ಕರ್ನಾಟಕ ಬಜೆಟ್; ಬೆಂಗಳೂರು ಜನರ ನಿರೀಕ್ಷೆಗಳೇನು?
ಬೆಂಗಳೂರು, ಮಾರ್ಚ್ 03; ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ. 2022-23ನೇ ಸಾಲಿನ ಬಜೆಟ್‌ನಲ್ಲಿ ಬೆಂಗಳೂರು ನಗರಕ್ಕೆ ಹಲವಾರು ಕೊಡುಗೆಗಳನ್ನು ನಿರೀಕ್ಷೆ ಮಾಡಲಾಗಿದೆ.
ಬಸವರಾಜ ಬೊಮ್ಮಾಯಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇದೆ. ಅದಕ್ಕೂ ಮೊದಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಇದೆ.
Recommended Video
ಚುನಾವಣೆ ಹೊಸ್ತಿಲಲ್ಲಿ ನಿಂತಿರುವ ಬಿಜೆಪಿ ಸರ್ಕಾರ ರಾಜಧಾನಿಗೆ ಬೆಂಗಳೂರಿಗೆ ಬಜೆಟ್‌ನಲ್ಲಿ ಹಲವು ಹೊಸ ಘೋಷಣೆಗಳನ್ನು ಮಾಡುವ ನಿರೀಕ್ಷೆ ಇದೆ. ನಮ್ಮ ಮೆಟ್ರೋ, ಸಬ್ ಅರ್ಬನ್ ರೈಲು ಸೇರಿದಂತೆ ವಿವಿಧ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುವ ಸಾಧ್ಯತೆ ಇದೆ.

ಬೆಂಗಳೂರು ನಗರದ 'ಬಿ' ಖಾತೆ ಸ್ವತ್ತುಗಳನ್ನು 'ಎ' ಖಾತೆಗಳನ್ನಾಗಿ ಪರಿವರ್ತನೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇತ್ತು. ನಗರದಲ್ಲಿ ಸುಮಾರು 6.16 ಲಕ್ಷ 'ಬಿ' ಖಾತೆಗಳಿವೆ. ಇವುಗಳ ಕುರಿತು ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಚರ್ಚಿಸಿದ್ದರು. ಈಗ 'ಎ' ಖಾತೆಯಾಗಿ ಪರಿವರ್ತನೆ ಮಾಡುವ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ.
ಇದು ಆಸ್ತಿ ಮಾಲೀಕರ ಸುಮಾರು 10 ವರ್ಷಗಳ ಸಂಕಟವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಎದುರಿರುವಾಗ ಈ ಘೋಷಣೆಯನ್ನು ಮಾಡಿ, ಮತಗಳಿಕೆ ಮಾಡಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.
2018ರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿಯೇ 'ಬಿ' ಖಾತೆಯನ್ನು 'ಎ' ಖಾತೆಯಾಗಿ ಪರಿವರ್ತನೆ ಮಾಡುವ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿತ್ತು. ಆದರೆ ಸರ್ಕಾರ ಇದಕ್ಕೆ ಇನ್ನೂ ಅಂತಿಮ ಒಪ್ಪಿಗೆ ನೀಡಿಲ್ಲ. ಈಗ ಬಜೆಟ್‌ನಲ್ಲಿ ಅನುಮೋದನೆ ದೊರೆಯುವ ನಿರೀಕ್ಷೆ ಇದೆ.
ಅಕ್ರಮ-ಸಕ್ರಮ ಮತ್ತು 'ಬಿ' ಖಾತೆಯನ್ನು 'ಎ' ಖಾತಾವಾಗಿ ಪರಿವರ್ತನೆ ಮಾಡುವುದಕ್ಕೂ ಸಂಬಂಧವಿಲ್ಲ. 'ಎ' ಖಾತೆಯಲ್ಲಿ ನಿಯಮ ಉಲ್ಲಂಘನೆ ಮಾಡಿ ಕಟ್ಟಡವನ್ನು ನಿರ್ಮಾಣ ಮಾಡಿದ್ದರೂ ಅದು ಅಕ್ರಮ ಕಟ್ಟಡ ಪಟ್ಟಿಗೆ ಸೇರುತ್ತದೆ.
ಆದಾಯ ಸಂಗ್ರಹಕ್ಕೆ ಒತ್ತು; ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಜಿಲ್ಲೆ ಬೆಂಗಳೂರು. ನಗರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಜೊತೆಗೆ ಆದಾಯ ಸಂಗ್ರಹಕ್ಕೂ ಆದ್ಯತೆ ನೀಡುವ ಸಾಧ್ಯತೆ ಇದೆ.
ಬಿಬಿಎಂಪಿಯ 198 ವಾರ್ಡ್‌ಗಳನ್ನು 243ಕ್ಕೆ ಏರಿಕೆ ಮಾಡಲಾಗುತ್ತಿದೆ. ಈ ಕುರಿತು ಪ್ರಕ್ರಿಯೆಗಳು ಜಾರಿಯಲ್ಲಿವೆ. 2006ರಲ್ಲಿ ಪಾಲಿಕೆ ವ್ಯಾಪ್ತಿಗೆ 110 ಹಳ್ಳಿಗಳು ಸೇರಿದ್ದವು. ಈಗ ಪುನಃ ಹೊಸದಾಗಿ ಹಳ್ಳಿಗಳು ಸೇರಲಿವೆ. ಇವುಗಳಿಗೆ ಮೂಲ ಸೌಲಭ್ಯ ಒದಗಿಸಲು ಸರ್ಕಾರ ಹೊಸ ಘೋಷಣೆ ಮಾಡುವ ನಿರೀಕ್ಷೆ ಇದೆ.
ಬಜೆಟ್ ಬಗ್ಗೆ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಎಲ್ಲಾ ಇಲಾಖೆಗಳ ಬೇಡಿಕೆ ಗಮನಿಸಿ ಬಜೆಟ್ ಸಿದ್ದಪಡಿಸಲಾಗುವುದು. ಕೇಂದ್ರ, ರಾಜ್ಯದ ಯೋಜನೆ ಗಮನಿಸಿ ಬಜೆಟ್ ಸಿದ್ಧಪಡಿಸುತ್ತೇನೆ. ಬಜೆಟ್‌ನಲ್ಲಿ ಏನಾಗುತ್ತದೆ? ಎಂದು ಮೊದಲೇ ಹೇಳಲು ಆಗುವುದಿಲ್ಲ" ಎಂದ ಹೇಳಿದ್ದರು.
ಕಳೆದ ಬಾರಿಯ ಬಜೆಟ್‌ನಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗೆ 7,795 ಕೋಟಿ ರೂ.ಗಳ ಅನುದಾನವನ್ನು ಘೋಷಣೆ ಮಾಡಲಾಗಿತ್ತು. ಈ ಬಾರಿ ಇದಕ್ಕಿಂತ ಹೆಚ್ಚಿನ ಅನುದಾನ ಘೋಷಣೆಯಾಗುವ ನಿರೀಕ್ಷೆ ಇದೆ.
ಉಪ ನಗರ ರೈಲು ಯೋಜನೆ, ನಾಡಪ್ರಭು ಕೆಂಪೇಗೌಡ ಬಡಾವಣೆ ಮೂಲ ಸೌಕರ್ಯ ಅಭಿವೃದ್ಧಿ, ನಮ್ಮ ಮೆಟ್ರೋ ಯೋಜನೆ, ನಗರದಲ್ಲಿ ನಡೆಯುತ್ತಿರುವ ವಿವಿಧ ವೈಟ್ ಟಾಪಿಂಗ್ ಕಾರ್ಯ ಪೂರ್ಣಗೊಳಿಸುವುದು ಸೇರಿದಂತೆ ವಿವಿಧ ಯೋಜನೆಗಳಿಗೆ ಸರ್ಕಾರ ಅನುದಾನ ನೀಡಬೇಕಿದೆ.












Click it and Unblock the Notifications