ಬೊಮ್ಮಾಯಿ ಬಜೆಟ್; ನಮ್ಮ ಮೆಟ್ರೋ ಯೋಜನೆಗೆ ಸಿಕ್ಕಿದ ಕೊಡುಗೆಗಳು
ಬೆಂಗಳೂರು, ಮಾರ್ಚ್ 04; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಯಾವುದೇ ತೆರಿಗೆ ಹೊರೆ ಹೇರದ ಅವರು ವಿವಿಧ ಕ್ಷೇತ್ರಗಳಿಗೆ ಹಲವು ಕೊಡುಗೆ ಕೊಟ್ಟರು. ವಿವಿಧ ಹೊಸ ಯೋಜನೆಗಳನ್ನು ಘೋಷಣೆ ಮಾಡಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಬಸವರಾ ಬೊಮ್ಮಾಯಿ ರಾಜ್ಯದ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ಸಹ ಹಲವು ಘೋಷಣೆಗಳನ್ನು ಮಾಡಿದರು. ಅದರಲ್ಲೂ ಬಿಬಿಎಂಪಿ ಚುನಾವಣೆ ಎದುರಿರುವ ಹಿನ್ನಲೆಯಲ್ಲಿ ಹಲವು ಕೊಡುಗೆಗಳನ್ನು ನಗರಕ್ಕೆ ನೀಡಿದರು.
ಬಜೆಟ್ ಭಾಷಣದಲ್ಲಿ ಬಸವರಾಜ ಬೊಮ್ಮಾಯಿ, ಬೆಂಗಳೂರು ನಗರ ಅಂತಾರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ನಗರವಾಗಿದೆ. ಐಟಿ, ಬಿಟಿ, ಸಂಶೋಧನಾ ವಲಯಗಳಂತಹ ಜ್ಞಾನಾಧಾರಿತ ಉದ್ದಿಮೆಗಳ ನೆಲೆಯಾಗಿದೆ. ಈ ಎಲ್ಲಾ ಕಾರಣಗಳಿಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಜನ ಜೀವನ ಸುಗಮ ಗೊಳಿಸಲು ಎಲ್ಲಾ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

ಸಂಚಾರ ದಟ್ಟಣೆ ನಿವಾರಣೆಗೆ ರೂಪಿಸಲಾದ ನಮ್ಮ ಮೆಟ್ರೋ, ಸಬ್ ಅರ್ಬನ್ ರೈಲು, ಪೆರಿಫೆರಲ್ ರಿಂಗ್ ರೋಡ್ ಮತ್ತಿತರ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಒತ್ತು ನೀಡಲಾಗುತ್ತದೆ ಎಂದರು. ಜೊತೆಗೆ ನಗರದ ಪರಿಸರದಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ಹಸಿರು ಹೊದಿಕೆ ಹೆಚ್ಚಿಸುವ ಮೂಲಕ ಸೌಂದರ್ಯ ವೃದ್ಧಿಗೂ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು 6,000 ಕೋಟಿ ರೂ. ಗಳ ವೆಚ್ಚದಲ್ಲಿ ಅಮೃತ್ ನಗರೋತ್ಥಾನ ಯೋಜನೆಯನ್ನು ಮುಂದಿನ 3 ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಈ ಯೋಜನೆಯಡಿಯಲ್ಲಿ ಪಾಲಿಕೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ, ಗ್ರೇಡ್ ಸೆಪರೇಟರ್, ಕೆರೆ ಅಭಿವೃದ್ಧಿ, ಬೃಹತ್ ನೀರುಗಾಲುವೆ ಅಭಿವೃದ್ಧಿ, ಉದ್ಯಾನವನಗಳ ಅಭಿವೃದ್ಧಿ, ಕಟ್ಟಡಗಳು, ಘನತ್ಯಾಜ್ಯ ನಿರ್ವಹಣೆ, ಬೀದಿ ದೀಪಗಳು, ಕೊಳಚೆ ಪ್ರದೇಶ ಅಭಿವೃದ್ಧಿ ಇತ್ಯಾದಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಣೆ ಮಾಡಿದರು.
ನಮ್ಮ ಮೆಟ್ರೋಗೆ ಘೋಷಣೆಗಳು
* 2021-22 ಸಾಲಿನಲ್ಲಿ ನಮ್ಮ ಮೆಟ್ರೊ ಹಂತ-2ರಲ್ಲಿ 7.53 ಕಿ.ಮೀ.ಗಳ ಹೆಚ್ಚುವರಿ ಮಾರ್ಗವನ್ನು ಕಾರ್ಯಾರಂಭ ಮಾಡಿದ್ದು, 2022-23ನೇ ಸಾಲಿನಲ್ಲಿ 33 ಕಿ. ಮೀ. ಗಳ ಮಾರ್ಗವನ್ನು ಸೇರಿಸಲಾಗುವುದು. ಇದರಿಂದ ಒಟ್ಟಾರೆ 89 ಕಿ. ಮೀ. ಗಳ ಉದ್ದದ ಮೆಟ್ರೋ ಮಾರ್ಗವನ್ನು ಹೊಂದಿದಂತಾಗುತ್ತದೆ.
* ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 58.19 ಕಿ. ಮೀ. ಗಳು ಉದ್ದದ ಮೆಟ್ರೋ ಕಾಮಗಾರಿ ಪ್ರಾರಂಭಗೊಂಡಿದ್ದು, ಮಾರ್ಚ್ 2025ರೊಳಗೆ ಪೂರ್ಣಗೊಳ್ಳಲಿದೆ.
* ಬೆಂಗಳೂರು ಮೆಟ್ರೊ ಹಂತ-3 ಯೋಜನೆಯನ್ನು ಅಂದಾಜು 11,250 ಕೋಟಿ ರೂ. ಗಳ ವೆಚ್ಚದಲ್ಲಿ ಕೈಗೊಳ್ಳಲು ವಿಸ್ತೃತ ಯೋಜನಾ ವರದಿಯನ್ನು (ಡಿ.ಪಿ.ಆರ್) ಕೇಂದ್ರ ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗುವುದು. ಇದು ಹೆಬ್ಬಾಳದಿಂದ ಜೆ. ಪಿ. ನಗರದವರೆಗೆ 32 ಕಿ. ಮೀ. ಗಳ ಹೊರವರ್ತುಲ ರಸ್ತೆ ಮಾರ್ಗ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೆ 13 ಕಿ. ಮೀ. ಮಾರ್ಗವನ್ನು ಒಳಗೊಂಡಿದೆ.
* 2022-23ನೇ ಸಾಲಿನಲ್ಲಿ 37 ಕಿ. ಮೀ. ಉದ್ದದ ಸರ್ಜಾಪುರದಿಂದ ಅಗರ, ಕೋರಮಂಗಲ ಮತ್ತು ಡೈರಿ ವೃತ್ತದ ಮೂಲಕ ಹೆಬ್ಬಾಳದವರೆಗೆ 15,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ 36 ಕಿ. ಮೀ. ಉದ್ದದ ಹೊಸ ಮಾರ್ಗಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕ್ರಮವಹಿಸಲಾಗುವುದು.
* ಪಾದಚಾರಿಗಳು ಮತ್ತು ರಸ್ತೆ ಬದಿ ವ್ಯಾಪಾರಿಗಳ ಸುರಕ್ಷತೆಗಾಗಿ ಹಾಗೂ ಮೆಟ್ರೋ ನಿಲ್ದಾಣವನ್ನು ಬಸ್ ನಿಲ್ದಾಣದೊಂದಿಗೆ ಸಂಪರ್ಕಿಸಲು ಬನಶಂಕರಿ ಜಂಕ್ಷನ್‍ನಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಸ್ಕೈವಾಕ್ ನಿರ್ಮಿಸಲಾಗುವುದು.
* ವೈಟ್‍ಫೀಲ್ಡ್, ಕೆ. ಆರ್. ಪುರಂ, ಬೈಯ್ಯಪ್ಪನಹಳ್ಳಿ, ಯಶವಂತಪುರ, ಜ್ಞಾನಭಾರತಿ ಮತ್ತು ಯಲಹಂಕ ರೈಲ್ವೆ ನಿಲ್ದಾಣಗಳಲ್ಲಿ 55 ಕೋಟಿ ರೂ. ವೆಚ್ಚದಲ್ಲಿ ಭಾರತೀಯ ರೈಲ್ವೆಯೊಂದಿಗೆ ಮೆಟ್ರೋ ನಿಲ್ದಾಣದ ಸಂಪರ್ಕದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು.
* ಬೆಂಗಳೂರು ಉಪನಗರ ರೈಲ್ವೆ ಯೋಜನೆಯನ್ನು 15,267 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 2026ರ ವೇಳೆಗೆ ಪೂರ್ಣಗೊಳಿಸಲು ಉದ್ದೇಶಿಸಿದೆ. 148 ಕಿ.ಮೀ. ಉದ್ದದ ಈ ಯೋಜನೆಯಡಿ ನಾಲ್ಕು ಕಾರಿಡಾರ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಚಿಕ್ಕಬಾಣಾವರ-ಬೈಯ್ಯಪ್ಪನಹಳ್ಳಿ ಕಾರಿಡಾರ್ ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರವೇ ಕಾಮಗಾರಿಯನ್ನು ಆರಂಭಿಸಲಾಗುವುದು.












Click it and Unblock the Notifications