ನಾನ್ಯಾಕೆ ರಾಜೀನಾಮೆ ನೀಡಲಿ: ಸಿಎಂ ಕುಮಾರಸ್ವಾಮಿ
ಬೆಂಗಳೂರು, ಜುಲೈ 11: ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆ, ಸರ್ಕಾರ ಬಿದ್ದು ಹೋಗುತ್ತದೆ ಎಂಬ ಪರಿಸ್ಥಿತಿ ಬಂದರೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆತ್ಮವಿಶ್ವಾಸದ ಬಗ್ಗೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಶಾಸಕರ ಸರಣಿ ರಾಜೀನಾಮೆ ನಂತರ ಅಗತ್ಯ ಕ್ರಮಗಳನ್ನು ಕೈಗೊಂಡರೂ ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ.
ಆದರೆ, ಗುರುವಾರ ಬೆಳಗ್ಗೆ ಕುಮಾರಕೃಪ ಅತಿಥಿ ಗೃಹದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರ ಜೊತೆ ಸಭೆ ಮುಗಿಸಿಕೊಂಡು ಹೊರ ಬಂದ ಕುಮಾರಸ್ವಾಮಿ ಅವರು ಮಾತನಾಡಿ, ನಾನ್ಯಾಕೆ ರಾಜೀನಾಮೆ ನೀಡಲಿ ಎಂದು ಗುಡುಗಿದರು.

'ಈ ಹಿಂದೆ 18 ಶಾಸಕರು ಯಡಿಯೂರಪ್ಪ ಅವರ ವಿರುದ್ಧ ನಿಂತಿದ್ದರು, ಆಗ ಅವರೇನು ರಾಜೀನಾಮೆ ಕೊಟ್ಟಿದ್ದರಾ? 2008-09ರಲ್ಲಿ ಏನಾಗಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಲಿ, ನಾನು ರಾಜೀನಾಮೆ ಕೊಡುವಂಥ ಪರಿಸ್ಥಿತಿ ಉದ್ಭವವಾಗಿಲ್ಲ' ಎಂದು ಹೇಳಿದರು.
ಮೈತ್ರಿ ಸರ್ಕಾರವನ್ನು ರಕ್ಷಣೆ ಮಾಡಲು 'ಕಾಮರಾಜ ಮಾರ್ಗ' ಅನುಸರಿಸಿ ಎಲ್ಲಾ ಸಚಿವರು ರಾಜೀನಾಮೆ ಪಡೆದು, ಅತೃಪ್ತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಮತ್ತೊಮ್ಮೆ ಸಂಪುಟ ವಿಸ್ತರಣೆಗೆ ಕುಮಾರಸ್ವಾಮಿ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಿಎಂ, ಡಿಸಿಎಂ ಕೂಡಾ ಬದಲಾಗಬಹುದು. ಕುಮಾರಸ್ವಾಮಿ ಅವರು ಯಾವ ರಗಳೆಯೂ ಬೇಡ ಎಂದು ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ರಾಜೀನಾಮೆ ಘೋಷಿಸಬಹುದು. ಒಂದು ವೇಳೆ ಕುಮಾರಸ್ವಾಮಿ ಅವರು ರಾಜೀನಾಮೆ ಸಲ್ಲಿಸಿದರೆ, ಬಿಜೆಪಿ ತನ್ನ ಹಕ್ಕು ಮಂಡನೆ ಮಾಡಲು ಮುಂದಾಗಬಹುದು ಎಂಬ ಸುದ್ದಿಯೂ ಇತ್ತು. ಆದರೆ, ಕುಮಾರಸ್ವಾಮಿ ರಾಜೀನಾಮೆ ನೀಡುವ ಪ್ರಶ್ನೆಯೇ ಈಗ ಉದ್ಭವವಾಗಿಲ್ಲ.












Click it and Unblock the Notifications