Dwarakish Death: ನಟ ದ್ವಾರಕೀಶ್ ಅಂತಿಮ ದರ್ಶನ ಪಡೆದ ಸಿಎಂ
ಬೆಂಗಳೂರು ಏಪ್ರಿಲ್ 17: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ತೆರಳಿ ಅಗಲಿದ ದ್ವಾರಕೀಶ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಅಂತಿಮ ನಮನ ಸಲ್ಲಿಸಿದರು. ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸಿದರು.
ಮಂಗಳವಾರ (ಏಪ್ರಿಲ್ 16) ಬೆಳಿಗ್ಗೆ ಹಿರಿಯ ನಟ ದ್ವಾರಕೀಶ್ ಅವರು ಹೃದಯಾಘಾತದಿಂದ ವಿಧಿವಶರಾದರು. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ನಿರ್ದೇಶಕ ಹಾಗೂ ನಿರ್ಮಾಕರೂ ಆದ ದ್ವಾರಕೀಶ್ ಅವರನ್ನು ಕಳೆದುಕೊಂಡು ಸ್ಯಾಂಡಲ್‌ವುಡ್ ಹಾಗೂ ಅವರ ಅಭಿಮಾನಿ ಬಳಕ ಕಂಬನಿ ಮಿಡಿದೆ. ಇಂದು ಅವರ ಪಾರ್ಥೀವ ಶರೀಶರವನ್ನು ಸಾರ್ವಜನಿಕ ದರ್ಶನಕ್ಕಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಡಲಾಗಿದೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಕೂಡ ಅಲ್ಲಿಗೆ ಭೇಟಿ ನೀಡಿ ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದರು.

ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ದ್ವಾರಕೀಶ್ ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಕೊಡುಗೆಯನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಹಾಸ್ಯನಟನಾಗಿ ಮಾತ್ರವಲ್ಲ, ನಾಯಕ ನಟರಾಗಿಯೂ ಉತ್ತಮ ಅಭಿನಯ ನೀಡಿದ್ದರು. ಡಾ|| ರಾಜ್ ಕುಮಾರ್ ಮತ್ತು ದ್ವಾರಕೀಶ್ ಜೋಡಿ ಬಹಳ ಚೆನ್ನಾಗಿತ್ತು. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು.
ದ್ವಾರಕೀಶ್ ಜೀವನದಲ್ಲಿ ಬಹಳಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಆದರೂ ಕನ್ನಡ ಚಿತ್ರ ನಿರ್ಮಾಣ, ನಟನೆಯನ್ನು ಬಿಟ್ಟಿರಲಿಲ್ಲ. ಕಷ್ಟಗಳನ್ನು ಸಹಿಸಿ ಕನ್ನಡ ಚಿತ್ರರಂಗ ಬೆಳೆಯಲು ಕೊಡುಗೆ ನೀಡಿದ್ದಾರೆ. ದ್ವಾರಕೀಶ್ ಮೈಸೂರಿನ ಹುಣಸೂರಿನಲ್ಲಿ ಹುಟ್ಟಿದವರು. ತವರಿನ ಬಗ್ಗೆ ಬಹಳ ಪ್ರೇಮವಿತ್ತು. ಒಮ್ಮೆ ಮೈಸೂರಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ರಾಜಕೀಯ, ಸಿನಿಮಾ, ಸಾಮಾಜಿಕ ವಿಚಾರಗಳನ್ನು ಅವರೊಂದಿಗೆ ಚರ್ಚಿಸಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಕೆಲ ವರ್ಷಗಳ ಹಿಂದೆ ಅವರ ಧರ್ಮಪತ್ನಿಯವರು ಮೃತಪಟ್ಟ ದಿನವೇ ದ್ವಾರಕೀಶ್ ಅವರೂ ಮೃತಪಟ್ಟಿದ್ದಾರೆ. ಇಬ್ಬರ ಆತ್ಮಕ್ಕೂ ಚಿರಶಾಂತಿ ದೊರಕಲಿ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದ್ವಾರಕೀಶ್ ಅವರು ಸಾವಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಎರಡು ಕಣ್ಣುಗಳನ್ನು ದಾನಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಂಥ ವ್ಯಕ್ತಿಯನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಮಾತ್ರವಲ್ಲ ಕರುನಾಡು ಬಡವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಮಾತ್ರವಲ್ಲದೆ ನಟ ಯಶ್, ರವಿಚಂದ್ರನ್, ಸುದೀಪ್ ಸೇರಿದಂತೆ ಸ್ಯಾಂಡಲ್‌ವುಡ್ ಹಲವಾರು ತಾರೆಯರು ದ್ವಾರಕೀಶ್ ಅಂತಿಮ ದರ್ಶನ ಪಡೆದರು.

ಡಿಸಿಎಂ ಡಿಕೆ ಶಿವ ಕುಮಾರ್ ಸಂತಾಪ
ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಶ್ರೀ ದ್ವಾರಕೀಶ್ ಅವರು ನಿಧನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು. 1964ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ಹಾಸ್ಯ ಕಲಾವಿದ, ನಾಯಕ ಹಾಗೂ ಪೋಷಕ ನಟನಾಗಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕನ್ನಡ ಚಿತ್ರರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ ದ್ವಾರಕೀಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಭಗವಂತನು ಅವರ ಕುಟುಂಬಕ್ಕೆ ಅಗಲಿಕೆಯ ನೋವು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications