ಕಾಂಗ್ರೆಸ್ 'ಟಗರಿ'ಗೆ ಸರಿಯಾಗಿ ಕುಟುಕಿದ ' ಹಳ್ಳಿಹಕ್ಕಿ'
ಬೆಂಗಳೂರು, ಡಿಸೆಂಬರ್.11: ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ 15 ವಿಧಾನಸಭಾ ಕ್ಷೇತ್ರಗಳ ಪೈಕಿ 12 ಕಡೆ ಕಮಲ ಅರಳಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವೂ ಸೇಫ್ ಆಗಿದೆ. ಸೋತವರನ್ನು ಹಂಗಿಸುತ್ತಿದ್ದ ಕಾಂಗ್ರೆಸ್ ಗೆ ಹಳ್ಳಿಹಕ್ಕಿ ಸರಿಯಾಗಿ ಕುಟುಕಿದೆ.
ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನೇ ಗುರಿಯಾಗಿಸಿಕೊಂಡು ಮಾತನಾಡಿರುವ ಹಳ್ಳಿಹಕ್ಕಿ ತಮ್ಮದೇ ಸ್ಟ್ಲೈಲ್ ನಲ್ಲಿ ಉತ್ತರ ಕೊಟ್ಟಿದ್ದಾರೆ.
ನಾನು ಉಪ ಚುನಾವಣೆಯಲ್ಲಿ ಸೋತಿದ್ದೇನೆ ಅಷ್ಟೇ. ಆದರೆ, ನಮ್ಮ ಉದ್ದೇಶ ಎಂದಿಗೂ ಸೋತಿಲ್ಲ. ನಾವು ನಮ್ಮ ಗುರಿಯನ್ನು ತಲುಪಿದ್ದೇವೆ. ನಮ್ಮ ಉದ್ದೇಶ ಗೆಲುವು ಸಾಧಿಸಿದೆ ಎಂದು ಹೆಚ್.ವಿಶ್ವನಾಥ್ ಹೇಳಿದ್ದಾರೆ. ಆ ಮೂಲಕ ಮೈತ್ರಿ ಸರ್ಕಾರ ಪತನದ ಬಗ್ಗೆ ಮಾತನಾಡಿದ್ದಾರೆ.

ಸಚಿವ ಸ್ಥಾನದ ಮೇಲೆ ನಾನು ಕಣ್ಣು ಇಟ್ಟಿಲ್ಲ
ವಿಧಾನಸೌಧದಲ್ಲಿ ಮಾತನಾಡಿರುವ ಮಾಜಿ ಶಾಸಕ ಹೆಚ್.ವಿಶ್ವನಾಥ್, ತಮಗೆ ಯಾವುದೇ ಸಚಿವ ಸ್ಥಾನದ ಮೇಲೂ ಕಣ್ಣಿಲ್ಲ. ನಮ್ಮ ಪಾಲಿಗೆ ಬಿ.ಎಸ್.ಯಡಿಯೂರಪ್ಪನವರೇ ಹೈಕಮಾಂಡ್ ಎಂದು ಹಾಡಿ ಹೊಗಳಿದ್ದಾರೆ. ಇದೇ ವೇಳೆ ರಾಜಕಾರಣ ಹಾಗೂ ರಾಜಕಾರಣಿಗಳಿಗೆ ಸಾವಿಲ್ಲ ಎಂದಿರುವ ಅವರು, ವಿರೋಧಿಗಳಿಗೆ ಉತ್ತರ ಕೊಟ್ಟಿದ್ದಾರೆ.

ಕಾಂಗ್ರೆಸ್ ನಲ್ಲಿ ಪಕ್ಷಾಂತರಿಗಳು ಇಲ್ಲವೇ?
ನಾನು ಮೂರು ವರ್ಷದಲ್ಲಿ ಮೂರು ಪಕ್ಷ ಬದಲಿಸಿದೆ ಎನ್ನುತ್ತಾರೆ. ಆದರೆ, 40 ವರ್ಷಗಳ ಕಾಲ ಕಾಂಗ್ರೆಸ್ ನಲ್ಲೇ ಸಕ್ರೀಯನಾಗಿದ್ದೆನು. ಬಲವಾದ ಕಾರಣದಿಂದ ಅಯೋಗ್ಯ ಸರ್ಕಾರವನ್ನ ಕಿತ್ತೊಗೆಯಲು ಪಕ್ಷವನ್ನು ಬದಲಿಸಿದ್ದೇನೆ. ಇದಕ್ಕೂ ಮೊದಲು ಸಿದ್ದರಾಮಯ್ಯ ಆರು ಬಾರಿ ಪಕ್ಷಾಂತರ ಮಾಡಿದ್ದಾರೆ. ರಮೇಶ್ ಕುಮಾರ್ ಒಂಬತ್ತು ಬಾರಿ ಪಕ್ಷ ಬದಲಿಸಿದ್ದಾರೆ. ಅವರದು ಪಕ್ಷಾಂತರಿಗಳಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಏನ್ ಅಣ್ತಮ್ಮಾ ಡೈಲಾಗ್ ಬಿಟ್ಟಿದ್ದೇಕೆ ವಿಶ್ವನಾಥ್
ಸಿದ್ದರಾಮಯ್ಯ ಬಗ್ಗೆ ಮಾತನಾಡಿರುವ ಮಾಜಿ ಶಾಸಕ ಹೆಚ್.ವಿಶ್ವನಾಥ್, ನಾನು ಹಾಗೂ ಸಿದ್ದರಾಮಯ್ಯ ಅಣ್ಣ-ತಮ್ಮನಿದ್ದಂತೆ. ನಾವಿಬ್ಬರೂ ಕುರುಬ ಸಮುದಾಯದವರೇ ಆಗಿದ್ದೇವೆ. ಹೀಗಿದ್ದರೂ ಅಣ್ಣನೇ ತಮ್ಮನನ್ನು ಬೆಳೆಯಲು ಬಿಡುತ್ತಿಲ್ಲ. ಸಿದ್ದರಾಮಯ್ಯ ಜೊತೆ ದಾಯಾದಿ ಕಲಹವಿದ್ದಿದ್ದರೆ ತೊಂದರೆ ಆಗುತ್ತಿರಲಿಲ್ಲ. ಆದರೆ, ಇದು ಅಣ್ಣ-ತಮ್ಮನ ಕಿತ್ತಾಟ ಎಂದು ಕುಟುಕಿದ್ದಾರೆ.

ಕಾಂಗ್ರೆಸ್ 'ಕೈ' ಹಿಡಿಯುತ್ತೆ ರಾಜೀನಾಮೆ
ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಕೊಟ್ಟಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಹೆಚ್.ವಿಶ್ವನಾಥ್, ಕಾಂಗ್ರೆಸ್ ಪಕ್ಷವನ್ನು ಮುಳುಗಿಸುವ ಜನರು, ಪಕ್ಷ ಸಂಪೂರ್ಣ ಮುಳುಗುವ ಮುನ್ನವೇ ನಾಯಕತ್ವದಿಂದ ಹೊರ ಬಂದಿದ್ದಾರೆ. ಇದು ಕಾಂಗ್ರೆಸ್ ಪಾಲಿಗೆ ಸೌಭಾಗ್ಯ ಎಂದಿದ್ದಾರೆ. ಅಲ್ಲದೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಬಗ್ಗೆ ತಮಗೆ ಗೌರವವಿದೆ. ಆದರೆ, ಆ ಪಕ್ಷಗಳ ನಾಯಕತ್ವದ ಬಗ್ಗೆ ನನಗೆ ಬೇಸರವಿದೆ ಎಂದು ವಿಶ್ವನಾಥ್ ಹೇಳಿದ್ದಾರೆ.











Click it and Unblock the Notifications