ಕ್ಷೇತ್ರದ ಒಟ್ಟಾರೆ ಮತದಾರರ ವಿಚಾರಕ್ಕೆ ಬರುವುದಾದರೆ ಇಲ್ಲಿ ಸುಮಾರು 5.7ಲಕ್ಷ ಜನರಿದ್ದಾರೆ. ಇದರಲ್ಲಿ ಪುರುಷರು ಅಂದಾಜು 3.1ಲಕ್ಷ, ಮಹಿಳೆಯರು 2.6 ಲಕ್ಷ. ಕ್ಷೇತ್ರದಲ್ಲಿ ಪರಿಶಿಷ್ಟ ಮತ್ತು ಜಾತಿ ಸಮುದಾಯದ ಮತದಾರರೇ ನಿರ್ಣಾಯಕ. ಸುಮಾರು ತೊಂಬತ್ತು ಸಾವಿರದಷ್ಟು ಒಕ್ಕಲಿಗ ಮತದಾರರೂ ಇದ್ದಾರೆ, ಜೊತೆಗೆ, ಸುಮಾರು ಐವತ್ತು ಸಾವಿರದಷ್ಟು ಅಲ್ಪಸಂಖ್ಯಾತ ಮತದಾರರು ಇದ್ದಾರೆ.
ಆಡಳಿತ ವಿರೋಧಿ ಅಲೆ
ಕಳೆದ ಬಾರಿಯ ಚುನಾವಣೆಯಲ್ಲಿ ಅರವಿಂದ ಲಿಂಬಾವಳಿಯವರು ಕಾಂಗ್ರೆಸ್ಸಿನ ಎ.ಸಿ.ಶ್ರೀನಿವಾಸ ಅವರನ್ನು 17,784 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಲಿಂಬಾವಳಿ ಪತ್ನಿಗೆ ಟಿಕೆಟ್ ನೀಡಿದ್ದರೂ ಆಡಳಿತ ವಿರೋಧಿ ಅಲೆಯಿರುವುದು ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಯಿಲ್ಲದಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿಯ ವರಿಷ್ಠರು ತರೆಸಿಕೊಂಡಿರುವ ಹಲವು ಸಮೀಕ್ಷೆ
ಇದರ ಜೊತೆಗೆ ಬಿಜೆಪಿಯ ವರಿಷ್ಠರು ತರೆಸಿಕೊಂಡಿರುವ ಹಲವು ಸಮೀಕ್ಷೆಗಳಲ್ಲೂ ಲಿಂಬಾವಳಿ ಗೆಲ್ಲುವುದು ಸುಲಭವಲ್ಲ ಎನ್ನುವ ಅಂಶ ಹೊರಬಂದಿದೆ ಎಂದು ಹೇಳಲಾಗುತ್ತಿದೆ. ಮಳೆಯ ಆವಾಂತರ ಇಲ್ಲಿನ ನಿವಾಸಿಗರು ಬಿಜೆಪಿಯನ್ನು ಕೆಂಗಣ್ಣಿನಿಂದ ನೋಡುವಂತೆ ಮಾಡಿದೆ ಎನ್ನುವ ವಸ್ತುಸ್ಥಿತಿಯೂ ಮಹದೇವಪುರದಲ್ಲಿದೆ. ಇನ್ನೊಂದು ಗಮನಿಸಬೇಕಾದ ವಿಚಾರ ಏನಂದರೆ ಕಾಂಗ್ರೆಸ್ ಪೂರ್ವಸಿದ್ದತೆಯನ್ನು ಮಾಡಿಕೊಂಡು ಪ್ರಚಾರವನ್ನು ನಡೆಸುತ್ತಿದೆ.
ಒಂದು ವೇಳೆ ಬಿಜೆಪಿ ಗೆದ್ದರೂ ಅಂತರ ಜಾಸ್ತಿ ಇರುವುದಿಲ್ಲ
ಇದುವರೆಗೆ ಚುನಾವಣೆಯನ್ನು ಅರವಿಂದ ಲಿಂಬಾವಳಿ ಎದುರಿಸಿದ್ದು ಬೇರೆ, ಈ ಬಾರಿಯ ಚುನಾವಣೆಯ ಪರಿಸ್ಥಿತಿಯೇ ಬೇರೆ ಎನ್ನುವುದು ಕ್ಷೇತ್ರದ ಸದ್ಯದ ಚಿತ್ರಣ. ಕಾಂಗ್ರೆಸ್ ಕೂಡಾ ಈ ಬಾರಿ ಯಾವ ಬಾರಿಯೂ ಬಿಜೆಪಿಗೆ ಸೀಟನ್ನು ಗೆಲ್ಲಲು ಬಿಡಬಾರದು ಎನ್ನುವ ಹಠಕ್ಕೆ ಬಿದ್ದಂತೆ ಕಾಣಿಸುತ್ತದೆ. ಮೇ ಹತ್ತರಂದು ಚುನಾವಣೆ, ಮೇ ಹದಿಮೂರಕ್ಕೆ ಫಲಿತಾಂಶ. ಇನ್ನೇನು ಕೆಲವೇ ದಿನ.. ಒಂದು ವೇಳೆ ಬಿಜೆಪಿ ಗೆದ್ದರೂ ಅಂತರ ಜಾಸ್ತಿ ಇರುವುದಿಲ್ಲ ಎನ್ನುವುದು ಸದ್ಯದ ಚಿತ್ರಣ.












Click it and Unblock the Notifications