DK Shivakumar: ನನ್ನನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಯುತ್ತಿದೆ; ಡಿಕೆ ಶಿವಕುಮಾರ್ ಆರೋಪ
2023ರ ಕರ್ನಾಟಕ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದ್ದು, ಇದೀಗ ರಾಜಕೀಯ ನಾಯಕರಿಂದ ಆರೋಪ ಮತ್ತು ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ.
ಶುಕ್ರವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನನ್ನನ್ನು ರಾಜಕೀಯವಾಗಿ ಮುಗಿಸಲು ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

"ಬಿಜೆಪಿಯವರು ಅಧಿಕಾರ ದುರಪಯೋಗ, ಕುತಂತ್ರ ಮತ್ತು ಷಡ್ಯಂತ್ರ ಎಲ್ಲವನ್ನು ಮಾಡುತ್ತಿದ್ದಾರೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ನಮಗೆ ಯಾರ ಅನುಕಂಪವೂ ನಮಗೆ ಬೇಡ," ಎಂದು ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ಕನಕಪುರದಲ್ಲಿ ಸಹೋದರ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಸಿರುವ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಬಿಜೆಪಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಾಮಪತ್ರ ತಿರಸ್ಕೃತ ಮಾಡುವ ಬಿಜೆಪಿಯ ಷಡ್ಯಂತ್ರ ಅರಿತು ಮುನ್ನಚ್ಚರಿಕೆಯ ಕ್ರಮವಾಗಿ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಅಂತಿಮವಾಗಿ ಕನಕಪುರ ಸ್ಪರ್ಧೆಯಲ್ಲಿ ಯಾರು ಉಳಿಯುತ್ತಾರೆ ಎಂಬುದನ್ನು ಕಾದು ನೋಡಿ. ಬಿಜೆಪಿಯವರು ಏನೇನು ಷಡ್ಯಂತ್ರ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಅಧಿಕಾರಿಗಳೇ ನಮಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.
ಇನ್ನು ಕಾಂಗ್ರೆಸ್ ಲಿಂಗಾಯತ ಸಿಎಂ ಅಭ್ಯರ್ಥಿ ಘೋಷಿಸಲಿ ಎಂಬ ವಿ. ಸೋಮಣ್ಣ ಸವಾಲಿಗೆ ಜವಾಬು ನೀಡಿದ ಡಿ.ಕೆ. ಶಿವಕುಮಾರ್, "ಸೋಮಣ್ಣ, ಬೊಮ್ಮಾಯಿಯವರ ಹಿತವಚನ ನನಗೆ ಬೇಡ. ನಾನು ಬಸವಣ್ಣನ ತತ್ವ-ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟು ಕೆಲಸ ಮಾಡುವವನು," ಎಂದರು.

ಇದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ. ಪರಮೇಶ್ವರ್ ಸಮ್ಮುಖದಲ್ಲಿ ಬೆಂಗಳೂರು ಮತ್ತು ಕೊರಟಗೆರೆಯ ಬಿಜೆಪಿ ಪ್ರಮುಖ ನಾಯಕರು ಕಾಂಗ್ರೆಸ್ ಸೇರ್ಪಡೆಯಾದರು.
ಬೆಂಗಳೂರಿನ ರಾಜರಾಜೇಶ್ವರಿನಗರ, ಗೋವಿಂದರಾಜನಗರ ಮತ್ತು ವಿಜಯನಗರ ಕ್ಷೇತ್ರಗಳ ಬಿಜೆಪಿ ಪ್ರಮುಖರು ಕಾಂಗ್ರೆಸ್ ಸೇರಿದರು. ಇನ್ನು ಕೊರಟಗೆರೆಯ ಮಾಜಿ ಶಾಸಕ ಗಂಗಹನುಮಯ್ಯ, ಕಮಲಮ್ಮ ಗಂಗಹನುಮಯ್ಯ ಮತ್ತು ಮುಖಂಡರಾದ ನಾರಾಯಣಸ್ವಾಮಿ ಅವರು ಬಿಜೆಪಿ ತೊರೆದು ಕೈ ಪಕ್ಷಕ್ಕೆ ಸೇರಿದರು.
ಇನ್ನು ಬೆಂಗಳೂರಿನ ಮಾಜಿ ಮೇಯರ್ ಶಾಂತಕುಮಾರಿ ಅವರು ಕೂಡ ಬಿಜೆಪಿ ಸಖ್ಯ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಈ ವೇಳೆ ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಉಪಸ್ಥಿತರಿದ್ದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸುವ ದಿನಾಂಕ ಏಪ್ರಿಲ್ 20ಕ್ಕೆ ಮುಕ್ತಾಯವಾಗಿದ್ದು, ಶುಕ್ರವಾರ, ಏಪ್ರಿಲ್ 22ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುತ್ತಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಏಪ್ರಿಲ್ 24 ಅಂತಿಮ ದಿನವಾಗಿದೆ.
ಇನ್ನು ಮೇ 10ರಂದು ಕರ್ನಾಟಕದ ಎಲ್ಲ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಮತ್ತು ಅಂದೇ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications