Harish Poonja: ಶಾಸಕನ ಬಂಧನ ಯತ್ನ: ಅಧಿಕಾರದ ಮದದಲ್ಲಿ ತೇಲುತ್ತಿರುವ ಕಾಂಗ್ರೆಸ್‌ನಿಂದ ದಮನಕಾರಿ ನಡೆ: ಬಿಜೆಪಿ ಕಿಡಿ
ಬೆಂಗಳೂರು, ಮೇ 23: ಬಿಜೆಪಿ ಕಾರ್ಯಕರ್ತರ ಬಂಧನ ಖಂಡಿಸಿ ಪೊಲೀಸ್ ಅಧಿಕಾರಿಗಳ ವಿರುದ್ಧ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದ ಬಿಜೆಪಿ ಶಾಸಕ ಹರೀಶ್ ಪೂಂಜಾ ಬಂಧನಕ್ಕೆ ಮುಂದಾಗಿದ್ದರು. ಬುಧವಾರ ಪೊಲೀಸರು ಶಾಸಕ ಮನೆಗೆ ಬರುತ್ತಿದ್ದಂತೆ ಹೈಡ್ರಾಮಾವೇ ನಡೆಯಿತು. ಶಾಸಕರ ಬಂಧನದ ಯತ್ನವನ್ನು ರಾಜ್ಯ ಬಿಜೆಪಿ ಖಂಡಿಸಿದೆ. ಸರ್ಕಾರದ ವಿರುದ್ಧ ಕಟುವಾಗ್ದಾಳಿ ನಡೆಸಿದರು.
ಶಾಸಕ ಹರೀಶ್ ಪೂಂಜಾ ಬಂಧನಕ್ಕೆ ಪೊಲೀಸರು ಮುಂದಾಗಿದ್ದರ ವಿರುದ್ಧ ಗುರುವಾರ ಕರ್ನಾಟಕ ಬಿಜೆಪಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದೆ. ಅಧಿಕಾರದ ಮದದಲ್ಲಿ ತೇಲುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದಮನಕಾರಿ ನಡೆಯು ಸರ್ವಾಧಿಕಾರಿ ಹಿಟ್ಲರ್ ಆಡಳಿತವನ್ನೂ ಮೀರಿಸುವಂತಿದೆ.

ಅಕ್ರಮವಾಗಿ ಕ್ವಾರಿ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದ ಅಸಮರ್ಥ ರಾಜ್ಯ ಸರ್ಕಾರವು, ಬಿಜೆಪಿ ಯುವ ಮುಖಂಡ ಶಶಿರಾಜ್ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಬಂಧಿಸಿದೆ. ಈ ಬಂಧನ ವಿರೋಧಿಸಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಪ್ರತಿಭಟನೆ ನಡೆಸಿದ್ದಕ್ಕೆ ನೀತಿ ಸಂಹಿತೆ ನೆಪದಲ್ಲಿ ಸರ್ಕಾರ ಬಂಧನಕ್ಕೆ ಮುಂದಾಗಿದ್ದು ಖಂಡನೀಯ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಪ್ರತಿಭಟನೆ ವೇಳೆ ನೀತಿ ಸಂಹಿತೆ ಇರಲಿಲ್ಲವೇ?
ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ವೇಳೆ ಅಡ್ಡಿ ಬಾರದ ನೀತಿ ಸಂಹಿತೆ, ಅಧಿಕಾರದ ದುರ್ಬಳಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆಗೆ ಇಳಿದಾಗ ನೀತಿ ಸಂಹಿತೆ ಅಡ್ಡಿ ಬರುವುದ್ಯಾಕೆ? ಇದು ಪ್ರತಿಭಟಿಸುವ ಹಕ್ಕನ್ನು ಕಿತ್ತುಕೊಳ್ಳುವ ಸರ್ವಾಧಿಕಾರವಲ್ಲದೆ ಮತ್ತೇನು? ಎಂದು ಬಿಜೆಪಿ ಖಾರವಾಗಿ ಪ್ರಶ್ನೆ ಮಾಡಿದೆ.

ಅಪರಾಧ ಚಟುವಟಿಕೆ ವಿರುದ್ಧ ಕ್ರಮ ಇಲ್ಲ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕರುನಾಡು ಉಗ್ರರ ಬೀಡಾಗುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇತೃತ್ವದ ಅಸಮರ್ಥ ಸರ್ಕಾರ ಯಾವ ಕ್ರಮ ಕೈಗೊಂಡಿಲ್ಲ. ಆದರೆ, ಅನ್ಯಾಯದ ಕುರಿತು ಧ್ವನಿ ಎತ್ತಿದ್ದಕ್ಕೆ ಬಿಜೆಪಿ ಕಾರ್ಯಕರ್ತರನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸಿ, ಬಂಧಿಸಿರುವುದು ಅಕ್ಷಮ್ಯ ಎಂದು ದೂರಿದೆ.
ಕಲ್ಲು ಕ್ವಾರಿ ನಡೆಸುತ್ತಿದ್ದಾರೆ ಎಂದು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಹರೀಶ್ ಪೂಂಜಾ ಆರೋಪಿಸಿದ್ದರು. ಈ ಸಂಬಂಧ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ನೀತಿ ಸಂಹಿತೆ ಇದೆ ಎಂದು ಪೊಲೀಸರು ಅಡ್ಡಿಪಡಿಸಿದ್ದರು. ಹಾಗಾದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪ್ರಕರಣದ ವಿಚಾರವಾಗಿ ಇದೇ ಕಾಂಗ್ರೆಸ್ ಪ್ರತಿಭಟನೆ ಮಾಡುವಾಗ ನೀತಿ ಸಂಹಿತೆ ಅಡ್ಡಿ ಬರಲಿಲ್ಲವೇ ಎಂದು ಬಿಜೆಪಿ ಶಾಸಕರು, ಬೆಂಬಲಿಗರು ಪ್ರಶ್ನೆ ಮಾಡಿದ್ದಾರೆ.
ಅಧಿಕಾರದ ಮದದಲ್ಲಿ ತೇಲುತ್ತಿರುವ @INCKarnataka ಸರ್ಕಾರದ ದಮನಕಾರಿ ನಡೆಯು ಹಿಟ್ಲರ್ ಆಡಳಿತವನ್ನೂ ಮೀರಿಸುವಂತಿದೆ.
— BJP Karnataka (@BJP4Karnataka) May 23, 2024
ಅಕ್ರಮವಾಗಿ ಕ್ವಾರಿ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದ ಅಸಮರ್ಥ ಸರ್ಕಾರ, ಬಿಜೆಪಿ ಯುವ ಮುಖಂಡ ಶಶಿರಾಜ್ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಬಂಧಿಸಿದೆ. ಈ ಬಂಧನ ವಿರೋಧಿಸಿ ಬಿಜೆಪಿ ಶಾಸಕ @HPoonja ಅವರು…
ಬಿಜೆಪಿ ಶಾಸಕನ ವಿರುದ್ಧ ಮೂರು ಪ್ರಕರಣ
ಹೀಗೆ ಕಾರ್ಯಕರ್ತರ ಪರ ಪ್ರತಿಭಟನೆ ನಡೆಸುವಾಗ ಪೊಲೀಸರ ವಿರುದ್ಧ ಮಾತನಾಡಿ ಬಿಜೆಪಿ ಶಾಸಕ ಪೂಂಜಾ ಅವರ ವಿರುದ್ಧ ಮೂರು ಪ್ರಕರಣ ದಾಖಲಾಗಿದೆ. ಇದರ ಆಧಾರದಲ್ಲಿ ಅವರನ್ನು ಬಂಧಿಸಲು ಬುಧವಾರ ಬೆಳ್ತಂಗಡಿಗೆ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದರು. ಈ ವೇಳೆ ಹೈಡ್ರಾಮಾವೇ ನಡೆಯಿತು.
ಪೊಲೀಸರನ್ನು ಹಿಮ್ಮೆಟ್ಟಿಸಿದ ಬೆಳ್ತಂಗಡಿ ಕೇಸರಿ ಪಡೆ
ನೀವು ಬಂಧಿಸುವುದಾದರೆ, ವಶಕ್ಕೆ ಪಡೆಯುವುದಾದರೆ ಸೂಕ್ತ ನೋಟಿಸ್ ನೀಡಿ. ಕಾನೂನು ಅಡಿ ಕ್ರಮ ಕೈಗೊಳ್ಳಿ ಎಂದು ಶಾಸಕರ ಪರ ವಕೀಲರು ವಾದಿಸಿದರು. ಪೊಲೀಸರು ಶಾಸಕರ ಮನೆ ಮುಂದೆ ಬರುತ್ತಿದ್ದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು ದೌಡಾಯಿಸಿದರು. ಪೊಲೀಸರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಬೆಳ್ತಂಗಡಿ ಬಿಜೆಪಿ ಕಾರ್ಯಕರ್ತರ ಒಗ್ಗಟ್ಟು, ಶಕ್ತಿಯನ್ನು ಅವರು ರಾಜ್ಯಕ್ಕೆ ಪ್ರದರ್ಶಿಸಿದರು.












Click it and Unblock the Notifications