ಚುನಾವಣೆ ಮೇಲೆ ಕಣ್ಣು, ಬೆಂಗಳೂರಿಗೆ ಬಂಪರ್ ಕೊಡುಗೆ
ಬೆಂಗಳೂರು, ಜೂ.25 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಸರ್ಕಾರ ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದೆ. ನಗರದಲ್ಲಿ 450 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಗುರುವಾರ ಅಥವ ಶುಕ್ರವಾರ ಬಿಬಿಎಂಪಿ ಚುನಾವಣೆ ವೇಳಾಪಟ್ಟಿ ಪ್ರಕಟಗೊಳ್ಳಲಿದೆ.
ಬುಧವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಬಿಬಿಎಂಪಿ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬರುವುದರಿಂದ ಸಭೆಯಲ್ಲಿ ಬೆಂಗಳೂರಿಗೆ ಹೆಚ್ಚಿನ ಕೊಡುಗೆಗಳನ್ನು ನೀಡಲಾಗಿದೆ. [ಆ.5ರೊಳಗೆ ಬಿಬಿಎಂಪಿ ಚುನಾವಣೆ]
ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು, ಸಭೆಯ ವಿವರ ನೀಡಿದರು. ಬಿಬಿಎಂಪಿಯ 18 ಕಿ.ಮೀ. ವ್ಯಾಪ್ತಿಯೊಳಗೆ ಸರ್ಕಾರಿ ಕಂದಾಯ ಭೂಮಿಯಲ್ಲಿ 600 ಚದರಡಿವರೆಗೆ ನಿರ್ಮಿಸಿಕೊಂಡಿರುವ ವಾಸದ ಮನೆಗಳನ್ನು ಸಕ್ರಮ ಮಾಡಿಕೊಳ್ಳಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದರು. [ಬಿಬಿಎಂಪಿ ಚುನಾವಣೆ ನಡೆಸಲು ಸುಪ್ರೀಂ ಸೂಚನೆ]

ಇದರಿಂದ 20*30 ಅಳತೆಯ ನಿವೇಶನದಲ್ಲಿ ಕಟ್ಟಿಕೊಂಡಿರುವ ಮನೆಗಳನ್ನು ಪ್ರತಿ ಚದರಡಿಗೆ ಮಾರ್ಗಸೂಚಿ ದರದ ಅನ್ವಯ ಶೇ.20ರಷ್ಟು ದಂಡ ಪಾವತಿಸಿ ಸಕ್ರಮಗೊಳಿಸಿಕೊಳ್ಳಬಹುದು ಎಂದು ಜಯಚಂದ್ರ ಅವರು ಹೇಳಿದರು. ಇದರಿಂದ ಕೊಳಗೇರಿ ಪ್ರದೇಶದಲ್ಲಿ ಮನೆ ಕಟ್ಟಿಕೊಂಡ ಬಡವರಿಗೆ ಸಹಕಾರವಾಗಲಿದೆ. [3 ಎಲಿವೇಟೆಡ್ ರಸ್ತೆ ಕೊಡುಗೆ ನೀಡಿದ ಸಿಎಂ]
ಆದರೆ, ಈ ನಿಯಮ ಅಕ್ರಮವಾಗಿ ನಿರ್ಮಾಣವಾದ ಬಡಾವಣೆಗಳಿಗೆ ಅನ್ವಯವಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಕಂದಾಯ ಭೂಮಿಯಲ್ಲಿ ಕಟ್ಟಿಕೊಂಡ ಮನೆಗಳಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಸಾಮಾನ್ಯವರ್ಗದವರು ಶೇ.20, ಪರಿಶಿಷ್ಟ ಜಾತಿ/ವರ್ಗದವರು ಶೇ.10ರಷ್ಟು ದಂಡ ಪಾವತಿಸಬೇಕು ಎಂದು ಸಚಿವರು ಹೇಳಿದರು.
ಬೆಂಗಳೂರಿಗೆ ಕೊಟ್ಟ ಇತರ ಕೊಡುಗೆಗಳು
* ಮೇಖ್ರಿ ಸರ್ಕಲ್‌ನಿಂದ ಹೂಡಿ ಫಾರಂವರೆಗೆ 140.91 ಕೋಟಿ ರೂ. ವೆಚ್ಚದಲ್ಲಿ ಸಿಗ್ನಲ್ ಫ್ರೀ ರಸ್ತೆ ನಿರ್ಮಾಣ. ಹಲಸೂರು ಜಂಕ್ಷನ್, ಹಳೆ ಮದ್ರಾಸ್ ರಸ್ತೆ ಜಂಕ್ಷನ್, ಕೆ.ಆರ್.ಪುರಂ, ವೈಟ್‌ಫೀಲ್ಡ್ ಮಾರ್ಗವಾಗಿ ಈ ರಸ್ತೆ ಸಾಗಲಿದೆ.
* ಮೈಸೂರು ರಸ್ತೆಯಿಂದ ಸಿಲ್ಕ್ ಬೋರ್ಡ್‌ವರೆಗೆ 153.42 ಕೋಟಿ ರೂ. ವೆಚ್ಚದಲ್ಲಿ ರಿಂಗ್ ರೋಡ್ ನಿರ್ಮಾಣ
* ಶಿವಾಜಿನಗರ ಬ್ರಾಡ್‌ವೇ ಆಸ್ಪತ್ರೆ ನಿರ್ಮಾಣಕ್ಕೆ 11.17 ಕೋಟಿ ರೂ. ಅನುದಾನ












Click it and Unblock the Notifications