Karnataka Bandh: ಮಾರ್ಚ್ 22ರಂದು ಏನಿರುತ್ತೆ? ಏನಿರಲ್ಲ? ಅಪ್ಡೇಟ್ ಮಾಹಿತಿ
ಬೆಂಗಳೂರು, ಮಾರ್ಚ್ 18: ಬೆಳಗಾವಿ ಗಡಿಯಲ್ಲಿನ ಮರಾಠಿಗರ ಪುಂಡಾಟಿಕೆ, ಬಸ್ ಚಾಲಕ ಸೇರಿದಂತೆ ಕನ್ನಡಿಗರ ಮೇಲಿನ ದರ್ಪ, ದೌರ್ಜನ್ಯದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ, ಸರ್ಕಾರದ ಮೇಲೆ ಒತ್ತಡ ಹೇರಲು ಇದೇ ಮಾರ್ಚ್ 22ರಂದು ಕರ್ನಾಟಕ ಬಂದ್ ಮಾಡಲಾಗುತ್ತಿದೆ. ಅಖಂಡ ಕರ್ನಾಟಕ ಬಂದ್‌ಗೆ 'ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯ' ಕರೆ ನೀಡಿದ್ದು, ವಾರಂತ್ಯದ ಶನಿವಾರ ಬಂದ್ ನಡೆಯುವ ಹಿನ್ನೆಲೆಯಲ್ಲಿ ಏನೆಲ್ಲ ಇರಲಿದೆ. ಏನೆಲ್ಲ ಇರುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.
ಕರ್ನಾಟಕ ಬಂದ್ ಪ್ರಯುಕ್ತ ಬೆಂಗಳೂರು, ಬೆಳಗಾವಿ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಬಂದ್‌ಗೆ ಬೆಂಬಲ ಸಿಗುವ ನಿರೀಕ್ಷೆ ಇದೆ. ಸಾರಿಗೆ, ಬಸ್, ಆಟೋ ಸಂಚಾರ ಇರುವುದಿಲ್ಲ. ರಾಜ್ಯದ ಬ್ಯಾಂಕ್‌ಗಳ ಕಾರ್ಯ ನಿರ್ವಹಣೆ ಅಂದು ಬಂದ್ ಆಗಿರುತ್ತದೆ. ರಾಜ್ಯ ಬಂದ್ ಅಲ್ಲದೇ ನಾಲ್ಕನೇ ಶನಿವಾರ ಹಿನ್ನೆಲೆಯಲ್ಲಿ ಎಂದಿನಂತೆ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

ಸಂಚಾರಕ್ಕೆ ಸಮಸ್ಯೆ ಸಾಧ್ಯತೆ
ಮಾರ್ಚ್ 22 ಶನಿವಾರ ಬಂದಿದ್ದು, ವಾರಾಂತ್ಯ ಆಗಿರುವ ಕಾರಣ ದೂರದ ಊರುಗಳಿಗೆ ಹೋಗುವವರು, ಬರುವವರು ಇರುತ್ತಾರೆ. ಅಗತ್ಯ ವಸ್ತುಗಳಾದ ತರಕಾರಿ, ಹಾಲು, ಹಣ್ಣು, ವೈದ್ಯಕೀಯ ಸೇವೆ, ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಶಾಲಾ ಕಾಲೇಜುಗಳು ಅಂದು ತೆರೆದಿರುತ್ತವಾ? ಇಲ್ಲವಾ? ಎಂಬುದು ಅಂತಿಮಗೊಳ್ಳಬೇಕಿದೆ.
ಬಂದ್ ದಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳ ಸಂಚಾರ ಅನುಮಾನ ಎನ್ನಲಾಗಿದೆ. ಬೆಂಗಳೂರಿನಲ್ಲಿ ಆಟೋಗಳ ಸಂಚಾರ ಇರುವುದಿಲ್ಲ. ಆಟೋ ಚಾಲಕರು, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ಸಹಕಾರ ನೀಡಲು ಸಜ್ಜಾಗಿವೆ ಎಂದು ವಾಟಾಳ್ ನಾಗರಾಜ್ ಅವರು ಈಗಾಗಲೇ ತಿಳಿಸಿದ್ದಾರೆ.
ಹೋಟೆಲ್ ತಿಂಡಿ-ಊಟ ಸಿಗುತ್ತಾ?
ಇದೇ ವಾರಾಂತ್ಯದ ಶನಿವಾರ ಬಂದ್ ಕಾರಣ, ಕೆಲವು ಪ್ರಮುಖ ಅತ್ಯಗತ್ಯ ಸೇವೆಗಳು ಇರಲಿವೆ. ಖಾಸಗಿ ಸಾರಿಗೆ ಸೇವೆ ಇರಲಿದೆ. ಶಾಲೆಗಳ ಬಂದ್ ನಿರ್ಧಾರ ಅಂತಿಮವಾಗಿಲ್ಲ. ಮುಂದಿನ ಶನಿವಾರ ಹೋಟೆಲ್ ನಲ್ಲಿ ಊಟ- ತಿಂಡಿ, ಟೀ, ಕಾಫಿ ಸಿಗುತ್ತಾ? ಎಂಬ ಅನುಮಾನ ಉಂಟಾಗಿದೆ. ಹೋಟೆಲ್, ರೆಸ್ಟೋರೆಂಟ್ ತೆರೆದಿರುತ್ತವಾ ಇಲ್ಲವಾ? ಎಂಬುದರ ಬಗ್ಗೆ ಮಾಹಿತಿ ಸಿಗಬೇಕಿದೆ. ಹೋಟೆಲುಗಳ ಸಂಘದಿಂದ ಈ ಬಗ್ಗೆ ಅಧಿಕೃತ ಮಾಹಿತಿ ಈ ವಾರದಲ್ಲಿ ಸಿಗಲಿದೆ.
ಚಿತ್ರೀಕರಣ ಬಂದ್, ಪ್ರತಿಭಟನಾ ಮೆರವಣಿಗೆ
ಕರ್ನಾಟಕದ ಬಂದ್ ಗೆ ಚಿತ್ರರಂಗ ಸಹ ಬೆಂಬಲ ವ್ಯಕ್ತಪಡಿಸಿದೆ. ಹೀಗಾಗಿ ಅಂದು ಯಾವುದೇ ಚಿತ್ರೀಕರಣ, ಚಿತ್ರಪ್ರದರ್ಶನ ಇರುವುದಿಲ್ಲ. ಈ ಬಗ್ಗೆ ಫಿಲಂ ಚೇಂಬರ್ ಮಾಹಿತಿ ನೀಡಿದೆ. ಉಳಿದಂತೆ ಕಲಾವಿದರು, ಕನ್ನಡಪರ ಹೋರಾಟಗಾರರು ಬೆಂಬಲಿಸಿದ್ದಾರೆ.

ಅಂದು ಬೆಂಗಳೂರಿನ ನಾನಾ ಕಡೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿವೆ. ಬೆಂಗಳೂರಿನ ಟೌನ್‌ಹಾಲ್ ನಿಂದ ಸ್ವಾತಂತ್ರ್ಯ ಉದ್ಯಾನವರೆಗೆ ಹೋರಾಟಗಾರರು ಬೃಹತ್ ಮೆರಣಿಗೆ ನಡೆಸಲಿದ್ದಾರೆ. ಬೆಳಗಾವಿ ಘಟನೆಯನ್ನು ಖಂಡಿಸಿ ಧಿಕ್ಕಾರ ಘೋಷಣೆ ಕೂಗಲಿದ್ದಾರೆ. ಈ ದಿನ ಬಂದ್ ಖಚಿತವಾಗಿದ್ದು, ಯಾವುದೇ ಬದಲಾವಣೆ ಇಲ್ಲ ಎಂದು ಕನ್ನಡಪರ ಸಂಘಟನೆಗಳು ತಿಳಿಸಿವೆ.
ಅಖಂಡ ಕರ್ನಾಟಕ ಬಂದ್ ದಿವಸ ಮೇಕೆದಾಟು ಯೋಜನೆ ಜಾರಿಗಾಗಿ ಅತ್ತಿಬೆಲೆ ಬಂದ್, ಹೊಸಕೋಟೆ ಟೋಲ್ ಬಂದ್, ಕನ್ನಡ ಭಾಷೆ, ನೆಲ ವಿಚಾರವಾಗಿ, ಗಡಿ ವಿಚಾರವಾಗಿ ವಿವಿಧ ಭಾಗದಲ್ಲಿ ಗಡಿ ಬಂದ್ ಮಾಡಲಾಗುತ್ತಿದೆ.
ಇತ್ತ ಬೆಳಗಾವಿಯಲ್ಲಿ ಮರಾಠಿ ಪುಂಡರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದರು. ಕಳೆದ ತಿಂಗಳು ನಡೆದ ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಬಸ್‌ಗಳಿಗೂ ಹಾನಿ ಮಾಡಿದಲ್ಲದೇ, ಬಸ್‌ಗಳಿಗೆ ಮಸಿ ಬಳಿದಿದ್ದರು. ಕರ್ನಾಟಕದಲ್ಲಿ ಜೈ ಮಹಾರಾಷ್ಟ್ರ ಎಂಬೆಲ್ಲ ಬರೆದು ಪುಂಡಾಟಿಕೆ ಮರೆದಿದ್ದರು. ಇದರಿಂದಾಗಿ ಬೆಳಗಾವಿಯಲ್ಲಿ ಕನ್ನಡಿಗರ ಆಕ್ರೋಶ ಭುಗಿಲೆದ್ದಿತ್ತು.
ಕರ್ನಾಟಕ ಮತ್ತು ಮಹಾರಾಷ್ಟ್ರದ ಎರಡು ಕಡೆಗೂ ಸಾರ್ವಜನಿಕ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಬೆಳಗಾವಿಯಲ್ಲಿ ಕರ್ನಾಟಕ ಬಸ್‌ಗಳಿಗೆ ಬಣ್ಣ ಬಳಿದರೆ, ಅದಕ್ಕೆ ವಿರುದ್ಧ ಕಲಬುರಗಿ, ಧಾರವಾಡ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಮಹಾರಾಷ್ಟ್ರ ಬಸ್ ಗಳನ್ನು ತಡೆದು ಕನ್ನಡಿಗರು ಮಸಿ ಬಳಿದು. ಅವರ ಸಿಬ್ಬಂದಿ ಬಳಿ ಜೈ ಕರ್ನಾಟಕ ಎಂದು ಹೇಳಿಸಿದ್ದರು.
ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ, ತೀರದ ಆಕ್ರೋಶ
ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬೆಳಗಾವಿಯಲ್ಲಿ ಪ್ರತ್ಯೇಕ ಹೋರಾಟಗಳು ನಡೆದವು. ಬೃಹತ್ ಮೆರವಣಿಗೆ ನಡೆದವು. ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕನ್ನಡಿಗರನ್ನು ಪದೇ ಪದೇ ಕೆಣಕಿದರೆ ಸುಮ್ಮನಿರುವುದಿಲ್ಲ. ಬೆಳಗಾವಿ, ಗಡಿ ಸಮಸ್ಯೆ, ಭಾಷೆ ಸಮಸ್ಯೆ ಮೀರಿ ಇದೀಗ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಕನ್ನಡಪರ ಸಂಘಟನೆಗಳು, ಕಾರ್ಯಕರ್ತರು ಕಿಡಿ ಕಾರಿದ್ದರು. ಸರ್ಕಾರ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಮಹರಾಷ್ಟ್ರದವರು ಉಪಟಳ ಹೆಚ್ಚಾಗುತ್ತಿದ್ದಂತೆ ಕನ್ನಡಪರ ಚಳವಳಿಗಾರ ವಾಟಾಳ್ ನಾಗರಾಜ್ ಅವರು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದರು. ಆದರೆ ಎಲ್ಲ ಸಂಘಟನೆಗಳು ಬೆಂಬಲಿಸುತ್ತವಾ?, ಕಳೆದ ಬಾರಿ ನೀರಸ ಪ್ರತಿಕ್ರಿಯೆ ಉಂಟಾಗಿತ್ತು. ಇದೀಗ ಎಲ್ಲ ಸಂಘಟನೆಗಳು ಒಂದಾಗುತ್ತವಾ ಎಂಬ ಅನುಮಾನ ಎದ್ದಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ವಾಟಾಳ್ ನಾಗಾರಾಜ್ ಅವರು, ಎಲ್ಲ ಸಂಘಟನೆಗಳು ಸದಸ್ಯರು, ಮುಖಂಡರು, ಕನ್ನಡಪರ ಹೋರಾಟಗಾರರನ್ನು ಒಳಗೊಂಡಂತೆ ಸಭೆ ನಡೆಸಲಾಗಿದೆ. ಅವರ ಅಭಿಪ್ರಾಯ ಕೇಳಲಾಗಿದೆ. ಯಾರನ್ನು ಕಡೆಗಣಿಸಿದೇ ಒಟ್ಟಾಗಿ ಕರ್ನಾಟಕ ಬಂದ್ ಮಾಡಲು ಮುಂದಾಗಿದ್ದೇವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಮಾರ್ಚ್ 22ರಂದು ಬಂದ್ ನಡೆಯುವುದು ಖಚಿತ ಎಂದು ಅವರು ತಿಳಿಸಿದ್ದಾರೆ.
ಬಂದ್‌ಗೆ ಎಲ್ಲರೂ ಕೆ ಜೋಡಿಸಲು ಮನವಿ
ಕರ್ನಾಟಕ ಬಂದ್ ಪ್ರಯುಕ್ತ ವಾಟಾಳ್ ನಾಗಾರಾಜ್ ಅವರು ಮೇಲಿಂದ್ ಮೇಲೆ ಸರಣಿ ಸಭೆ ನಡೆಸಿದ್ದಾರೆ. ನಿರಂತರವಾಗಿ ಸಂಘಟನೆಗಳು, ಕನ್ನಡ ಕಾರ್ಯಕರ್ತರ ಸಂಪರ್ಕದಲ್ಲಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ನೇರವಾಗಿ ಅಲ್ಲದೇ ಪರೋಕ್ಷವಾಗಿ ಸಪೋರ್ಟ್ ಮಾಡಿದ್ದಾರೆ. ಇದಕ್ಕೆ ಪೊಲೀಸ್ ಯಾವುದೇ ತೊಂದರೆ ಇಲ್ಲ. ಎಲ್ಲರು ಕನ್ನಡ ನೆಲ, ಜಲ, ಗಡಿ ಪರವಾಗಿ, ನೆರೆ ರಾಜ್ಯದವರು ದೌರ್ಜನ್ಯ, ದರ್ಪದ ವಿರುದ್ಧ ಒಂದಾಗಬೇಕು. ಎಲ್ಲರು ಕೈ ಜೋಡಿಸಿ ಬಂದ್ ಯಶಸ್ವಿಯಾಗಬೇಕು ಎಂದು ಕೋರಿದ್ದಾರೆ.












Click it and Unblock the Notifications