Karnataka Bandh: ಬೆಂಬಲ ಕೋರಿ ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ಅಭಿಯಾನ, ವಿವರ
ಬೆಂಗಳೂರು, ಸೆಪ್ಟಂಬರ್ 27: ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ನಡೆ ವಿರುದ್ಧ ಸಿಡಿದೆದ್ದಿರುವ ಕನ್ನಡಪರ ಸಂಘಟನೆಗಳು ಸೆಪ್ಟಂಬರ್ 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಸಂಬಂಧ ಅಂದು ಬೆಂಬಲಿಸುವಂತೆ ಕೋರಿ ಬೆಂಗಳರಿನಲ್ಲಿ ಇಂದು ಬುಧವಾರ ಮತ್ತು ನಾಳೆ ಗುರುವಾರ ಜಾಗೃತಿ ಅಭಿಯಾನ ನಡೆಯಲಿದೆ.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗಾರಾಜ್ ನೇತೃತ್ವದಲ್ಲಿ ಇಂದು ಅಭಿಯಾನ ಆರಂಭವಾಗಿದೆ. ಇಂದು ಮಧ್ಯಾಹ್ನ 2,45 ಗಂಟೆಗೆ ನಗರದ ಮಲ್ಲೇಶ್ವರ ಮಂತ್ರಿ ಮಾಲ್ ನಿಂದ ಬೆಂಗಳೂರಿನ ಪ್ರಮುಖ ಬೀದಿಗಳಲ್ಲಿ ಕರ್ನಾಟಕ ಬಂದ್ ಕಾವೇರಿ ಉಳಿವಿಗಾಗಿ ರೈತರ ಉಳಿಯುವಾಗಿ ಜಾಗೃತಿ ಮೂಡಿಸುವ ಸಲುವಾಗಿ ತೆರೆದ ವಾಹನದಲ್ಲಿ ಕನ್ನಡ ಒಕ್ಕೂಟದ ಮುಖಂಡರೊಂದಿಗೆ ಅಭಿಯಾನ ಆರಂಭವಾಗಿದೆ.

ಇದೇ ರೀತಿ ಸಹ ನಾಳೆ ಮೈಸೂರು ಬ್ಯಾಂಕ್ ವೃತ್ತದಿಂದ ನಗರದ ಇನ್ನಷ್ಟು ಪ್ರಮುಖ ಬೀದಿಗಳಲ್ಲಿ ಕರ್ನಾಟಕ ಬಂದ್‌ಗೆ ಬೆಂಬಲಿಸುವಂತೆ, ರೈತರ ಕಷ್ಟಗಳಿಗೆ, ಬೆಂಗಳೂರಿನ ಭವಿಷ್ಯಕ್ಕೆ, ಕುಡಿಯುವ ನೀರಿಗಾಗಿ ಎಲ್ಲರೂ ಬಂದ್‌ಗೆ ಕೈ ಜೋಡಿಸುವಂತೆ ವಾಟಾಳ್ ನಾಗರಾಜ್ ಅವರು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಮನವಿ ಮಾಡಲಿದ್ದಾರೆ.
ಪೊಲೀಸ್ ದರ್ಪ ಸಹಿಸಲ್ಲ: ವಾಟಾಳ್ ನಾಗರಾಜ್
ಅಲ್ಲದೇ ಕರ್ನಾಟಕ ಬಂದ್ ವೇಳೆ ಸರ್ಕಾರ ಪೊಲೀಸರನ್ನು ಬಳಿಸಿದರೆ, ಇಲ್ಲವೇ ಪೊಲೀಸ್ ಇಲಾಖೆ ದರ್ಪ ತೋರಿಸಿದರೆ ಸಹಿಸುವುದಿಲ್ಲ ಎಂದು ಖುದ್ದು ವಾಟಾಳ್ ನಾಗರಾಜ್ ಅವರು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಅಭಿಯಾನದಲ್ಲಿ ಕನ್ನಡ ಒಕ್ಕೂಟದ ಮುಖಂಡರು ಅಧ್ಯಕ್ಷರು ಶ್ರೀ ವಾಟಾಳ್ ನಾಗರಾಜ್, ಹಸಿರು ಸೇನೆಯ ರಾಜ್ಯಾಧ್ಯಕ್ಷ ವಾಸುದೇ ಮೇಟಿ, ಕನ್ನಡ ಸೇನೆಯ ಕೆ ಆರ್ ಕುಮಾರ್, ಪ್ರವೀಣ್ ಕುಮಾರ್ ಶೆಟ್ಟಿ, ಶಿವರಾಮೇಗೌಡ್ರು, ಗಿರೀಶ್ ಗೌಡ್ರು, ನಾರಾಯಣಸ್ವಾಮಿ, ಏನ್ ಸತೀಶ್, ಮುಬಾರಕ್ ಪಾಷಾ, ಜಾಫರ್ ಸಾಧಿಕ್, ಹಲವಾರು ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಕಾವೇರಿ ವಿವಾದ: ಸರ್ಕಾರದ ವಿರುದ್ಧ ಆಕ್ರೋಶ
ಕಾವೇರಿ ಜಲಾನಯನ ಪ್ರದೇಶ ಸೇರಿದಂತೆ ಕರ್ನಾಟಕಕ್ಕೆ ಈ ವರ್ಷ ಸಾಕಷ್ಟು ಮಳೆ ಕೊರತೆ ಎದುರಾಗಿದೆ. ಕಾವೇರಿ ನೀರಿನ ಹರಿವು ಕಡಿಮೆ ಇದೆ. ಈ ಮಧ್ಯೆ ಕಾವೇರಿ ನೀರು ನಿರ್ವಹಣೆ ಸಮಿತಿಯು ಕರ್ನಾಟಕಕ್ಕೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದೆ. ನೀರು ಬಿಡಲ್ಲ ಎಂದು ಹೇಳುತ್ತಲೇ ರಾಜ್ಯ ಸರ್ಕಾರ ನೆರೆ ರಾಜ್ಯಕ್ಕೆ ನೀರು ಹರಿಸಿರುವುದು ವ್ಯಾಪಕ ಆಕ್ರೋಶ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಸೆಪ್ಟಂಬರ್ 26ರಂದು ಬೆಂಗಳೂರು ಬಂದ್ ನಡೆಯಿತು. ಈ ವೇಳೆ ಕರವೇ ನಾರಾಯಣ ಗೌಡರ ಬಣ ಬೆಂಬಲ ನೀಡಿರಲಿಲ್ಲ. ಅವರೊಂದಿಗೆ ವಾಟಾಳ್ ನಾಗರಾಜ್ ಅವರ ಪಕ್ಷವು ಬೆಂಬಲ ನೀಡಿಲ್ಲ. ಸದ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಉದ್ದೇಶದಿಂದ ವಾಟಾಳ್ ನಾಗರಾಜ್ ಅವರು ಸೇರಿದಂತೆ ಹಲವು ಕನ್ನಡ ಚಳವಳಿಗಾರರು ಶುಕ್ರವಾರ ಕರ್ನಾಟಕದ ಬಂದ್‌ಗೆ ಕರೆ ನೀಡಿದ್ದಾರೆ.












Click it and Unblock the Notifications