Oommen Chandy: ಕೇರಳ ಮಾಜಿ ಸಿಎಂ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ
ಬೆಂಗಳೂರು, ಜುಲೈ 18: ಹಿರಿಯ ರಾಜಕೀಯ ಮುತ್ಸದ್ದಿ ಕೇರಳ ರಾಜ್ಯದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ನಿಧನಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನನಗೆ ಅತ್ಯಂತ ಆತ್ಮೀಯರಾಗಿದ್ದ ಉಮ್ಮನ್ ಚಾಂಡಿಯವರ ನಿಧನದ ಸುದ್ದಿ ತಿಳಿದು ಆಘಾತವಾಗಿದೆ. ಕೇರಳ ರಾಜ್ಯವನ್ನು ಮಾನವ ಅಭಿವೃದ್ಧಿಯ ಸೂಚ್ಯಂಕಗಳಲ್ಲಿ ಉನ್ನತ ಸ್ಥಾನದಲ್ಲಿ ಇರಿಸಲು ಕಾರಣರಾದ ಮುಖ್ಯಮಂತ್ರಿಗಳಲ್ಲಿ ಉಮ್ಮನ್ ಚಾಂಡಿ ಕೂಡ ಒಬ್ಬರಾಗಿದ್ದರು. ಎರಡು ಬಾರಿ ಕೇರಳ ರಾಜ್ಯದ ಮುಖ್ಯಮಂತ್ರಿಗಳಾಗಿ ಅಪಾರ ಸಾಧನೆ ಮಾಡಿದವರಾಗಿದ್ದರು ಎಂದು ಚಾಂಡಿ ಅವರ ಆಡಳಿತ ಕುರಿತು ತಿಳಿಸಿದರು.

2004 ರಿಂದ 2006 ಮತ್ತು 2011 ರಿಂದ 2016 ರವರೆಗೆ ಕೇರಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯಪಾಲರಾಗಿ, ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ನಿರಂತರವಾಗಿ ಸಂವಿಧಾನದ ಆಶಯಗಳ, ಮೌಲ್ಯಗಳ ರಕ್ಷಣೆಗೆ ಶ್ರಮಿಸಿ ಹೋರಾಟ ರಾಜಕಾರಣದ ಪರಂಪರೆಯನ್ನು ಪರಿಣಾಮಕಾರಿಯಾಗಿ ಮುನ್ನಡೆಸಿದವರು ಇವರು ಎಂದರು.
ಸಾರ್ವಜನಿಕ ಸೇವೆಗಾಗಿ ವಿಶ್ವಸಂಸ್ಥೆಯಿಂದ ಪ್ರಶಸ್ತಿ
1970 ರಿಂದ ಕೇರಳ ರಾಜ್ಯ ವಿಧಾನಸಭೆಗೆ ನಿರಂತರವಾಗಿ ಆಯ್ಕೆಯಾಗಿ ಅತ್ಯಂತ ದೀರ್ಘಾವಧಿ ಶಾಸಕರಾಗಿ ಪುತ್ತುಪ್ಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದರು. ವಿಶ್ವಸಂಸ್ಥೆಯಿಂದ ಸಾರ್ವಜನಿಕ ಸೇವೆಗಾಗಿ ಪ್ರಶಸ್ತಿಯನ್ನು ಗಳಿಸಿದ ಏಕೈಕ ಭಾರತೀಯ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಯನ್ನೂ ಉಮ್ಮನ್ ಚಾಂಡಿಯವರು ಗಳಿಸಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದರು.
ಉಮ್ಮನ್ ಚಾಂಡಿ ಮುಖ್ಯಮಂತ್ರಿ ಆಗಿದ್ದ ಮತ್ತು ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ಬಾರಿ ಭೇಟಿಯಾಗಿದ್ದೆವು. ಅಭಿವೃದ್ಧಿ ವಿಚಾರದಲ್ಲಿ ಅವರದೇ ಆದ ಸ್ಪಷ್ಟ ತಿಳಿವಳಿಕೆ ಮತ್ತು ಮಾದರಿಗಳನ್ನು ಹೊಂದಿದ್ದರು. ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾರಿ ಮಾಡಿದ್ದ ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಅವರು ಅಪಾರವಾಗಿ ಶ್ಲಾಘಿಸಿದ್ದರು.

ಬಡವರ ಮತ್ತು ಮಧ್ಯಮ ವರ್ಗದವರ ಬದುಕನ್ನು ಉನ್ನತೀಕರಿಸುವ ಸ್ಪಷ್ಟ ಗುರಿ ಮತ್ತು ಮಾರ್ಗ ನಾವು ಜಾರಿ ಮಾಡಿರುವ ಕಾರ್ಯಕ್ರಮಗಳಲ್ಲಿ, ನಾನು ಮಂಡಿಸಿದ ಆಯವ್ಯಯಗಳಲ್ಲಿ ಇದೆ ಎಂದು ಪತ್ರ ಬರೆದು ಮೆಚ್ಚುಗೆ ಸೂಚಿಸಿದ್ದರು.
ಅವರ ನಿಧನ ಅಭಿವೃದ್ಧಿ ಮತ್ತು ಜನಪರ ರಾಜಕಾರಣಕ್ಕೆ, ಕೇರಳ ರಾಜ್ಯಕ್ಕೆ, ಭಾರತೀಯ ರಾಜಕಾರಣಕ್ಕೆ ಹಾಗೂ ನನಗೆ ವೈಯುಕ್ತಿಕವಾಗಿ ತುಂಬಲಾರದ ನಷ್ಟವಾಗಿದೆ ಎಂದು ದುಃಖ ವ್ಯಕ್ತಪಡಿಸಿದರು.
ಚಿಕಿತ್ಸೆ ಫಲಕಾರಿಯಾಗದೇ ಮಾಜಿ ಸಿಎಂ ನಿಧನ
ಮೌಲ್ಯಯುತ ರಾಜಕಾರಣದ ಹೆಜ್ಜೆಗುರುತನ್ನು ಉಳಿಸಿ ಹೋಗಿರುವ ಓಮನ್ ಚಾಂಡಿಯವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ಮತ್ತು ಅಪಾರ ಬಂಧು ಮಿತ್ರರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ (73) ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ನಿಧನರಾದರು. ಈ ಹಿಂದೆಯುವ ಕೆಲವು ಬಾರಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು ಎಂದು ತಿಳಿದು ಬಂದಿದೆ.












Click it and Unblock the Notifications