ನಿಗದಿಯಾಯ್ತು ಸಂಪುಟ ವಿಸ್ತರಣೆಗೆ ಮುಹೂರ್ತ: ಆಕಾಂಕ್ಷಿಗಳಲ್ಲಿ ಉತ್ಸಾಹ
ಬೆಂಗಳೂರು, ನವೆಂಬರ್ 17: ಸರ್ಕಾರ ರಚನೆಯಾದ ಸಂದರ್ಭದಿಂದಲೂ ಕಗ್ಗಂಟಾಗಿಯೇ ಉಳಿದಿರುವ ಸಚಿವ ಸಂಪುಟದ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರ ನಡುವೆ ಶನಿವಾರ ಸಭೆ ನಡೆದು ಈ ಬಗ್ಗೆ ಚರ್ಚಿಸಲಾಯಿತು.
ನವೆಂಬರ್ 28ರಂದು ಸಂಪುಟ ವಿಸ್ತರಣೆ ಮಾಡುವಂತೆ ಹೈಕಮಾಂಡ್‌ಗೆ ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಸಂಪುಟ ವಿಸ್ತರಣೆಯ ಧರ್ಮ ಸಂಕಟವನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ಜೆಡಿಎಸ್ ವರಿಷ್ಠ ಎಚ್ ಡಿ ದೇವಗೌಡ ಅವರಿಗೇ ಬಿಟ್ಟುಬಿಡಲಾಗಿದೆ. ವೇಣುಗೋಪಾಲ್ ಅವರು ದೇವೇಗೌರೊಂದಿಗೆ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕದ ಬಗ್ಗೆ ಚರ್ಚೆ ನಡೆಸಿದರು.
ಸಂಪುಟ ವಿಸ್ತರಣೆ ಆಗುತ್ತಿದ್ದಂತೆಯೇ ನಿಗಮ ಮಂಡಳಿಗಳಿಗೂ ನೇಮಕ ಪ್ರಕ್ರಿಯೆ ನಡೆಯಲಿದೆ. ಇದರಿಂದ ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ಮತ್ತೆ ಅತೃಪ್ತಿ ತಲೆದೋರಿದರೂ, ಅದನ್ನು ಕೂಡಲೇ ಶಮನಗೊಳಿಸಲು ಸಾಧ್ಯ ಎಂದು ಯೋಜನೆ ರೂಪಿಸಲಾಗಿದೆ.
ಶುಕ್ರವಾರ ದಿನೇಶ್ ಗುಂಡೂರಾವ್ ಅವರು ದೇವೇಗೌಡರನ್ನು ಭೇಟಿ ಮಾಡಿ ಸುಮಾರು ಎರಡು ಗಂಟೆ ಕಾಲ ಸಮಾಲೋಚನೆ ನಡೆಸಿದ್ದರು.
ಸಂಪುಟ ವಿಸ್ತರಣೆ ವಿವಿಧ ಕಾರಣಗಳಿಂದ ಮುಂದಕ್ಕೆ ಹೋಗುತ್ತಲೇ ಇದೆ. ಈಗ ವಿಧಾನಸಭೆ ಉಪ ಚುನಾವಣೆಯೂ ಮುಗಿದಿರುವುದರಿಂದ ಈಗಲೂ ವಿಸ್ತರಣೆ ಆಗದೆ ಇದ್ದರೆ ಪಕ್ಷದಲ್ಲಿ ಮತ್ತೆ ಅಸಮಾಧಾನ ಭುಗಿಲೇಳುವ ಸೂಚನೆಗಳು ಕಾಣಿಸುತ್ತಿದೆ.
ಹೀಗಾಗಿ ಅತೃಪ್ತ ಶಾಸಕರನ್ನು ತಣಿಸಲು ತ್ವರಿತವಾಗಿ ಸಂಪುಟ ವಿಸ್ತರಣೆ ಅತ್ಯಗತ್ಯ ಎಂದು ಹೈಕಮಾಂಡ್‌ಗೆ ವೇಣುಗೋಪಾಲ್ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಸಚಿವ ಸ್ಥಾನದ ಆಕಾಂಕ್ಷಿಗಳು ಅವರ ಮೇಲೆ ಸಂಪುಟ ವಿಸ್ತರಣೆಗೆ ಒತ್ತಡ ಹಾಕಿದ್ದರು.












Click it and Unblock the Notifications