KGF Babu IT Raid: ಐಟಿ ದಾಳಿ ವೇಳೆ 5000 ಸೀರೆ, 1900 ವೋಟರ್ ಐಡಿ ಪತ್ತೆ; ಕೆಜಿಎಫ್ ಬಾಬುಗೆ ಸಂಕಷ್ಟ
ಕರ್ನಾಟಕದಲ್ಲಿ 2023ರ ವಿಧಾನಸಭೆ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು, ಇಂದು (ಏಪ್ರಿಲ್ 20) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ರಾಜ್ಯದಲ್ಲಿ ನೂರಾರು ಕೋಟ್ಯಧಿಪತಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಈ ವೇಳೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ.
ಬುಧವಾರದಂದು ಬೆಂಗಳೂರಿನಲ್ಲಿ ಉದ್ಯಮಿ ಕೆಜಿಎಫ್ ಬಾಬು ಅವರ ಮನೆ ಸೇರಿದಂತೆ ರಾಜ್ಯದ ಸುಮಾರು 50 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಕೋಟ್ಯಂತರ ಮೌಲ್ಯದ ಹಣ ಮತ್ತು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಿಂದ ಉದ್ಯಮಿ ಕೆಜಿಎಫ್ ಬಾಬು ಅವರಿಗೆ ರಾಜಕೀಯವಾಗಿ ಭಾರೀ ನಷ್ಟ ಉಂಟಾಗಲಿದೆ.

ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಜಿಎಫ್ ಬಾಬು ಅವರು ಟಿಕೆಟ್ ದೊರೆಯದ ಕಾರಣ ಪಕ್ಷೇತರನಾಗಿ ಸ್ಪರ್ಧಿಸಲು ನಿರ್ಧರಿಸಿದ್ದರು. ಆದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಕೆಜಿಎಫ್ ಬಾಬು ತನ್ನ ಪತ್ನಿ ಚಿಕ್ಕಪೇಟೆ ಕ್ಷೇತ್ರ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ.
ಪಕ್ಷೇತರ ಅಭ್ಯರ್ಥಿಯ ಪತಿಯಾಗಿರುವ ಕೆಜಿಎಫ್ ಬಾಬು ಅವರಿಗೆ ಸಂಬಂಧಿಸಿದ ಹೈಗ್ರೌಂಡ್ಸ್ ಬಳಿಯಿರುವ ರುಕ್ಸಾನಾ ಪ್ಯಾಲೆಸ್ ಮೇಲೆ ಐಟಿ ಇಲಾಖೆ ದಾಳಿ ನಡೆಸಲಾಗಿದೆ. ಈ ವೇಳೆ 2000ಕ್ಕೂ ಅಧಿಕ ಡಿಡಿಗಳು, 5000ಕ್ಕೂ ಅಧಿಕ ರೇಷ್ಮೆ ಸೀರೆಗಳು ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.
5000 ರೇಷ್ಮೆ ಸೀರೆಗಳು ಪತ್ತೆ
ಅಲ್ಲದೇ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ 1900ಕ್ಕೂ ಹೆಚ್ಚು ವೋಟರ್ ಐಡಿಗಳು ಸಿಕ್ಕಿದ್ದು, ಪ್ರತಿ ವೋಟರ್ ಐಡಿಗಳನ್ನು 5000 ರೂ. ಚೆಕ್‌ಗಳೊಂದಿಗೆ ಇಡಲಾಗಿತ್ತು ಎಂದು ತಿಳಿದುಬಂದಿದೆ.

ಕೆಜಿಎಫ್ ಬಾಬು ಅವರ ನಿವಾಸದ ಮೊದಲ ಮಹಡಿಯ ಕೊಠಡಿಯಲ್ಲಿ ವೋಟರ್ ಐಡಿ ಮತ್ತು ಚೆಕ್‌ಗಳು ದೊರೆತರೆ, ನೆಲಮಹಡಿಯಲ್ಲಿ 26 ಬ್ಯಾಗ್‌ಗಳಲ್ಲಿ ಸುಮಾರು 5000 ಸೀರೆಗಳು ಪತ್ತೆಯಾಗಿದ್ದು, ಬಹುತೇಕ ಕಾಂಚಿಪುರಂ ರೇಷ್ಮೆ ಸೀರೆಗಳಾಗಿವೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ದೂರು ದಾಖಲು
ಹೀಗೆ ಈ ಎಲ್ಲಾ ವಸ್ತುಗಳ ಮೇಲೆ ಕೆಜಿಎಫ್ ಬಾಬು ಅವರಿಂದ ಉಡುಗೊರೆ ಎಂದು ಬರೆಯಲಾಗಿದೆ. ಈ ಎಲ್ಲಾ ವಸ್ತುಗಳನ್ನು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಹಂಚಲು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರಿಂದ ಶಿವಾಜಿನಗರ ವಲಯ ಚುನಾವಣಾ ಉಸ್ತುವಾರಿಯಿಂದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
2021ರಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕೆಜಿಎಫ್ ಬಾಬು 1741 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು. ಬೆಂಗಳೂರು ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.
ಚಿಕ್ಕಪೇಟೆ ಪಕ್ಷೇತರ ಅಭ್ಯರ್ಥಿ 1,622 ಕೋಟಿ ಒಡತಿ
ಕಾಂಗ್ರೆಸ್‌ನ ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಅವರ ಪತ್ನಿ 37 ವರ್ಷದ ಶಾಝಿಯಾ ತರನ್ನುಮ್ ಅವರು 2023ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, 1,622 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಚುನಾವಣಾ ಅಫಿಡವಿಟ್ ಸಲ್ಲಿಸಿದ್ದಾರೆ.
ಶಾಝಿಯಾ ತರನ್ನುಮ್ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಠೇವಣಿ, ಷೇರು ಹೂಡಿಕೆ, ಆಭರಣ ಸೇರಿದಂತೆ 40.59 ಲಕ್ಷ ರೂ.ಗಳ ಚರಾಸ್ತಿ ಇದ್ದರೆ, ಪತಿ ಕೆಜಿಎಫ್ ಬಾಬು ಹೆಸರಿನಲ್ಲಿ ಸುಮಾರು 83.56 ಕೋಟಿ ರೂ.ಗಳ ಚರಾಸ್ತಿ ಇದೆ. ತನ್ನ ಬಳಿ 38.58 ಲಕ್ಷ ರೂ. ಮೌಲ್ಯದ 643 ಗ್ರಾಂ ಚಿನ್ನವಿದ್ದರೆ, ಪತಿ ಬಳಿ 91.08 ಲಕ್ಷ ರೂ. ಮೌಲ್ಯದ 1.51 ಕೆಜಿ ಚಿನ್ನವಿದೆ ಎಂದು ತಿಳಿಸಿದ್ದಾರೆ.
ಪತಿ ಬಳಿ ರೋಲ್ಸ್ ರಾಯ್ಸ್, ಫಾರ್ಚೂನರ್ ಕಾರುಗಳಿದ್ದು, ಇನ್ನೂ ಐದು ಕಾರುಗಳ ಖರೀದಿಗೆ 2.67 ಕೋಟಿ ರೂ. ಮುಂಗಡ ಹಣ ನೀಡಲಾಗಿದೆ. ಇವುಗಳಲ್ಲಿ ಬೆಂನ್ಜ್ (ಸ್ಕಾಟ್), ಫೋರ್ಡ್ ಎಂಡೆವರ್, ನಿಸ್ಸಾನ್, ರೋಲ್ಸ್‌ರಾಯ್ಸ್, ಟೊಯೋಟಾ ವೆಲ್‌ಫೈರ್ ಕಾರುಗಳು ಇವೆ ಎಂದಿದ್ದಾರೆ.
ಇನ್ನು, ತಮ್ಮ ಬಳಿ ಯಾವುದೇ ಸ್ಥಿರಾಸ್ತಿಯಿಲ್ಲ ಎಂದಿರುವ ಶಾಝಿಯಾ ತರನ್ನುಮ್, ಪತಿ ಕೆಜಿಎಫ್ ಬಾಬು ಹೆಸರಿನಲ್ಲಿ 3 ಎಕರೆ ಕೃಷಿ ಜಮೀನು, 24 ಕೃಷಿಯೇತರ ಭೂಮಿ ಇದ್ದು, 1,538.15 ಕೋಟಿ ರೂ. ಬೆಲೆ ಬಾಳುವ ಸ್ಥಿರಾಸ್ತಿಗಳಿವೆ ಎಂದಿದ್ದಾರೆ.












Click it and Unblock the Notifications